ಚಾಂಪಿಯನ್ಸ್ ಟ್ರೋಫಿಗೆ ರಾಹುಲ್ ಅಲಭ್ಯ

Update: 2017-04-21 18:06 GMT

ಬೆಂಗಳೂರು, ಎ.21: ಪ್ರಸ್ತುತ ನಡೆಯುತ್ತಿರುವ ಐಪಿಎಲ್ ಟೂರ್ನಿಯಿಂದ ಹೊರಗುಳಿದಿರುವ ಭಾರತದ ಆರಂಭಿಕ ಬ್ಯಾಟ್ಸ್‌ಮನ್ ಕೆ.ಎಲ್.ರಾಹುಲ್ ಮುಂಬರುವ ಚಾಂಪಿಯನ್ಸ್ ಟ್ರೋಫಿಯಿಂದಲೂ ಹೊರಗುಳಿಯಲಿದ್ದಾರೆ.

ಇತ್ತೀಚೆಗೆ ನಡೆದಿದ್ದ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ವೇಳೆ ಭುಜನೋವಿಗೆ ಒಳಗಾಗಿದ್ದ 25ರ ಹರೆಯದ ರಾಹುಲ್ ಕಳೆದ ವಾರ ಲಂಡನ್‌ನಲ್ಲಿ ಬಲಭುಜದ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಸಂಪೂರ್ಣ ಚೇತರಿಸಿಕೊಳ್ಳಲು ಎರಡರಿಂದ ಮೂರು ವಾರ ವಿಶ್ರಾಂತಿ ಪಡೆಯಬೇಕೆಂದು ವೈದ್ಯರು ಸಲಹೆ ನೀಡಿದ್ದಾರೆ.

ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಬ್ಯಾಟ್ಸ್‌ಮನ್ ರಾಹುಲ್ ಜೂನ್ 1 ರಿಂದ ಇಂಗ್ಲೆಂಡ್‌ನಲ್ಲಿ ಆರಂಭವಾಗಲಿರುವ ಚಾಂಪಿಯನ್ಸ್ ಟ್ರೋಫಿಗೆ ಮುಂಚಿತವಾಗಿ ಚೇತರಿಸಿಕೊಳ್ಳುವ ಸಾಧ್ಯತೆಯಿಲ್ಲ. ಕಳೆದ ಫೆಬ್ರವರಿಯಲ್ಲಿ ಆಸ್ಟ್ರೇಲಿಯ ವಿರುದ್ಧ ಪುಣೆಯಲ್ಲಿ ಮೊದಲ ಟೆಸ್ಟ್ ಪಂದ್ಯ ಆಡುತ್ತಿದ್ದಾಗ ರಾಹುಲ್‌ಗೆ ಭುಜನೋವು ಕಾಣಿಸಿಕೊಂಡಿತ್ತು.

ಭುಜನೋವಿನ ಹೊರತಾಗಿಯೂ ರಾಹುಲ್ ಟೆಸ್ಟ್ ಸರಣಿಯನ್ನು ಆಡಿದ್ದರು. ಟೆಸ್ಟ್ ಸರಣಿಯಲ್ಲಿ 7 ಇನಿಂಗ್ಸ್‌ಗಳಲ್ಲಿ ಆರು ಅರ್ಧಶತಕಗಳಿರುವ 393 ರನ್ ಗಳಿಸಿ ಟೂರ್ನಿಯಲ್ಲಿ ಎರಡನೆ ಗರಿಷ್ಠ ಸ್ಕೋರ್ ದಾಖಲಿಸಿದ್ದರು.

ರಾಹುಲ್ ಈತನಕ ಭಾರತದ ಪರ ಕೇವಲ 6 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಜನವರಿಯಲ್ಲಿ ನಡೆದಿದ್ದ ಇಂಗ್ಲೆಂಡ್ ವಿರುದ್ಧದ ಎಲ್ಲ ಮೂರು ಪಂದ್ಯಗಳನ್ನು ಆಡಿದ್ದರು.

‘‘ನನಗೆ ಸಂಪೂರ್ಣವಾಗಿ ಚೇತರಿಸಿಕೊಳ್ಳಲು 2-3 ತಿಂಗಳು ಅಗತ್ಯವಿದೆ ಎಂದು ವೈದ್ಯರು ಹೇಳಿದ್ದಾರೆ. ಪ್ರತಿಯೊಬ್ಬರ ದೇಹಸ್ಥಿತಿ ಭಿನ್ನವಾಗಿರುತ್ತದೆ. ನಾನು ಫಿಸಿಯೋಥೆರಪಿ ಆರಂಭಿಸಿದ್ದೇನೆ. ನಾನು ಕಾದು ನೋಡಲು ಬಯಸಿದ್ದೇನೆ. ಆದರೆ, ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾಗವಹಿಸುವ ಅವಕಾಶ ಕ್ಷೀಣಿಸಿದೆ. ನನ್ನ ಭುಜ ಜಾರಿರುವ ಕಾರಣ ಹೆಚ್ಚು ಬ್ಯಾಟಿಂಗ್ ಮಾಡಲು ಸಾಧ್ಯವಾಗುತ್ತಿಲ್ಲ’’ ಎಂದು ರಾಹುಲ್ ಹೇಳಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News