ಗುಜರಾತ್ ಲಯನ್ಸ್ಇಂದು ಪಂಜಾಬ್ ಎದುರಾಳಿ

Update: 2017-04-22 17:40 GMT

  ರಾಜ್‌ಕೋಟ್, ಎ.22: ಗುಜರಾತ್ ಲಯನ್ಸ್ ಹಾಗೂ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡಗಳು ರವಿವಾರ ಇಲ್ಲಿ ನಡೆಯಲಿರುವ ಐಪಿಎಲ್‌ನ 26ನೆ ಪಂದ್ಯದಲ್ಲಿ ಸೆಣಸಾಡಲಿವೆ. ಅಸ್ಥಿರ ಪ್ರದರ್ಶನ ನೀಡುತ್ತಿರುವ ಲಯನ್ಸ್ ಬೌಲಿಂಗ್ ವಿಭಾಗ ಬಲಿಷ್ಠ ಬ್ಯಾಟಿಂಗ್ ಬಲವಿರುವ ಪಂಜಾಬ್ ವಿರುದ್ಧ ಒತ್ತಡ ಎದುರಿಸುತ್ತಿದೆ.

ಉಭಯ ತಂಡಗಳಲ್ಲೂ ಸ್ಫೋಟಕ ಬ್ಯಾಟ್ಸ್‌ಮನ್‌ಗಳಿದ್ದಾರೆ. ಆದರೆ ಯಾರೂ ಕೂಡ ಸ್ಥಿರ ಪ್ರದರ್ಶನ ನೀಡುತ್ತಿಲ್ಲ. ಎರಡೂ ತಂಡಗಳ ನಾಯಕರಾದ ಸುರೇಶ್ ರೈನಾ ಹಾಗೂ ಮ್ಯಾಕ್ಸ್‌ವೆಲ್ ಟಾಸ್ ಗೆದ್ದಾಗಲೆಲ್ಲಾ ಫೀಲ್ಡಿಂಗ್‌ನ್ನು ಆಯ್ದುಕೊಂಡಿದ್ದಾರೆ. ಗುಜರಾತ್ ರನ್ ಬೆನ್ನಟ್ಟುವ ಮೂಲಕವೇ 2 ಪಂದ್ಯವನ್ನು ಜಯಿಸಿತ್ತು. ಇದರಲ್ಲಿ ಕೆಕೆಆರ್ ವಿರುದ್ಧದ ಶುಕ್ರವಾರದ ಪಂದ್ಯವೂ ಸೇರಿದೆ.

ಪಂಜಾಬ್ ತಂಡ ಕೂಡ ರನ್ ಚೇಸಿಂಗ್ ಮಾಡಿ ಎರಡು ಪಂದ್ಯವನ್ನು ಗೆದ್ದುಕೊಂಡಿದೆ. ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಸ್ಪಿನ್ನರ್ ರವೀಂದ್ರ ಜಡೇಜ ಮೊದಲಿನ ಲಯಕ್ಕೆ ಮರಳಿದ್ದರು. ರೈನಾ ಕೂಡ ಬೌಲಿಂಗ್‌ನಲ್ಲಿ ಮಿಂಚಿದ್ದರು. ಮತ್ತೊಂದೆಡೆ ಪಂಜಾಬ್ ತಂಡ ಅಕ್ಷರ್ ಪಟೇಲ್‌ರನ್ನು ಹೆಚ್ಚು ನೆಚ್ಚಿಕೊಂಡಿದೆ.

ಮುಂಬೈ ವಿರುದ್ಧದ ಪಂದ್ಯದಲ್ಲಿ ಪಂಜಾಬ್ ಹಾಶಿಮ್ ಅಮ್ಲ ಶತಕದ ಬೆಂಬಲದಿಂದ 198 ರನ್ ಗಳಿಸಿದ್ದರೂ ಬೌಲರ್‌ಗಳ ವೈಫಲ್ಯದಿಂದಾಗಿ ಸೋಲುಂಡಿತ್ತು. ಮುಂಬೈ ತಂಡ 5 ಓವರ್‌ಗಳು ಬಾಕಿ ಇರುವಂತೆಯೇ ರನ್ ಚೇಸಿಂಗ್ ಮಾಡಿತ್ತು. ಗುಜರಾತ್ ತಂಡದಲ್ಲಿ ಬೌಲಿಂಗ್ ವಿಭಾಗ ದುರ್ಬಲವಾಗಿದ್ದು, ಆಟಗಾರರ ಹರಾಜಿನಲ್ಲಿ ಉತ್ತಮ ಬೌಲರ್‌ಗಳನ್ನು ಖರೀದಿಸಲು ಯತ್ನಿಸಿತ್ತು. ಈ ವರ್ಷ ಹರಾಜಿನಲ್ಲಿ ಖರೀದಿಸಲ್ಪಟ್ಟ ಬೌಲರ್‌ಗಳಲ್ಲಿ ಬಾಸಿಲ್ ಥಾಂಪಿ ಹೊರತುಪಡಿಸಿ ಉಳಿದವರು ಆಡುವ 11ರ ಬಳಗದಲ್ಲಿ ಅವಕಾಶ ಪಡೆದಿಲ್ಲ.

ಆರ್‌ಸಿಬಿಗೆ ಕೆಕೆಆರ್ ಸವಾಲು

ಕೋಲ್ಕತಾ, ಎ.22: ಅಂಕಪಟ್ಟಿಯಲ್ಲಿ ಕೆಳ ಸ್ಥಾನದಲ್ಲಿರುವ ಗುಜರಾತ್ ಲಯನ್ಸ್ ವಿರುದ್ಧ ಸೋತು ಆಘಾತ ಅನುಭವಿಸಿರುವ ಕೋಲ್ಕತಾ ನೈಟ್ ರೈಡರ್ಸ್ ತಂಡ ರವಿವಾರ ತವರು ನೆಲದಲ್ಲಿ ನಡೆಯಲಿರುವ ಐಪಿಎಲ್‌ನ 27ನೆ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಎದುರಿಸಲಿದೆ. ಈ ಪಂದ್ಯ ಭಾರತದ ಇಬ್ಬರು ಶ್ರೇಷ್ಠ ಕ್ರಿಕೆಟಿಗರಾದ ಗೌತಮ್ ಗಂಭೀರ್ ಹಾಗೂ ವಿರಾಟ್ ಕೊಹ್ಲಿ ನಡುವಿನ ಸ್ಪರ್ಧೆಯಾಗಿ ಮಾರ್ಪಟ್ಟಿದೆ.

ಕ್ರಿಸ್ ಗೇಲ್ ಫಾರ್ಮ್‌ಗೆ ಮರಳಿದ್ದು ಆರ್‌ಸಿಬಿ ಪಾಳಯದಲ್ಲಿ ಸಮಾಧಾನ ತಂದಿದೆ. ಆದರೆ, ಆರ್‌ಸಿಬಿ 6 ಪಂದ್ಯಗಳ ಪೈಕಿ ಎರಡರಲ್ಲಿ ಜಯ ಸಾಧಿಸಿದೆ. ನಾಕೌಟ್ ಹಂತಕ್ಕೇರಲು ಭಾರೀ ಪ್ರಯತ್ನಪಡಬೇಕಾಗಿದೆ. ಗುಜರಾತ್ ವಿರುದ್ಧದ ಪಂದ್ಯದಲ್ಲಿ ಗೇಲ್ 38 ಎಸೆತಗಳಲ್ಲಿ 77 ರನ್ ಗಳಿಸಿ ಕೊನೆಗೂ ಫಾರ್ಮ್‌ಗೆ ಮರಳಿದ್ದರು. ಕೊಹ್ಲಿಯೊಂದಿಗೆ ಮೊದಲ ವಿಕೆಟ್‌ಗೆ 122 ರನ್ ಸೇರಿಸಿದ್ದ ಗೇಲ್ ಟ್ವೆಂಟಿ-20 ಕ್ರಿಕೆಟ್‌ನಲ್ಲಿ 10,000 ರನ್ ಮೈಲುಗಲ್ಲು ತಲುಪಿದ್ದರು.

ಕೆಕೆಆರ್ ತಂಡ ಗುಜರಾತ್ ವಿರುದ್ಧದ ಪಂದ್ಯದಲ್ಲಿ ಶಾಕಿಬ್ ಅಲ್ ಹಸನ್‌ಗೆ ಅವಕಾಶ ನೀಡಿತ್ತು. ಆದರೆ, ಕಳಪೆ ಬೌಲಿಂಗ್ ಮಾಡಿದ್ದ ಅವರು ನಾಯಕ ಗಂಭೀರ್ ವಿಶ್ವಾಸಕ್ಕೆ ತಕ್ಕ ಪ್ರದರ್ಶನ ನೀಡಿರಲಿಲ್ಲ. ಕೆಕೆಆರ್ ವಿರುದ್ಧ 188 ರನ್ ಗುರಿ ಪಡೆದಿದ್ದ ಲಯನ್ಸ್ ತಂಡ ಇನ್ನೂ 10 ಎಸೆತ ಬಾಕಿ ಇರುವಾಗಲೇ ಜಯಭೇರಿ ಬಾರಿಸಿತ್ತು. ರಾಬಿನ್ ಉತ್ತಪ್ಪರ ದುರ್ಬಲ ವಿಕೆಟ್‌ಕೀಪಿಂಗ್ ಕೆಕೆಆರ್‌ನ ದೊಡ್ಡ ಸಮಸ್ಯೆಯಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News