ರಾಣಾ, ಬಟ್ಲರ್ ಸಾಹಸ, ಮುಂಬೈಗೆ ಭರ್ಜರಿ ಜಯ

Update: 2017-04-20 18:16 GMT

  ಇಂದೋರ್, ಎ.20: ನಿತೀಶ್ ರಾಣಾ (ಅಜೇಯ 62 ರನ್) ಹಾಗೂ ಜೋಸ್ ಬಟ್ಲರ್(77) ಅರ್ಧಶತಕದ ಬೆಂಬಲದಿಂದ ಮುಂಬೈ ಇಂಡಿಯನ್ಸ್ ತಂಡ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ವಿರುದ್ಧದ 22ನೆ ಐಪಿಎಲ್ ಪಂದ್ಯವನ್ನು 8 ವಿಕೆಟ್‌ಗಳ ಅಂತರದಿಂದ ಗೆದ್ದುಕೊಂಡಿದೆ.

ಇಲ್ಲಿನ ಹೋಳ್ಕರ್ ಸ್ಟೇಡಿಯಂನಲ್ಲಿ ಗುರುವಾರ ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಪಂಜಾಬ್ ತಂಡ ಆರಂಭಿಕ ಆಟಗಾರ ಹಾಶಿಮ್ ಅಮ್ಲ(ಅಜೇಯ 104, 60 ಎಸೆತ, 8 ಬೌಂಡರಿ, 6 ಸಿಕ್ಸರ್ ) ಚುಟುಕು ಪಂದ್ಯದಲ್ಲಿ ಬಾರಿಸಿದ ಚೊಚ್ಚಲ ಶತಕದ ಸಾಹಸದ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್‌ಗಳ ನಷ್ಟಕ್ಕೆ 198 ರನ್ ಕಲೆ ಹಾಕಿತು.

 ಗೆಲ್ಲಲು ಕಠಿಣ ಸವಾಲು ಪಡೆದ ಮುಂಬೈ ಇನ್ನೂ 27 ಎಸೆತಗಳು ಬಾಕಿ ಇರುವಾಗಲೇ 2 ವಿಕೆಟ್‌ಗಳ ನಷ್ಟದಲ್ಲಿ 199 ರನ್ ಗಳಿಸಿತು. 3ನೆ ಕ್ರಮಾಂಕದಲ್ಲಿ ಸತತ 4ನೆ ಬಾರಿ ಅರ್ಧಶತಕ ಸಿಡಿಸಿದ ನಿತೀಶ್ ರಾಣಾ(ಅಜೇಯ 62, 34 ಎಸೆತ, 7 ಸಿಕ್ಸರ್) ತಂಡದ ಗೆಲುವಿನಲ್ಲಿ ಮತ್ತೊಮ್ಮೆ ಮಹತ್ವದ ಕೊಡುಗೆ ನೀಡಿದರು.

ಮೊದಲ ವಿಕೆಟ್‌ಗೆ 81 ರನ್ ಜೊತೆಯಾಟ ನಡೆಸಿದ ನಾಯಕ ಪಾರ್ಥಿವ್ ಪಟೇಲ್(37) ಹಾಗೂ ಜೋಸ್ ಬಟ್ಲರ್(77, 37 ಎಸೆತ, 7 ಬೌಂಡರಿ, 5 ಸಿಕ್ಸರ್) ಮುಂಬೈಗೆ ಭದ್ರ ಬುನಾದಿ ಹಾಕಿಕೊಟ್ಟರು. ಪವರ್‌ಪ್ಲೇ ವೇಳೆ ಮುಂಬೈ ತಂಡ 82 ರನ್ ಕಲೆ ಹಾಕಿತು.

ಪಟೇಲ್ ಔಟಾದ ಬಳಿಕ ಕ್ರೀಸ್‌ಗಿಳಿದ ರಾಣಾ ಸರಣಿಯಲ್ಲಿ ಶ್ರೇಷ್ಠ ಪ್ರದರ್ಶನ ಮುಂದುವರಿಸಿದರು. ಬಟ್ಲರ್‌ರೊಂದಿಗೆ 2ನೆ ವಿಕೆಟ್‌ಗೆ 85 ರನ್ ಸೇರಿಸಿ ತಂಡದ ಚೇಸಿಂಗ್‌ಗೆ ಬಲ ನೀಡಿದರು.

ಬಟ್ಲರ್, ಮೋಹಿತ್ ಶರ್ಮಗೆ ವಿಕೆಟ್ ಒಪ್ಪಿಸಿದ ಬಳಿಕ ಹಾರ್ದಿಕ್ ಪಾಂಡ್ಯರೊಂದಿಗೆ(ಅಜೇಯ 15)ಕೈ ಜೋಡಿಸಿದ ರಾಣಾ 3ನೆ ವಿಕೆಟ್‌ಗೆ ಮುರಿಯದ ಜೊತೆಯಾಟದಲ್ಲಿ 33 ರನ್ ಸೇರಿಸಿ ಮುಂಬೈ ತಂಡ ಗರಿಷ್ಠ ಮೊತ್ರವನ್ನು ಯಶಸ್ವಿಯಾಗಿ ಚೇಸಿಂಗ್ ಮಾಡಲು ನೆರವಾದರು.

 ಪಂಜಾಬ್ ಸತತ 4ನೆ ಪಂದ್ಯದಲ್ಲಿ ಸೋಲು ಕಂಡಿತು. 6ನೆ ಪಂದ್ಯದಲ್ಲಿ 5ನೆ ಗೆಲುವು ಸಾಧಿಸಿ 10 ಅಂಕವನ್ನು ಗಳಿಸಿದ ಮುಂಬೈ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೇರಿದೆ.

ಇದಕ್ಕೆ ಮೊದಲು ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಪಂಜಾಬ್‌ಗೆ ಅಮ್ಲ ಹಾಗೂ ಶಾನ್ ಮಾರ್ಷ್(26) ಮೊದಲ ವಿಕೆಟ್‌ಗೆ 46 ರನ್ ಸೇರಿಸಿ ಸಾಧಾರಣ ಆರಂಭವನ್ನು ನೀಡಿದ್ದರು. ಸಹಾ 11 ರನ್‌ಗೆ ಔಟಾದಾಗ 3ನೆ ವಿಕೆಟ್‌ಗೆ 83 ರನ್ ಜೊತೆಯಾಟ ನಡೆಸಿದ ಅಮ್ಲ-ಮ್ಯಾಕ್ಸ್‌ವೆಲ್ ಜೋಡಿ ತಂಡದ ಮೊತ್ತವನ್ನು 163ಕ್ಕೆ ತಲುಪಿಸಿದರು.
18 ಎಸೆತಗಳಲ್ಲಿ 4 ಬೌಂಡರಿ, 3 ಸಿಕ್ಸರ್‌ಗಳಿರುವ 40 ರನ್ ಗಳಿಸಿದ್ದ ಮ್ಯಾಕ್ಸ್‌ವೆಲ್‌ರನ್ನು ಬುಮ್ರಾ ಕ್ಲೀನ್ ಬೌಲ್ಡ್ ಮಾಡಿದರು.
5ನೆ ವಿಕೆಟ್‌ಗೆ ಅಕ್ಷರ್ ಪಟೇಲ್‌ರೊಂದಿಗೆ ಮುರಿಯದ ಜೊತೆಯಾಟದಲ್ಲಿ 32 ರನ್ ಸೇರಿಸಿದ ಅಮ್ಲ ತಂಡದ ಮೊತ್ತವನ್ನು 200ರ ಗಡಿ ತಲುಪಿಸಿದರು.
ಸಂಕ್ಷಿಪ್ತ ಸ್ಕೋರ್
ಕಿಂಗ್ಸ್ ಇಲೆವೆನ್ ಪಂಜಾಬ್: 20 ಓವರ್‌ಗಳಲ್ಲಿ 198/4

(ಹಾಶಿಮ್ ಅಮ್ಲ ಅಜೇಯ 104, ಮ್ಯಾಕ್ಸ್‌ವೆಲ್ 40, ಮೆಕ್ಲಿನಘನ್ 2-46)
ಮುಂಬೈ ಇಂಡಿಯನ್ಸ್: 15.3 ಓವರ್‌ಗಳಲ್ಲಿ 199/2
(ಜೋಸ್ ಬಟ್ಲರ್ 77, ರಾಣಾ ಅಜೇಯ 62, ಪಟೇಲ್ 37, ಸ್ಟಾನಿಸ್ 1-28)
ಪಂದ್ಯಶ್ರೇಷ್ಠ: ಜೋಸ್ ಬಟ್ಲರ್.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News