×
Ad

ನಡಾಲ್ ಸೆಮಿಫೈನಲ್‌ಗೆ, ಜೊಕೊವಿಕ್ ಔಟ್

Update: 2017-04-22 23:05 IST

 ಮೊನಾಕೊ, ಎ.22: ಒಂಭತ್ತು ಬಾರಿಯ ಚಾಂಪಿಯನ್ ರಫೆಲ್ ನಡಾಲ್ ಮೊಂಟೆ ಕಾರ್ಲೊ ಮಾಸ್ಟರ್ಸ್‌ ಟೆನಿಸ್ ಟೂರ್ನಿಯಲ್ಲಿ ಸೆಮಿ ಫೈನಲ್‌ಗೆ ತಲುಪಿದ್ದಾರೆ. ಆದರೆ, ದ್ವಿತೀಯ ಶ್ರೇಯಾಂಕಿತ ನೊವಾಕ್ ಜೊಕೊವಿಕ್ ಹೋರಾಟ ಅಂತ್ಯವಾಗಿದೆ.

 ಶುಕ್ರವಾರ ನಡೆದ ಪುರುಷರ ಸಿಂಗಲ್ಸ್‌ನ ಕ್ವಾರ್ಟರ್ ಫೈನಲ್‌ನಲ್ಲಿ ನಡಾಲ್ ಅರ್ಜೆಂಟೀನದ ಡಿಯಾಗೊ ಸ್ಚೆವಾರ್ಟ್‌ಮನ್‌ರನ್ನು 6-4, 6-4 ನೇರ ಸೆಟ್‌ಗಳಿಂದ ಸೋಲಿಸಿದ್ದಾರೆ.

 ನಡಾಲ್ ಮುಂದಿನ ಸುತ್ತಿನಲ್ಲಿ ಡೇವಿಡ್ ಗಫಿನ್‌ರನ್ನು ಎದುರಿಸಲಿದ್ದಾರೆ. ಗಫಿನ್ ಶುಕ್ರವಾರ ನಡೆದ ಮತ್ತೊಂದು ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಅಗ್ರ ಶ್ರೇಯಾಂಕಿತ ಜೊಕೊವಿಕ್‌ರನ್ನು 6-2, 3-6, 7-5 ಸೆಟ್‌ಗಳ ಅಂತರದಿಂದ ಮಣಿಸಿ ಶಾಕ್ ನೀಡಿದರು.

ಪ್ರತಿಷ್ಠಿತ ಫ್ರೆಂಚ್ ಓಪನ್‌ಗೆ ಪೂರ್ವಭಾವಿ ಟೂರ್ನಿಯಾಗಿರುವ ಮೊಂಟೆ ಕಾರ್ಲೊ ಟೂರ್ನಿಯಲ್ಲಿ ಈಗಾಗಲೇ ವಿಶ್ವದ ನಂ.1 ಆಟಗಾರ ಆ್ಯಂಡಿ ಮರ್ರೆ ಹಾಗೂ ಮೂರನೆ ಶ್ರೇಯಾಂಕಿತ ಸ್ಟಾನ್ ವಾವ್ರಿಂಕ ಸೋತು ಬೇಗನೆ ನಿರ್ಗಮಿಸಿದ್ದಾರೆ. ಇದೀಗ ಜೊಕೊವಿಕ್ ಕ್ವಾರ್ಟರ್‌ಫೈನಲ್‌ನಲ್ಲಿ ಮುಗ್ಗರಿಸುವುದರೊಂದಿಗೆ ಮರ್ರೆ, ವಾವ್ರಿಂಕರನ್ನು ಸೇರಿಕೊಂಡಿದ್ದಾರೆ.

ಬೆಲ್ಜಿಯಂನ 10ನೆ ಶ್ರೇಯಾಂಕದ ಗಫಿನ್ ಈ ಹಿಂದೆ 12 ಬಾರಿಯ ಗ್ರಾನ್‌ಸ್ಲಾಮ್ ಚಾಂಪಿಯನ್ ಜೊಕೊವಿಕ್ ವಿರುದ್ಧ ಆಡಿರುವ ಎಲ್ಲ 5 ಪಂದ್ಯಗಳಲ್ಲೂ ಸೋತಿದ್ದರು. ಇದೀಗ ಸತತ ಸೋಲಿನಿಂದ ಹೊರಬಂದಿದ್ದಾರೆ.

ಅಲ್ಬರ್ಟ್ ರಾಮೊಸ್ ಫೈನಲ್‌ಗೆ

ಮೊನಾಕೊ, ಎ.22: ಮಾಂಟೆ ಕಾರ್ಲೊ ಮಾಸ್ಟರ್ಸ್ ಟೆನಿಸ್ ಟೂರ್ನಿಯಲ್ಲಿ ಅತ್ಯುತ್ತಮ ಪ್ರದರ್ಶನ ಮುಂದುವರಿಸಿದ ಅಲ್ಬರ್ಟ್ ರಾಮೊಸ್-ವಿನೊಲಸ್ ಫೈನಲ್‌ಗೆ ತಲುಪಿದ್ದಾರೆ.

ಇಲ್ಲಿ ಶನಿವಾರ ನಡೆದ ಪುರುಷರ ಸಿಂಗಲ್ಸ್‌ನ ಸೆಮಿ ಫೈನಲ್‌ನಲ್ಲಿ ಅಲ್ಬರ್ಟ್ ರಾಮೊಸ್ ಅವರು ಲುಕಾಸ್ ಪೌಲ್ಲಿ ಅವರನ್ನು 6-3, 5-7, 6-1 ಸೆಟ್‌ಗಳ ಅಂತರದಿಂದ ಮಣಿಸಿದರು.

29ರ ಹರೆಯದ ಅಲ್ಬರ್ಟ್ ರವಿವಾರ ನಡೆಯಲಿರುವ ಫೈನಲ್‌ನಲ್ಲಿ ಮತ್ತೊಂದು ಸೆಮಿಫೈನಲ್‌ನಲ್ಲಿ ಜಯ ಸಾಧಿಸುವ 9 ಬಾರಿಯ ಚಾಂಪಿಯನ್ ನಡಾಲ್ ಅಥವಾ ಬೆಲ್ಜಿಯಂನ ಡೇವಿಡ್ ಗಫಿನ್‌ರನ್ನು ಎದುರಿಸಲಿದ್ದಾರೆ.

3ನೆ ಸುತ್ತಿನಲ್ಲಿ ಆ್ಯಂಡಿ ಮರ್ರೆ ಹಾಗೂ ಕ್ವಾರ್ಟರ್ ಫೈನಲ್‌ನಲ್ಲಿ ಮರಿನ್ ಸಿಲಿಕ್‌ರನ್ನು ಮಣಿಸಿದ್ದ ರಾಮೊಸ್ ಅತ್ಯುತ್ತಮ ಪ್ರದರ್ಶನದಿಂದ ಗಮನ ಸೆಳೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News