ವಿರಾಟ್ ಕೊಹ್ಲಿ ಐಪಿಎಲ್ ರನ್ ದಾಖಲೆ ಮುರಿದ ರೈನಾ

Update: 2017-04-22 17:42 GMT

 ಹೊಸದಿಲ್ಲಿ, ಎ.22: ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧದ ಐಪಿಎಲ್ ಪಂದ್ಯದಲ್ಲಿ ಆಕರ್ಷಕ 84 ರನ್ ಗಳಿಸಿದ್ದ ಗುಜರಾತ್ ಲಯನ್ಸ್ ತಂಡದ ನಾಯಕ ಸುರೇಶ್ ರೈನಾ ಟೀಕಾಕಾರರ ಬಾಯಿ ಮುಚ್ಚಿಸಿದ್ದಾರೆ. ಮಾತ್ರವಲ್ಲ ಐಪಿಎಲ್‌ನಲ್ಲಿ ಗರಿಷ್ಠ ಸ್ಕೋರ್ ದಾಖಲಿಸಿದ್ದಾರೆ. ಈ ಮೂಲಕ ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿ ದಾಖಲೆಯನ್ನು ಮುರಿದಿದ್ದಾರೆ.

 ರೈನಾ ಚುಟುಕು ಮಾದರಿ ಪಂದ್ಯದಲ್ಲಿ ಗರಿಷ್ಠ ಸ್ಕೋರ್ ದಾಖಲಿಸಿದ ಭಾರತದ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ. ಎಡಗೈ ಬ್ಯಾಟ್ಸ್‌ಮನ್ ರೈನಾ ಐಪಿಎಲ್‌ನ 149ನೆ ಪಂದ್ಯದಲ್ಲಿ ಒಟ್ಟು 4,267 ರನ್ ಗಳಿಸಿದರು. ಕೊಹ್ಲಿ 134 ಇನಿಂಗ್ಸ್‌ಗಳಲ್ಲಿ 4,234 ರನ್ ಗಳಿಸಿದ್ದರು.

ರೈನಾ ಐಪಿಎಲ್‌ನಲ್ಲಿ ಮಾತ್ರವಲ್ಲ ಟ್ವೆಂಟಿ-20 ಕ್ರಿಕೆಟ್‌ನಲ್ಲಿ 6,673 ರನ್ ಗಳಿಸುವ ಮೂಲಕ ಗರಿಷ್ಠ ರನ್ ಗಳಿಸಿದ ಭಾರತದ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಕೆಕೆಆರ್ ವಿರುದ್ಧ ಶುಕ್ರವಾರ ನಡೆದಿದ್ದ ಪಂದ್ಯದಲ್ಲಿ 3ನೆ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ್ದ ರೈನಾ 46 ಎಸೆತಗಳಲ್ಲಿ 84 ರನ್ ಗಳಿಸಿದ್ದರು.

ಗುಜರಾತ್ 188 ರನ್ ಗುರಿಯನ್ನು ಯಶಸ್ವಿಯಾಗಿ ಬೆನ್ನಟ್ಟಲು ಭದ್ರಬುನಾದಿ ಹಾಕಿಕೊಟ್ಟಿದ್ದರು. ಎದುರಾಳಿ ಬೌಲರ್‌ಗಳನ್ನು ಚೆನ್ನಾಗಿ ಚಚ್ಚಿದ ರೈನಾ 9 ಬೌಂಡರಿ, 4 ಸಿಕ್ಸರ್ ಸಿಡಿಸಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News