ಮೊದಲ ಪಂದ್ಯದಲ್ಲೆ ಗಮನ ಸೆಳೆದ ಸಿರಾಜ್

Update: 2017-04-20 18:08 GMT

ಹೈದರಾಬಾದ್, ಎ.20: ಆಟೋ ಚಾಲಕನೊಬ್ಬನ ಮಗ 23ರ ಹರೆಯದ ವೇಗದ ಬೌಲರ್ ಮುಹಮ್ಮದ್ ಸಿರಾಜ್ ಬುಧವಾರ ಇಲ್ಲಿ ನಡೆದ ಡೆಲ್ಲಿ ಡೇರ್ ಡೆವಿಲ್ಸ್ ವಿರುದ್ಧದ ಐಪಿಎಲ್ ಪಂದ್ಯದಲ್ಲಿ ಮೊದಲ ಬಾರಿ ಆಡುವ ಅವಕಾಶ ಪಡೆದರು.

ತವರು ಪ್ರೇಕ್ಷಕರ ಸಮ್ಮುಖದಲ್ಲಿ ಐಪಿಎಲ್ ಟೂರ್ನಿಗೆ ಪಾದಾರ್ಪಣೆ ಮಾಡಿದ ಸಿರಾಜ್ ವಿಶ್ವ ಶ್ರೇಷ್ಠ ಆಟಗಾರರೊಂದಿಗೆ ಆಡುವ ಮೂಲಕ ದೀರ್ಘಕಾಲದ ಕನಸೊಂದನ್ನು ನನಸಾಗಿಸಿಕೊಂಡರು.

  ಸಿರಾಜ್ ಈವರ್ಷದ ಐಪಿಎಲ್ ಆಟಗಾರರ ಹರಾಜಿನಲ್ಲಿ 2.60 ಕೋ.ರೂ.ಗೆ ಹೈದರಾಬಾದ್ ತಂಡದ ಪಾಲಾಗಿದ್ದರು. ಆಗ ಬಂಜಾರ ಹಿಲ್ಸ್‌ನಲ್ಲಿರುವ ಕೆಳ-ಮಧ್ಯಮ ದರ್ಜೆಯ ಸಿರಾಜ್ ಮನೆಯತ್ತ ಮಾಧ್ಯಮದವರು ಧಾವಿಸಿದ್ದರು. ತಂದೆ ಗೌಸ್ ಮುಹಮ್ಮದ್ ತಮ್ಮ ಸಂತೋಷವನ್ನು ಮಾಧ್ಯಮದೊಂದಿಗೆ ಹಂಚಿಕೊಂಡರು.

ಐಪಿಎಲ್ ಆರಂಭವಾಗಿ ಎರಡು ವಾರ ಕಳೆದ ಬಳಿಕ ಸಿರಾಜ್‌ಗೆ ಕೊನೆಗೂ ತವರು ನೆಲದಲ್ಲಿ ಆಡುವ ಅವಕಾಶ ಲಭಿಸಿತ್ತು. ಭುವನೇಶ್ವರ ಕುಮಾರ್‌ರೊಂದಿಗೆ ಬೌಲಿಂಗ್ ದಾಳಿ ಆರಂಭಿಸಿದ ಸಿರಾಜ್ ಅವರು ತಾನೆಸೆದ ಮೊದಲ ಓವರ್‌ನ 5ನೆ ಎಸೆತದಲ್ಲಿ ಡೆಲ್ಲಿಯ ಆರಂಭಿಕ ಆಟಗಾರ ಬಿಲ್ಲಿಂಗ್ಸ್‌ಗೆ ಪೆವಿಲಿಯನ್ ಹಾದಿ ತೋರಿಸಿದ್ದರು. ಇನಿಂಗ್ಸ್‌ನ 14ನೆ ಓವರ್‌ನ ಮೊದಲ ಎಸೆತದಲ್ಲಿ ಡೆಲ್ಲಿಯ ಇನ್ನೊಬ್ಬ ಆರಂಭಿಕ ಆಟಗಾರ ಸಂಜು ಸ್ಯಾಮ್ಸನ್(42) ವಿಕೆಟ್‌ನ್ನು ಉರುಳಿಸಿದರು. 39 ರನ್‌ಗೆ 2 ವಿಕೆಟ್ ಪಡೆದ ಸಿರಾಜ್ ತನ್ನ ಮೊದಲ ಪಂದ್ಯದಲ್ಲೇ ಮಿಂಚಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News