ಐಪಿಎಲ್‌ನಲ್ಲಿ ನಿತೀಶ್ ರಾಣಾ ‘ಪ್ರತಾಪ’

Update: 2017-04-21 18:03 GMT

ಹೊಸದಿಲ್ಲಿ, ಎ.21: ಈವರ್ಷದ ಐಪಿಎಲ್ ಆರಂಭಕ್ಕೆ ಮೊದಲು ವಿರಾಟ್ ಕೊಹ್ಲಿ ಹಾಗೂ ಎಬಿಡಿ ವಿಲಿಯರ್ಸ್ ಮೇಲೆ ಎಲ್ಲರ ಕಣ್ಣು ನೆಟ್ಟಿತ್ತು. ಈ ಇಬ್ಬರು ಆಟಗಾರರು ಐಪಿಎಲ್-9ರಲ್ಲಿ ಭರ್ಜರಿ ಪ್ರದರ್ಶನ ನೀಡಿದ್ದರು. ಗಾಯದ ಸಮಸ್ಯೆಯಿಂದಾಗಿ ಕೊಹ್ಲಿ ಹಾಗೂ ಡಿವಿಲಿಯರ್ಸ್ ಟೂರ್ನಿಯ ಆರಂಭಿಕ ಪಂದ್ಯಗಳಲ್ಲಿ ಆಡಿರಲಿಲ್ಲ. ಕೊಹ್ಲಿ-ಡಿವಿಲಿಯರ್ಸ್ ಈತನಕ ಯಾವುದೇ ಮ್ಯಾಜಿಕ್ ಮಾಡಿಲ್ಲದಿದ್ದರೂ ಮುಂಬೈ ಇಂಡಿಯನ್ಸ್ ತಂಡದಲ್ಲಿ ಆಡುತ್ತಿರುವ ದಿಲ್ಲಿಯ ಯುವ ಬ್ಯಾಟ್ಸ್‌ಮನ್ ನಿತೀಶ್ ರಾಣಾ ಎಲ್ಲರ ಗಮನ ತನ್ನತ್ತ ಸೆಳೆಯುತ್ತಿದ್ದಾರೆ.

ರಾಣಾ ಈವರ್ಷದ ರಣಜಿ ಹಾಗೂ ವಿಜಯ್ ಹಝಾರೆ ಟ್ರೋಫಿಯಲ್ಲಿ ಕಳಪೆ ಪ್ರದರ್ಶನ ನೀಡಿದ್ದ ಕಾರಣ ಅವರ ಮೇಲೆ ಹೆಚ್ಚು ನಿರೀಕ್ಷೆಯಿರಲಿಲ್ಲ. ಐಪಿಎಲ್‌ನ ಮೊದಲೆರಡು ವಾರಗಳಲ್ಲಿ ರಾಣಾ ಬ್ಯಾಟಿಂಗ್‌ನ ಮೂಲಕ ಹೊಸ ಅಲೆ ಎಬ್ಬಿಸಿದ್ದಾರೆ. ಇದೇ ಅಲೆಯನ್ನು ಕಾಯ್ದುಕೊಂಡರೆ ಮುಂದಿನ ದಿನಗಳಲ್ಲಿ ಟೀಮ್ ಇಂಡಿಯಾಕ್ಕೆ ಪ್ರವೇಶ ಪಡೆಯಬಹುದು.

ಐಪಿಎಲ್-10ರ ಮೊದಲ ಪಂದ್ಯದಲ್ಲೇ 28 ಎಸೆತಗಳಲ್ಲಿ 34 ರನ್ ಗಳಿಸಿದ್ದರು. ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ರಾಣಾ ತನ್ನ ಪ್ರತಾಪ ತೋರಿಸಿದರು. ಕೆಕೆಆರ್ 7 ವಿಕೆಟ್‌ಗೆ 178 ರನ್ ಗಳಿಸಿತ್ತು. ಕಠಿಣ ಗುರಿ ಪಡೆದಿದ್ದ ಮುಂಬೈ ಆರಂಭಿಕ ಕುಸಿತಕ್ಕೆ ಒಳಗಾಗಿತ್ತು. ಗೆಲುವಿಗೆ 23 ಎಸೆತಗಳಲ್ಲಿ 60 ರನ್ ಅಗತ್ಯವಿತ್ತು. ಆಗ ತಂಡಕ್ಕೆ ಆಸರೆಯಾಗಿದ್ದ ರಾಣಾ ಕೇವಲ 29 ಎಸೆತಗಳಲ್ಲಿ 50 ರನ್ ಸಿಡಿಸಿದರು. ಹಾರ್ದಿಕ್ ಪಾಂಡ್ಯ ಜೊತೆಗೂಡಿ ಕೆಕೆಆರ್ ದಾಳಿಯನ್ನು ಎದುರಿಸಿದ್ದ ರಾಣಾ ಮುಂಬೈಗೆ 4 ವಿಕೆಟ್‌ಗಳ ಗೆಲುವು ತಂದುಕೊಟ್ಟಿದ್ದರು.

ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ರಾಣಾ 36 ಎಸೆತಗಳಲ್ಲಿ 3 ಬೌಂಡರಿ ಹಾಗೂ 2 ಸಿಕ್ಸರ್‌ಗಳಿರುವ 45 ರನ್ ಗಳಿಸಿ ಮುಂಬೈ ರನ್ ಚೇಸಿಂಗ್‌ಗೆ ಬಲ ನೀಡಿದ್ದರು. ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿ ಕೇವಲ 11 ರನ್ ಗಳಿಸಿ ನಿರಾಸೆಗೊಳಿಸಿದ್ದರು. ಆದರೆ, ಗುಜರಾತ್ ಲಯನ್ಸ್ ವಿರುದ್ಧದ ಪಂದ್ಯದಲ್ಲಿ 36 ಎಸೆತಗಳಲ್ಲಿ 53 ರನ್ ಗಳಿಸಿದ್ದ ರಾಣಾ ಮುಂಬೈ ತಂಡ 177 ರನ್ ಚೇಸಿಂಗ್‌ಗೆ ಉತ್ತಮ ಬುನಾದಿ ಹಾಕಿಕೊಟ್ಟಿದ್ದರು.

ಶುಕ್ರವಾರ ನಡೆದ ಐಪಿಎಲ್ ಪಂದ್ಯದಲ್ಲಿ ಪಂಜಾಬ್ ತಂಡ ಹಾಶಿಮ್ ಅಮ್ಲ ಶತಕದ ಬೆಂಬಲದಿಂದ 4 ವಿಕೆಟ್‌ಗೆ 198 ರನ್ ಗಳಿಸಿತ್ತು. ಆಗ ಮತ್ತೊಮ್ಮೆ ಮುಂಬೈಗೆ ಆಸರೆಯಾಗಿದ್ದ ರಾಣಾ 34 ಎಸೆತಗಳಲ್ಲಿ 62 ರನ್ ಗಳಿಸಿದ್ದಲ್ಲದೆ ಇಂಗ್ಲೆಂಡ್‌ನ ಜೋಸ್ ಬಟ್ಲರ್ ಹಾಗೂ ಹಾರ್ದಿಕ್ ಪಾಂಡ್ಯರೊಂದಿಗೆ ನಿರ್ಣಾಯಕ ಜೊತೆಯಾಟ ನಡೆಸಿ ತಂಡಕ್ಕೆ ಭರ್ಜರಿ ಗೆಲುವು ತಂದುಕೊಟ್ಟಿದ್ದರು.

ಟೂರ್ನಿಯಲ್ಲಿ ಒಟ್ಟು 255 ರನ್ ಗಳಿಸಿರುವ ರಾಣಾ ಪ್ರಸ್ತುತ ‘ಆರೆಂಜ್ ಕ್ಯಾಪ್’ನ್ನು ತನ್ನದಾಗಿಸಿಕೊಂಡಿದ್ದಾರೆ. ಒಟ್ಟು 16 ಸಿಕ್ಸರ್‌ಗಳನ್ನು ಸಿಡಿಸಿ ಸಿಕ್ಸರ್ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದ್ದಾರೆ. ಸಚಿನ್ ತೆಂಡುಲ್ಕರ್ ಹಾಗೂ ಮಹೇಲ ಜಯವರ್ಧನೆ ಮಾರ್ಗದರ್ಶನದಲ್ಲಿ ರಾಣಾ ಮುಂಬೈನ ಪ್ರಮುಖ ಬ್ಯಾಟ್ಸ್‌ಮನ್ ಆಗಿ ಹೊರಹೊಮ್ಮಿದ್ದಾರೆ. ರಾಣಾ ಇದೇ ರೀತಿ ಬ್ಯಾಟಿಂಗ್‌ನ್ನು ಮುಂದುವರಿಸಿದರೆ ಮುಂಬರುವ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ತಂಡಕ್ಕೆ ಆಯ್ಕೆಯಾಗಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News