ಫ್ರೆಂಚ್ ಓಪನ್‌ನಲ್ಲಿ ಶರಪೋವಾ: ಮೇ 15ಕ್ಕೆ ನಿರ್ಧಾರ

Update: 2017-04-20 17:34 GMT

ಪ್ಯಾರಿಸ್, ಎ.20: ರಶ್ಯದ ಟೆನಿಸ್ ಆಟಗಾರ್ತಿ ಮರಿಯಾ ಶರಪೋವಾ ಫ್ರೆಂಚ್ ಓಪನ್‌ನಲ್ಲಿ ಸ್ಪರ್ಧಿಸುತ್ತಾರೋ, ಇಲ್ಲವೋ ಎನ್ನುವುದು ಮೇ 15 ರಂದು ಖಚಿತವಾಗಲಿದೆ.

 ಉದ್ದೀಪನಾ ಮದ್ದು ಸೇವನೆ ಪ್ರಕರಣದಲ್ಲಿ 15 ತಿಂಗಳ ನಿಷೇಧದ ಶಿಕ್ಷೆ ಅನುಭವಿಸಿರುವ ಶರಪೋವಾ ಫ್ರೆಂಚ್ ಓಪನ್‌ನಲ್ಲಿ ಭಾಗವಹಿಸುವ ಸಾಧ್ಯತೆಯಿದೆ. ಶರಪೋವಾ ಮುಂದಿನ ವಾರ ನಡೆಯಲಿರುವ ಡಬ್ಲ್ಯುಟಿಎ ಸ್ಟಟ್‌ಗರ್ಟ್ ಗ್ರಾಂಡ್‌ಪ್ರಿಯಲ್ಲಿ ಭಾಗವಹಿಸುವ ಮೂಲಕ ಸಕ್ರಿಯ ಟೆನಿಸ್‌ಗೆ ವಾಪಸಾಗಲಿದ್ದಾರೆ. ಸ್ಟಟ್‌ಗರ್ಟ್ ಶರಪೋವಾಗೆ ವೈಲ್ಡ್‌ಕಾರ್ಡ್ ಪ್ರವೇಶ ನೀಡಿದೆ. ಶರಪೋವಾಗೆ ಮ್ಯಾಡ್ರಿಡ್ ಹಾಗೂ ರೋಮ್‌ನ ಆವೆಮಣ್ಣಿನ ಟೂರ್ನಿಯಲ್ಲಿ ಆಡಲು ಆಹ್ವಾನ ನೀಡಲಾಗಿದೆ.

ಗ್ರಾನ್‌ಸ್ಲಾಮ್ ಟೂರ್ನಿಗಾಗಿ ನಡೆಯುವ ಅರ್ಹತಾ ಸುತ್ತಿನ ಪಂದ್ಯ ಆರಂಭಕ್ಕೆ ಒಂದು ವಾರ ಬಾಕಿ ಇರುವಾಗಲೇ ಶರಪೋವಾ ಫ್ರೆಂಚ್ ಓಪನ್‌ಗೆ ವೈರ್ಲ್ಡ್‌ಕಾರ್ಡ್ ಪಡೆಯುತ್ತಾರೋ, ಇಲ್ಲವೋ ಎಂದು ಖಚಿತವಾಗಲಿದೆ.

ಒಂದು ವೇಳೆ ಶರಪೋವಾ ಫ್ರೆಂಚ್ ಓಪನ್‌ನಿಂದ ವಂಚಿತರಾದರೆ, ಮಹಿಳೆಯರ ವಿಭಾಗದಲ್ಲಿ ಇಬ್ಬರು ಆಟಗಾರ್ತಿಯರ ಅನುಪಸ್ಥಿತಿ ಕಾಡಲಿದೆ. ವಿಶ್ವದ ನಂ.1 ಆಟಗಾರ್ತಿ ಸೆರೆನಾ ವಿಲಿಯಮ್ಸ್ ಈಗಾಗಲೇ ವೈಯಕ್ತಿಕ ಕಾರಣದಿಂದ ಟೂರ್ನಿಯಿಂದ ಹಿಂದೆ ಸರಿದಿದ್ದಾರೆ.

2016ರ ಆಸ್ಟ್ರೇಲಿಯನ್ ಓಪನ್‌ನಲ್ಲಿ ನಿಷೇಧೀತ ಮೆಲ್ಡೊಡಿಯಂ ಮದ್ದು ಸೇವಿಸಿದ ಹಿನ್ನೆಲೆಯಲ್ಲಿ ಐದು ಬಾರಿ ಗ್ರಾನ್‌ಸ್ಲಾಮ್ ಚಾಂಪಿಯನ್ ಶರಪೋವಾಗೆ ಅಂತಾರಾಷ್ಟ್ರೀಯ ಟೆನಿಸ್ ಸಂಸ್ಥೆ(ಐಟಿಎಫ್) ಎರಡು ವರ್ಷಗಳ ಕಾಲ ನಿಷೇಧ ಹೇರಿತ್ತು. ಆನಂತರ ನಿಷೇಧದ ಅವಧಿಯನ್ನು 15 ತಿಂಗಳಿಗೆ ಕಡಿತಗೊಳಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News