ಮುತ್ತಯ್ಯ ಮುರಳೀಧರನ್‌ಗೆ ಹಾಲ್ ಆಫ್ ಫೇಮ್ ಗೌರವ

Update: 2017-04-20 17:29 GMT

ಕೊಲಂಬೊ, ಎ.20: ಇಂಗ್ಲೆಂಡ್ ಹಾಗೂ ವೇಲ್ಸ್‌ನಲ್ಲಿ ಜೂನ್‌ನಲ್ಲಿ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿಯ ವೇಳೆ ಸ್ಪಿನ್ ಲೆಜಂಡ್ ಮುತ್ತಯ್ಯ ಮುರಳೀಧರನ್ ಐಸಿಸಿ ಹಾಲ್ ಆಫ್ ಫೇಮ್ ಗೌರವಕ್ಕೆ ಪಾತ್ರರಾಗಲಿದ್ದಾರೆ. ಈ ಗೌರವಕ್ಕೆ ಪಾತ್ರವಾಗುತ್ತಿರುವ ದೇಶದ ಮೊದಲ ಆಟಗಾರ ಎಂದು ಶ್ರೀಲಂಕಾ ಕ್ರಿಕೆಟ್ ಮಂಡಳಿ(ಎಸ್‌ಎಲ್‌ಸಿ) ಘೋಷಿಸಿದೆ.

 ‘‘ಮುರಳಿ ಉನ್ನತ ಗೌರವಕ್ಕೆ ಪಾತ್ರವಾಗುತ್ತಿರುವುದಕ್ಕೆ ನಮಗೆ ಅತೀವ ಹೆಮ್ಮೆಯಾಗುತ್ತಿದೆ. ಅವರ ಬಗ್ಗೆ ನಮಗೆಲ್ಲರಿಗೂ ಅಪಾರ ಗೌರವವಿದ್ದು ಅವರು ಶ್ರೀಲಂಕಾ ಕ್ರಿಕೆಟ್‌ಗೆ ದೊಡ್ಡ ಕಾಣಿಕೆ ನೀಡಿದ್ದಾರೆ’’ ಎಂದು ಶ್ರೀಲಂಕಾ ಕ್ರಿಕೆಟ್ ಸಿಇಒ ಅಶ್ಲೇ ಡಿಸಿಲ್ವಾ ಹೇಳಿದ್ದಾರೆ.

ಆಧುನಿಕ ಯುಗದ ಶ್ರೇಷ್ಠ ಬೌಲರ್ ಆಗಿರುವ ಮುರಳೀಧರನ್ ಶ್ರೀಲಂಕಾ ತಂಡ ಟೆಸ್ಟ್ ಹಾಗೂ ಏಕದಿನ ಕ್ರಿಕೆಟ್‌ನಲ್ಲಿ ಸ್ಪರ್ಧಾತ್ಮಕ ತಂಡವಾಗಿ ಬೆಳೆಯಲು ನೆರವಾಗಿದ್ದಾರೆ. ಮುರಳಿ 2011ರಲ್ಲಿ ವಿಶ್ವಕಪ್ ಫೈನಲ್‌ನಲ್ಲಿ ಕೊನೆಯ ಅಂತಾರಾಷ್ಟ್ರೀಯ ಪಂದ್ಯ ಆಡಿದ್ದರು.

ಟೆಸ್ಟ್‌ನಲ್ಲಿ 800 ವಿಕೆಟ್, ಏಕದಿನದಲ್ಲಿ 534 ವಿಕೆಟ್ ಹಾಗೂ 12 ಟ್ವೆಂಟಿ-20ಯಲ್ಲಿ 13 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಶ್ರೀಲಂಕಾ ತಂಡ 1993 ರಿಂದ 2011ರ ತನಕ ಏಕದಿನ ಕ್ರಿಕೆಟ್‌ನಲ್ಲಿ ಯಶಸ್ಸು ಸಾಧಿಸಲು ಮುರಳೀಧರನ್ ದೊಡ್ಡ ಪಾತ್ರವಹಿಸಿದ್ದರು. 1996ರ ವಿಶ್ವಕಪ್ ವಿಜೇತ ಶ್ರೀಲಂಕಾ ತಂಡದ ಸದಸ್ಯರಾಗಿದ್ದ ಮುರಳೀಧರನ್ 2002ರಲ್ಲಿ ಭಾರತದೊಂದಿಗೆ ಐಸಿಸಿ ಚಾಂಪಿಯನ್ಸ್ ಟ್ರೋಫಿ ಹಂಚಿಕೊಂಡಿದ್ದ ಶ್ರೀಲಂಕಾ ತಂಡದ ಸದಸ್ಯರಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News