ಲಯನ್ಸ್ ಮೇಲೆ ಸವಾರಿಗೆ ಕೋಲ್ಕತಾ ಸಜ್ಜು

Update: 2017-04-20 17:39 GMT

ಕೋಲ್ಕತಾ, ಎ.20: ಅಂಕಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿರುವ ಕೋಲ್ಕತಾ ನೈಟ್ ರೈಡರ್ಸ್ ತಂಡ ಸತತ ಸೋಲಿನಿಂದ ಕಂಗೆಟ್ಟಿರುವ ಗುಜರಾತ್ ಲಯನ್ಸ್ ತಂಡವನ್ನು ಶುಕ್ರವಾರ ಇಲ್ಲಿ ನಡೆಯಲಿರುವ ಐಪಿಎಲ್ ಪಂದ್ಯದಲ್ಲಿ ಮುಖಾಮುಖಿಯಾಗಲಿದೆ.

ಕೆಕೆಆರ್ ತಂಡ ಹ್ಯಾಟ್ರಿಕ್ ಗೆಲುವು ಸೇರಿದಂತೆ 5 ಪಂದ್ಯಗಳಲ್ಲಿ ನಾಲ್ಕು ಪಂದ್ಯಗಳನ್ನು ಗೆದ್ದುಕೊಂಡಿದೆ. ಒಟ್ಟು 8 ಅಂಕ ಗಳಿಸಿ ಅಗ್ರ ಸ್ಥಾನದಲ್ಲಿದೆ. ಕಳೆದ ವರ್ಷ ತನ್ನ ಚೊಚ್ಚಲ ಐಪಿಎಲ್‌ನಲ್ಲಿ ಪ್ಲೇ-ಆಫ್‌ಗೆ ತೇರ್ಗಡೆಯಾಗಿದ್ದ ಗುಜರಾತ್ ಲಯನ್ಸ್ ತಂಡ ಐದು ಪಂದ್ಯಗಳಲ್ಲಿ ಕೇವಲ ಒಂದರಲ್ಲಿ ಜಯ ಸಾಧಿಸಿ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. ಗುಜರಾತ್ ಇನ್ನೊಂದು ಪಂದ್ಯದಲ್ಲಿ ಸೋತರೆ ಪ್ಲೇ-ಆಫ್ ಸ್ಪರ್ಧೆಯಿಂದ ಹೊರಗುಳಿಯುವ ಭೀತಿ ಎದುರಿಸಲಿದೆ.

ಕೆಕೆಆರ್ ತಂಡ ರಾಜ್‌ಕೋಟ್‌ನಲ್ಲಿ ಗುಜರಾತ್ ವಿರುದ್ಧವೇ 10 ವಿಕೆಟ್‌ಗಳ ಜಯಭೇರಿಯೊಂದಿಗೆ ಈವರ್ಷದ ಐಪಿಎಲ್ ಅಭಿಯಾನ ಆರಂಭಿಸಿತ್ತು. 4.75ರ ಎಕಾನಮಿ ರೇಟ್‌ನಲ್ಲಿ ಬೌಲಿಂಗ್ ಮಾಡಿರುವ ಸುನೀಲ್ ನರೇನ್ ಕೆಕೆಆರ್‌ನ ಹ್ಯಾಟ್ರಿಕ್ ಗೆಲುವಿಗೆ ನೆರವಾಗಿದ್ದರು. ರಾಬಿನ್ ಉತ್ತಪ್ಪ, ಯೂಸುಫ್ ಪಠಾಣ್ ಹಾಗೂ ಮನೀಷ್ ಪಾಂಡೆ ಅರ್ಧಶತಕ ಸಿಡಿಸಿ ತಂಡದ ಗೆಲುವಿಗೆ ನೆರವಾಗಿದ್ದಾರೆ. ನಾಯಕ ಗೌತಮ್ ಗಂಭೀರ್ ಉತ್ತಮ ಪ್ರದರ್ಶನ ಮುಂದುವರಿಸಿದ್ದಾರೆ.

ಮತ್ತೊಂದೆಡೆ, ಗುಜರಾತ್ ತಂಡ ಪಂದ್ಯ ಗೆಲ್ಲಬಲ್ಲ ಅಂತಿಮ 11ರ ಬಳಗವನ್ನು ಆಯ್ಕೆ ಮಾಡಲು ಪರದಾಟ ನಡೆಸುತ್ತಿದೆ. ಗುಜರಾತ್ ತಂಡ ನಾಲ್ವರು ವಿದೇಶಿ ಆಟಗಾರರ ಪ್ರದರ್ಶನವನ್ನೇ ನೆಚ್ಚಿಕೊಂಡಿದೆ. ಬೌಲರ್ ಮುನಾಫ್ ಪಟೇಲ್, ಪ್ರವೀಣ್‌ಕುಮಾರ್‌ಗೆ ಅವಕಾಶ ನೀಡಿದರೂ ಫಲಕಾರಿಯಾಗಲಿಲ್ಲ. ಗುಜರಾತ್ ತಂಡ ರವೀಂದ್ರ ಜಡೇಜರ ಮೇಲೆ ವಿಶ್ವಾಸವಿರಿಸಿದೆ. ಆದರೆ, ಅವರು ಈತನಕ 131 ರನ್ ನೀಡಿ 1 ವಿಕೆಟ್ ಪಡೆದಿದ್ದಾರೆ. ಗುಜರಾತ್ ಸ್ಪಿನ್ನರ್‌ಗಳ ಪ್ರದರ್ಶನವೂ ನಿರಾಶಾದಾಯಕವಾಗಿದೆ.

ವಾತಾವರಣ: ಮೋಡಿ ಕವಿದ ವಾತಾವರಣದಿದ್ದು, 20 ಸೆಲ್ಸಿಯಸ್ ಉಷ್ಣಾಂಶವಿದೆ.

ಟೀಮ್ ನ್ಯೂಸ್: ಕೆಕೆಆರ್: ಕೆಕೆಆರ್‌ನ 5ನೆ ಪಂದ್ಯದಲ್ಲಿ ಆಡುವ ಅವಕಾಶ ಪಡೆದಿದ್ದ ಕೌಲ್ಟರ್-ನೀಲ್ ಅವರು ಟ್ರೆಂಟ್ ಬೌಲ್ಟ್‌ಗೆ ಕದ ಮುಚ್ಚಿದ್ದಾರೆ. ಕ್ರಿಸ್ ಲಿನ್ ಭುಜನೋವಿಗೆ ತುತ್ತಾದ ಬಳಿಕ ನರೇನ್ 2 ಪಂದ್ಯಗಳಲ್ಲಿ ಇನಿಂಗ್ಸ್ ಆರಂಭಿಸಿದ್ದರು. ಮತ್ತೊಂದು ಪಂದ್ಯದಲ್ಲಿ ಗ್ರಾಂಡ್‌ಹೊಮ್ ಇನಿಂಗ್ಸ್ ಆರಂಭಿಸಿದ್ದರು. ಕೆಕೆಆರ್ ಮುಂದಿನ ಪಂದ್ಯದಲ್ಲಿ ಗಂಭೀರ್‌ರೊಂದಿಗೆ ಉತ್ತಪ್ಪರನ್ನು ಕಣಕ್ಕಿಳಿಸುವ ಸಾಧ್ಯತೆಯಿದೆ. ಗ್ರಾಂಡ್‌ಹೊಮ್ ಬದಲಿಗೆ ಶಾಕಿಬ್ ಅಲ್ ಹಸನ್‌ಗೆ ಅವಕಾಶ ಸಿಗಬಹುದು. ಸೂರ್ಯಕುಮಾರ್ ಬದಲಿಗೆ ಇಶಾಂಕ್ ಜಗ್ಗಿ ಅವಕಾಶ ಗಿಟ್ಟಿಸಿಕೊಳ್ಳಬಹುದು.

ಗುಜರಾತ್ ಲಯನ್ಸ್: ಡ್ವೇಯ್ನ್ ಬ್ರಾವೊ ಅತಿ ಶೀಘ್ರವೇ ತಂಡಕ್ಕೆ ವಾಪಸಾಗಲಿದ್ದಾರೆ. ಫಾಕ್ನರ್ 11ರ ಬಳಗದಲ್ಲಿ ಸ್ಥಾನ ಪಡೆಯುವುದು ನಿಶ್ಚಿತ. ಡರೆನ್ ಸ್ಮಿತ್ ಕಳೆದೆರಡು ಪಂದ್ಯಗಳಲ್ಲಿ ವಿಫಲವಾಗಿರುವ ಕಾರಣ ಆ್ಯರೊನ್ ಫಿಂಚ್ ಅಥವಾ ಜೇಸನ್ ರಾಯ್ ಭಡ್ತಿ ಪಡೆಯಬಹುದು.

ಅಂಕಿ-ಅಂಶ:

*ಟೂರ್ನಿಯಲ್ಲಿ ಈವರ್ಷ ಗುಜರಾತ್ ತಂಡ ಕಳಪೆ ಪ್ರದರ್ಶನ ನೀಡಿದ್ದರೂ ಬ್ರೆಂಡನ್ ಮೆಕಲಮ್ ಟೂರ್ನಿಯಲ್ಲಿ ಎರಡನೆ ಗರಿಷ್ಠ ಮೊತ್ತ(225) ಗಳಿಸಿದ್ದಾರೆ.

*ಒಟ್ಟು 221 ರನ್ ಗಳಿಸಿರುವ ಮನೀಷ್ ಪಾಂಡೆ ಮೂರನೆ ಸ್ಥಾನದಲ್ಲಿದ್ದಾರೆ.

*ಐದು ಪಂದ್ಯಗಳ ಬಳಿಕ ಸುನೀಲ್ ನರೇನ್ ಎಕಾನಮಿ ರೇಟ್ 5.60. ಇದು ಈವರ್ಷದ ಐಪಿಎಲ್‌ನಲ್ಲಿ ಬೌಲರ್‌ನ ಶ್ರೇಷ್ಠ ಪ್ರದರ್ಶನವಾಗಿದೆ.

ಪಂದ್ಯದ ಸಮಯ: ರಾತ್ರಿ: 8:00

ಇಂದಿನ ಪಂದ್ಯ

ಕೋಲ್ಕತಾ ನೈಟ್ ರೈಡರ್ಸ್-ಗುಜರಾತ್ ಲಯನ್ಸ್

ಸ್ಥಳ: ಈಡನ್‌ಗಾರ್ಡನ್ಸ್, ಕೋಲ್ಕತಾ

ಸಮಯ: ರಾತ್ರಿ 8:00

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News