ವಿಶ್ವ ಮಾಸ್ಟರ್ಸ್‌ ಗೇಮ್ಸ್: ಶತಾಯುಷಿ ಮಾನ್ ಕೌರ್‌ಗೆ ಒಲಿದ ಚಿನ್ನ!

Update: 2017-04-24 17:27 GMT

 ಆಕ್ಲೆಂಡ್, ಎ.24: ಚಂಡೀಗಡ ಮೂಲದ 101 ವಯಸ್ಸಿನ ವಯೋವೃದ್ಧೆ ಮಾನ್‌ಕೌರ್ ವಿಶ್ವ ಮಾಸ್ಟರ್ಸ್‌ ಗೇಮ್ಸ್‌ನಲ್ಲಿ 100 ಮೀ. ಓಟದಲ್ಲಿ ಚಿನ್ನದ ಪದಕ ಜಯಿಸಿ ದಾಖಲೆ ಪುಸ್ತಕಕ್ಕೆ ಸೇರ್ಪಡೆಯಾದರು. ಒಂದು ನಿಮಿಷ 14 ಸೆಕೆಂಡ್‌ನಲ್ಲಿ ಗುರಿ ತಲುಪಿದ ಕೌರ್ ವೃತ್ತಿಜೀವನದಲ್ಲಿ 17ನೆ ಚಿನ್ನದ ಪದಕವನ್ನು ತನ್ನದಾಗಿಸಿಕೊಂಡರು. 2009ರಲ್ಲಿ ಉಸೇನ್ ಬೋಲ್ಟ್ 100 ಮೀ. ಓಟದಲ್ಲಿ 64.42 ಸೆಕೆಂಡ್‌ನಲ್ಲಿ ಗುರಿ ವಿಶ್ವದಾಖಲೆ ನಿರ್ಮಿಸಿದ್ದರು.

  25,000ಕ್ಕೂ ಅಧಿಕ ಸ್ಪರ್ಧಾಳುಗಳು ಭಾಗವಹಿಸಿದ್ದ ವಿಶ್ವ ಮಾಸ್ಟರ್ಸ್‌ ಗೇಮ್ಸ್‌ನಲ್ಲಿ ಮಾನ್ 100 ಹಾಗೂ ಅದಕ್ಕಿಂತ ಹೆಚ್ಚು ವಯೋಮಿತಿಯ ವಿಭಾಗದಲ್ಲಿ ಭಾಗವಹಿಸಿದ್ದ ಏಕೈಕ ಸ್ಪರ್ಧಿಯಾಗಿದ್ದರು. ಹೀಗಾಗಿ ಅವರು ತನ್ನ ಗೆಲುವನ್ನು ಮೊದಲೇ ದೃಢಪಡಿಸಿದ್ದರು.

ಮಾನ್ ಕೌರ್ 8 ವರ್ಷಗಳ ಹಿಂದೆ ಅರ್ಥಾತ್ ತನ್ನ 93ನೆ ವಯಸ್ಸಿನಲ್ಲಿ ಅಥ್ಲೆಟಿಕ್ಸ್‌ನಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದರು.

 ನ್ಯೂಝಿಲೆಂಡ್ ಮಾಧ್ಯಮಗಳಿಂದ ‘ಚಂಡೀಗಡದ ಮಿರಾಕಲ್’ ಎಂದು ಬಣ್ಣಿಸಲ್ಪಟ್ಟಿರುವ ಕೌರ್,‘‘ನಾನು ಓಟದಲ್ಲಿ ಭಾಗವಹಿಸಿ ಆನಂದಪಟ್ಟಿರುವೆ. ನನಗೆ ತುಂಬಾ ಸಂತೋಷವಾಗಿದೆ. ಮತ್ತೊಮ್ಮೆ ಓಟದಲ್ಲಿ ಪಾಲ್ಗೊಳ್ಳುವೆ. ಇದನ್ನು ನಾನು ನಿಲ್ಲಿಸುವುದಿಲ್ಲ’’ ಎಂದು ಹೇಳಿದ್ದಾರೆ.

ಪುತ್ರ ಗುರುದೇವ್ ಸಿಂಗ್ ಒತ್ತಾಸೆಯ ಮೇರೆಗೆ ಮಾನ್ ಕೌರ್ ಅಂತಾರಾಷ್ಟ್ರೀಯ ಮಾಸ್ಟರ್ಸ್‌ ಗೇಮ್ಸ್‌ನಲ್ಲಿ ಭಾಗವಹಿಸಲು ಆರಂಭಿಸಿದ್ದರು. ವೈದ್ಯಕೀಯ ತಪಾಸಣೆಯ ಬಳಿಕ ಓಟದಲ್ಲಿ ಭಾಗವಹಿಸಲು ಗ್ರೀನ್‌ಸಿಗ್ನಲ್ ಪಡೆದ ಕೌರ್ ಹಾಗೂ ಅವರ ಪುತ್ರ ಗುರುದೇವ್ ಸಿಂಗ್ ವಿಶ್ವದೆಲ್ಲೆಡೆ 12ಕ್ಕೂ ಅಧಿಕ ಮಾಸ್ಟರ್ಸ್‌ ಅಥ್ಲೆಟಿಕ್ಸ್‌ನಲ್ಲಿ ಭಾಗವಹಿಸಿದ್ದಾರೆ. ಈಗಾಗಲೇ ಸಾಕಷ್ಟು ಚಿನ್ನದ ಪದಕಗಳನ್ನು ಜಯಿಸಿದ್ದ ಕೌರ್ ಆಕ್ಲೆಂಡ್‌ನಲ್ಲಿ 200 ಮೀ. ಓಟ, 2 ಕೆಜಿ ಶಾಟ್‌ಪುಟ್ ಹಾಗೂ 400 ಗ್ರಾಮ್ ಜಾವೆಲಿನ್ ಸ್ಪರ್ಧೆಗಳಲ್ಲಿ ಭಾಗವಹಿಸುವ ಯೋಜನೆ ಹಾಕಿಕೊಂಡಿದ್ದಾರೆ. ಈ ಮೂರು ಸ್ಪರ್ಧೆಗಳಲ್ಲಿ ಜಯ ಸಾಧಿಸಿ ಪದಕಗಳ ಸಂಖ್ಯೆಯನ್ನು 20ಕ್ಕೇರಿಸುವ ವಿಶ್ವಾಸದಲ್ಲಿದ್ದಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News