ಐಪಿಎಲ್ 2ನೆ ವಾರದ ಹೀರೋ ಸುನೀಲ್ ನರೇನ್

Update: 2017-04-20 18:12 GMT

 ಹೊಸದಿಲ್ಲಿ, ಎ.20: ‘ಪರ್ಪಲ್ ಕ್ಯಾಪ್’ ಧರಿಸಿರುವ ಭುವನೇಶ್ವರ ಕುಮಾರ್‌ರ ಭರ್ಜರಿ ಬೌಲಿಂಗ್, ಮನನ್ ವೋರಾ ಅವರ ವೀರೋಚಿತ 95 ರನ್, ವಿಂಡೀಸ್‌ನ ಸ್ಯಾಮುಯೆಲ್ ಬದ್ರಿ ಅವರ ‘ಹ್ಯಾಟ್ರಿಕ್’ ವಿಕೆಟ್, ಐಪಿಎಲ್ ಚೊಚ್ಚಲ ಪಂದ್ಯದಲ್ಲಿ ಆ್ಯಂಡ್ರೂ ಟೈ ಐದು ವಿಕೆಟ್ ಗೊಂಚಲು, ಕೀರನ್ ಪೊಲಾರ್ಡ್‌ರ ಮ್ಯಾಚ್ ವಿನ್ನಿಂಗ್ 70 ರನ್ ಹಾಗೂ ಮಿಂಚಿನ ಬ್ಯಾಟಿಂಗ್‌ನೊಂದಿಗೆ ಕ್ರಿಸ್ ಗೇಲ್‌ರಿಂದ ಟ್ವೆಂಟಿ-20 ಕ್ರಿಕೆಟ್‌ನಲ್ಲಿ 10,000 ರನ್. ಇದು ಐಪಿಎಲ್‌ನ ಎರಡನೆ ವಾರದ ಪಂದ್ಯದಲ್ಲಿ (ಎ.13-19)ಕಂಡು ಬಂದ ಹೈಲೈಟ್ಸ್‌ಗಳು.

ಸ್ಪಿನ್ನರ್ ಸುನೀಲ್ ನರೇನ್ ಸ್ಥಿರ ಪ್ರದರ್ಶನದ ಮೂಲಕ ನೀಡಿರುವ ಕಾಣಿಕೆಯಿಂದಾಗಿ ಹ್ಯಾಟ್ರಿಕ್ ಗೆಲುವು ಸಾಧಿಸಿದ್ದ ಕೋಲ್ಕತಾ ನೈಟ್ ರೈಡರ್ಸ್ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೇರಿದೆ. ಹಾಗಾಗಿ ಸುನೀಲ್ ನರೇನ್ ಎರಡನೆ ವಾರದ ಹೀರೋವಾಗಿ ಹೊರಹೊಮ್ಮಿದ್ದಾರೆ.

4.75ರ ಇಕಾನಮಿ ರೇಟ್‌ನಲ್ಲಿ ಮೂರು ಪಂದ್ಯಗಳಲ್ಲಿ 3 ವಿಕೆಟ್‌ಗಳನ್ನು ಕಬಳಿಸಿರುವ ನರೇನ್ ಅವರು ಬ್ಯಾಟಿಂಗ್‌ನಲ್ಲೂ ಮಿಂಚಿದ್ದಾರೆ. ಪಂಜಾಬ್ ವಿರುದ್ಧದ ಪಂದ್ಯದಲ್ಲಿ ನಾಯಕ ಗೌತಮ ಗಂಭೀರ್‌ರೊಂದಿಗೆ ಇನಿಂಗ್ಸ್ ಆರಂಭಿಸಿದ ವಿಂಡೀಸ್‌ನ ನರೇನ್ ಆ ಪಂದ್ಯದಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಪಡೆದಿದ್ದರು.

ಕ್ರಿಸ್ ಲಿನ್ ಅನುಪಸ್ಥಿತಿಯಲ್ಲಿ ಪಿಂಚ್-ಹಿಟ್ಟರ್ ಆಗಿ ಕಣಕ್ಕಿಳಿದಿದ್ದ ನರೇನ್ 18 ಎಸೆತಗಳಲ್ಲಿ 4 ಬೌಂಡರಿ, 3 ಸಿಕ್ಸರ್‌ಗಳ ಸಹಿತ 37 ರನ್ ಗಳಿಸಿ ಕೆಕೆಆರ್ ಮೊದಲ ವಿಕೆಟ್‌ನಲ್ಲಿ 5.4 ಓವರ್‌ಗಳಲ್ಲಿ 76 ರನ್ ಗಳಿಸಲು ನೆರವಾಗಿದ್ದರು.

ನರೇನ್ ಹಾಲಿ ಚಾಂಪಿಯನ್ ಹೈದರಾಬಾದ್ ತಂಡದ ವಿರುದ್ಧ ಗೆಲುವಿಗೆ ಪ್ರಮುಖ ಪಾತ್ರವಹಿಸಿದರು. ಆರಂಭಿಕ ಆಟಗಾರನಾಗಿ 9 ಎಸೆತಗಳಲ್ಲಿ ಕೇವಲ 6 ರನ್ ಗಳಿಸಿ ವಿಫಲವಾಗಿದ್ದ ನರೇನ್ ಬೌಲಿಂಗ್‌ನಲ್ಲಿ ಅಪೂರ್ವ ಪ್ರದರ್ಶನ ನೀಡಿದ್ದರು. 4 ಓವರ್‌ಗಳಲ್ಲಿ 18 ರನ್‌ಗೆ 1 ವಿಕೆಟ್ ಉಡಾಯಿಸಿದ್ದರು. 4 ಓವರ್‌ಗಳಲ್ಲಿ ಕೇವಲ ಒಂದೇ ಬೌಂಡರಿ ಬಿಟ್ಟುಕೊಟ್ಟಿದ್ದ ನರೇನ್ ಕೆಕೆಆರ್ 17 ರನ್‌ನಿಂದ ಗೆಲುವು ಸಾಧಿಸಲು ನೆರವಾಗಿದ್ದರು.

  ಡೆಲ್ಲಿಯ ವಿರುದ್ಧ ನಾಲ್ಕು ವಿಕೆಟ್‌ಗಳ ಜಯ ಸಾಧಿಸಿದ್ದ ಕೆಕೆಆರ್ ತಂಡ ಹ್ಯಾಟ್ರಿಕ್ ಸಾಧಿಸಿತ್ತು. ನರೇನ್ ಮತ್ತೊಮ್ಮೆ ಉತ್ತಮ ಬೌಲಿಂಗ್(4-0-20-1)ನಿಂದ ಗಮನ ಸೆಳೆದಿದ್ದರು. ದಿಲ್ಲಿಯ ಫಿರೋಝ್ ಶಾ ಕೋಟ್ಲಾ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಉತ್ತಪ್ಪ ಕ್ಯಾಚ್ ಕೈಚೆಲ್ಲದೇ ಇರುತ್ತಿದ್ದರೆ ಮತ್ತೊಂದು ವಿಕೆಟ್ ಪಡೆಯಬಹುದಿತ್ತು. ಪವರ್‌ಪ್ಲೇ ವೇಳೆ 2 ಓವರ್ ಬೌಲಿಂಗ್ ಮಾಡಿ ಕೇವಲ 8 ರನ್ ನೀಡಿದ್ದರು. 18ನೆ ಓವರ್‌ನಲ್ಲಿ ಬಿಗ್-ಹಿಟ್ಟರ್ ಆ್ಯಂಜೆಲೊ ಮ್ಯಾಥ್ಯೂಸ್ ವಿಕೆಟ್‌ನ್ನು ಪಡೆದಿದ್ದರು. ಕಳೆದ ಏಳು ದಿನಗಳ ಆಟದಲ್ಲಿ ನರೇನ್ ಅತ್ಯುತ್ತಮ ಪ್ರದರ್ಶನ ನೀಡಿ ಎಲ್ಲರ ಗಮನಸೆಳೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News