ಭಾರತದ ಮಹಿಳಾ ಕ್ರಿಕೆಟ್ ತಂಡಕ್ಕೆ ತುಷಾರ್ ಕೋಚ್

Update: 2017-04-21 18:12 GMT

ಹೈದರಾಬಾದ್, ಎ.21: ಬರೋಡಾದ ಮಾಜಿ ಬ್ಯಾಟ್ಸ್‌ಮನ್ ತುಷಾರ್ ಅರೋಥೆ ಅವರು ಪೂರ್ಣಿಮಾ ರಾವ್ ಬದಲಿಗೆ ಭಾರತದ ಮಹಿಳಾ ಕ್ರಿಕೆಟ್ ತಂಡದ ಕೋಚ್ ಆಗಿ ನೇಮಕಗೊಂಡಿದ್ದಾರೆ.

2017ರ ವಿಶ್ವಕಪ್‌ಗೆ ನ್ನು ಕೆಲವೇ ಸಮಯವಿರುವಾಗ ಪೂರ್ಣಿಮಾ ರಾವ್‌ರನ್ನು ಕೋಚ್ ಹುದ್ದೆಯಿಂದ ಕೆಳಗಿಳಿಸಲಾಗಿದೆ. ಪೂರ್ಣಿಮಾ ಉತ್ತರಾಧಿಕಾರಿಯಾಗಿರುವ ತುಷಾರ್ 2008 ಹಾಗೂ 2012ರ ನಡುವೆ ಭಾರತದ ಮಹಿಳಾ ತಂಡದ ಫೀಲ್ಡಿಂಗ್ ಹಾಗೂ ಮುಖ್ಯ ಕೋಚ್ ಆಗಿ ಕಾರ್ಯನಿರ್ವಹಿಸಿದ್ದಾರೆ.

   ‘‘ನನಗೆ ಈ ಹಿಂದೆ ಮಹಿಳಾ ತಂಡಕ್ಕೆ ಕೋಚ್ ನೀಡಿರುವ ಅನುಭವವಿದೆ. ಭಾರತ ತಂಡಕ್ಕೆ ಕೋಚ್ ನೀಡುವ ಅವಕಾಶವನ್ನು ತಪ್ಪಿಸಿಕೊಳ್ಳಲು ಬಯಸುವುದಿಲ್ಲ. ಈಗ ತಂಡದಲ್ಲಿ ಯುವ ಪ್ರತಿಭಾವಂತ ಆಟಗಾರ್ತಿಯರಿದ್ದಾರೆ. ವಿಶ್ವಕಪ್‌ಗೆ ಮೊದಲು ತಂಡವನ್ನು ಸಜ್ಜುಗೊಳಿಸುವುದು ನನ್ನ ಮುಂದಿರುವ ದೊಡ್ಡ ಸವಾಲು. ನಮ್ಮ ಬ್ಯಾಟಿಂಗ್ ಹಾಗೂ ಬೌಲಿಂಗ್ ವಿಭಾಗ ಬಲಿಷ್ಠವಾಗಿದೆ. ಆದರೆ, ಇತರ ಅಗ್ರ ತಂಡಗಳಿಗೆ ಹೋಲಿಸಿದರೆ, ಫೀಲ್ಡಿಂಗ್ ಹಾಗೂ ಫಿಟ್‌ನೆಸ್ ಕಳಪೆಯಾಗಿದೆ. ಮುಂಬೈನಲ್ಲಿ ನಡೆಯಲಿರುವ ಶಿಬಿರದಲ್ಲಿ ಈ ಕುರಿತು ಹೆಚ್ಚಿನ ಗಮನ ನೀಡಲಾಗುವುದು’’ ಎಂದು ನೂತನ ಕೋಚ್ ತುಷಾರ್ ಹೇಳಿದ್ದಾರೆ.

  ‘‘ಭಾರತ ತಂಡ ಕಳೆದ ಎರಡು ವರ್ಷಗಳಲ್ಲಿ 8 ಸರಣಿ ಗೆಲ್ಲಲು ಮಾರ್ಗದರ್ಶನ ನೀಡಿದ್ದು, ನಾನೋರ್ವ ಯಶಸ್ವಿ ಕೋಚ್ ಆಗಿದ್ದೇನೆ. ಆದರೆ, ಕ್ರಿಕೆಟ್ ಮಂಡಳಿಯು ಸೌಜನ್ಯಕ್ಕೂ ನನಗೆ ಯಾವುದೇ ಮಾಹಿತಿ ಇಲ್ಲವೇ ಕಾರಣ ನೀಡದೆ ಹುದ್ದೆಯಿಂದ ಕೆಳಗಿಳಿಸಲಾಗಿದೆ. ವಿಶ್ವಕಪ್ ಆರಂಭವಾಗಲು ಕೆಲವೇ ಸಮಯವಿರುವಾಗ ಬಿಸಿಸಿಐ ಇಂತಹ ನಿರ್ಧಾರ ಕೈಗೊಂಡಿರುವುದು ನನಗೆ ಬೇಸರ ಉಂಟು ಮಾಡಿದೆ. ಇಂತಹ ನಿರ್ಧಾರ ಕೈಗೊಂಡಿರುವವರಿಗೆ ದೇಶದ ಬಗ್ಗೆಯಾಗಲಿ, ತಂಡದ ಕುರಿತಾಗಲಿ ಯಾವುದೇ ಕಾಳಜಿ ಇಲ್ಲ. ನಾನು ಸಂಭಾವನೆಯ ಬಗ್ಗೆ ಬೇಡಿಕೆ ಇಡದೇ ಕೊಟ್ಟಷ್ಟು ಪಡೆದಿದ್ದೇನೆ’’ ಎಂದು ಭಾರತ ಕ್ರಿಕೆಟ್ ತಂಡದ ನಿರ್ಗಮಿತ ಮಹಿಳಾ ಕೋಚ್ ಪೂರ್ಣಿಮಾ ರಾವ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News