ನಿವೃತ್ತಿಯ ನಿರ್ಧಾರ ಅಂತಿಮ: ಯೂನಿಸ್ ಖಾನ್

Update: 2017-04-23 17:16 GMT

ಕರಾಚಿ, ಎ.23: ವೆಸ್ಟ್‌ಇಂಡೀಸ್ ವಿರುದ್ಧದ ಪ್ರವಾಸ ಸರಣಿಯ ಬಳಿಕ ನಿವೃತ್ತಿಯ ನಿರ್ಧಾರವು ಅಂತಿಮವಾಗಿದ್ದು, ಇದರಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಪಾಕಿಸ್ತಾನದ ಖ್ಯಾತ ಕ್ರಿಕೆಟಿಗ ಯೂನಿಸ್ ಖಾನ್ ಸ್ಪಷ್ಟಪಡಿಸಿದ್ದಾರೆ.

ಪಾಕಿಸ್ತಾನದ ಕ್ರಿಕೆಟ್‌ಗೆ ಯೂನಿಸ್ ಖಾನ್ ಸೇವೆಯ ಆವಶ್ಯಕತೆ ಇದೆ. ಈ ಕಾರಣದಿಂದಾಗಿ ಅವರು ತನ್ನ ನಿರ್ಧಾರವನ್ನು ಪುನರ್‌ಪರಿಶೀಸುತ್ತಾರೆ ಎಂಬ ವರದಿಯ ಬಗ್ಗೆ ಸ್ಪಷ್ಟನೆ ನೀಡಿರುವ ಅವರು ‘‘ ನಾನು ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಯ ಪ್ರತಿಯೊಂದು ಇನಿಂಗ್ಸ್‌ಗಳಲ್ಲೂ ಶತಕ ಬಾರಿಸಿದರೂ ನನ್ನ ನಿವೃತ್ತಿಯ ನಿರ್ಧಾರವನ್ನು ಹಿಂಪಡೆಯಲಾರೆ. ನಾನು ಪಾಕಿಸ್ತಾನದ ಪರ ಆಡುತ್ತಿದ್ದೇನೆ. ಭಾರತದ ಪರ ಅಲ್ಲ’’ ಎಂದು ಹೇಳಿದ್ದಾರೆ.

ಯೂನಿಸ್ ಖಾನ್‌ಗೆ ಟೆಸ್ಟ್ ಸರಣಿಯಲ್ಲಿ 10 ಸಾವಿರ ರನ್‌ಗಳ ಮೈಲುಗಲ್ಲನ್ನು ಮುಟ್ಟಲು ಇನ್ನು 23 ರನ್ ಗಳಿಸಬೇಕಾಗಿದೆ. ಈ ಮೊದಲು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಮತ್ತು ಅಭಿಮಾನಿಗಳು ನಿವೃತ್ತಿಯ ನಿರ್ಧಾರ ಪುನರ್ ಪರಿಶೀಲಿಸಲು ಹೇಳಿದರೆ ಆ ನಿಟ್ಟಿನಲ್ಲಿ ಯೋಚಿಸುವುದಾಗಿ ಹೇಳಿದ್ದರು. ಆದರೆ ಇದೀಗ ಅವರು ತನ್ನ ನಿವೃತ್ತಿಯ ನಿರ್ಧಾರದಿಂದ ಹಿಂದೆ ಸರಿಯುವುದಿಲ್ಲ ಎಂದು ಹೇಳಿದ್ದಾರೆ.

ವೆಸ್ಟ್‌ಇಂಡೀಸ್ ವಿರುದ್ಧದ ಪ್ರವಾಸ ಸರಣಿ ಮುಗಿದ ಬೆನ್ನಲ್ಲೇ ಯೂನಿಸ್ ಖಾನ್ ಮತ್ತು ಟೆಸ್ಟ್ ತಂಡದ ನಾಯಕ ಮಿಸ್ಬಾವುಲ್ ಹಕ್ ಸೇವೆಯಿಂದ ಪಾಕಿಸ್ತಾನ ತಂಡ ವಂಚಿತಗೊಳ್ಳಲಿದೆ.

ಮಿಸ್ಬಾವುಲ್ ಹಕ್ ಮೊದಲು ನಿವೃತ್ತಿ ಘೋಷಿಸಿದ್ದರು. ಆನಂತರ ಕೆಲವು ದಿನಗಳ ಬಳಿಕ ಯೂನಿಸ್ ಖಾನ್ ನಿವೃತ್ತಿ ಪ್ರಕಟಿಸಿದ್ದರು.

 ‘‘ ಯೂನಿಸ್ ಖಾನ್ ಅವರ ಸೇವೆ ಪಾಕಿಸ್ತಾನ ಕ್ರಿಕೆಟ್ ತಂಡಕ್ಕೆ ಅಗತ್ಯ. ಅವರು ಇನ್ನೂ ಒಂದು ಅಥವಾ ಎರಡು ವರ್ಷಗಳ ಕಾಲ ಪಾಕಿಸ್ತಾನ ಕ್ರಿಕೆಟ್ ತಂಡದ ಪರ ಆಡುವ ಸಾಮರ್ಥ್ಯ ಹೊಂದಿದ್ದಾರೆ ಎನ್ನುವುದು ನನ್ನ ಅಭಿಪ್ರಾಯವಾಗಿದೆ. ಇದನ್ನು ೆ ಎಲ್ಲರೂ ಒಪ್ಪುತ್ತಾರೆ ಎಂದು ಹೇಳಲು ಸಾಧ್ಯವಿಲ್ಲ. ನಾನು ಆಸ್ಟ್ರೇಲಿಯದಲ್ಲಿ ಪ್ರವಾಸದಲ್ಲಿದ್ದಾಗ ಅವರಲ್ಲಿ ಮಾತಕತೆ ನಡೆಸಿ ತಂಡದಲ್ಲಿ ಮುಂದುವರಿಯುವಂತೆ ಸಲಹೆ ನೀಡಿದ್ದೆ’’ ಎಂದು ಮಿಸ್ಬಾ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News