10,000 ಟೆಸ್ಟ್ ರನ್ ಪೂರೈಸಿದ ಯೂನಿಸ್ ಖಾನ್

Update: 2017-04-24 17:31 GMT

 ಕಿಂಗ್ಸ್‌ಸ್ಟನ್, ಎ.24: ವೆಸ್ಟ್‌ಇಂಡೀಸ್ ವಿರುದ್ಧದ ಮಳೆಬಾಧಿತ ಮೊದಲ ಟೆಸ್ಟ್‌ನ ಮೂರನೆ ದಿನದಾಟದಲ್ಲಿ ಪಾಕಿಸ್ತಾನ 4 ವಿಕೆಟ್ ನಷ್ಟಕ್ಕೆ 201 ರನ್ ಗಳಿಸಿದೆ. ಹಿರಿಯ ಬ್ಯಾಟ್ಸ್‌ಮನ್ ಯೂನಿಸ್ ಖಾನ್ 10,000 ರನ್ ಪೂರೈಸಿದ ಪಾಕ್‌ನ ಮೊದಲ ಬ್ಯಾಟ್ಸ್‌ಮನ್ ಎಂಬ ಕೀರ್ತಿಗೆ ಭಾಜನರಾದರು.

  ಸಬೀನಾಪಾರ್ಕ್‌ನಲ್ಲಿ ಮಳೆಯಿಂದಾಗಿ 90 ನಿಮಿಷ ತಡವಾಗಿ ಆರಂಭವಾದ ಪಂದ್ಯದಲ್ಲಿ ಮೂರನೆ ವಿಕೆಟ್‌ಗೆ 131 ರನ್ ಜೊತೆಯಾಟ ನಡೆಸಿದ ಯೂನಿಸ್ ಖಾನ್ (58) ಹಾಗೂ ಬಾಬರ್ ಆಝಂ(72)ಪಾಕ್ ತಂಡಕ್ಕೆ ಆಸರೆಯಾದರು. ನಾಯಕ ಮಿಸ್ಬಾವುಲ್ ಹಕ್ ಹಾಗೂ ಅಸದ್ ಶಫೀಕ್ ನಾಲ್ಕನೆ ದಿನಕ್ಕೆ ಬ್ಯಾಟಿಂಗ್‌ನ್ನು ಕಾಯ್ದಿರಿಸಿದರು.

ವಿದಾಯದ ಅಂತಾರಾಷ್ಟ್ರೀಯ ಪಂದ್ಯ ಆಡುತ್ತಿರುವ 39ರ ಹರೆಯದ ಯೂನಿಸ್‌ಖಾನ್ ಎಚ್ಚರಿಕೆಯ ಆಟವಾಡಿ ಗಮನ ಸೆಳೆದರೆ, ಆಝಂ ಆಕ್ರಮಣಕಾರಿ ಆಟಕ್ಕೆ ಒತ್ತು ನೀಡಿದರು. ಮತ್ತೊಮ್ಮೆ ಚೊಚ್ಚಲ ಶತಕದಿಂದ ವಂಚಿತರಾದರು.

 ಯೂನಿಸ್‌ಖಾನ್‌ಗೆ 10,000 ಟೆಸ್ಟ್ ರನ್ ಪೂರೈಸಲು 23 ರನ್ ಆವಶ್ಯಕತೆಯಿತ್ತು. ಬ್ಯಾಟಿಂಗ್ ಆರಂಭಿಸಿ 47 ನಿಮಿಷಗಳಲ್ಲಿ ಹೊಸ ಮೈಲುಗಲ್ಲು ತಲುಪಿದರು. ಈ ಸಾಧನೆ ಮಾಡಿದ ವಿಶ್ವದ 13ನೆ ಆಟಗಾರ ಹಾಗೂ ಮೊದಲ ಹಿರಿಯ ಆಟಗಾರನೆಂಬ ಕೀರ್ತಿಗೆ ಭಾಜನರಾದರು. ಯೂನಿಸ್ 138 ಎಸೆತಗಳಲ್ಲಿ 5 ಬೌಂಡರಿ, 1 ಸಿಕ್ಸರ್‌ಗಳನ್ನೊಳಗೊಂಡ 58 ರನ್ ಗಳಿಸಿ ವೇಗದ ಬೌಲರ್ ಗ್ಯಾಬ್ರಿಯಲ್‌ಗೆ ವಿಕೆಟ್ ಒಪ್ಪಿಸಿದರು. ಗ್ಯಾಬ್ರಿಯಲ್ ಯೂನಿಸ್ ವಿಕೆಟ್ ಪಡೆದು 50ನೆ ಟೆಸ್ಟ್ ವಿಕೆಟ್ ಪಡೆದ ಸಾಧನೆ ಮಾಡಿದರು.

 ಇದಕ್ಕೆ ಮೊದಲು 9 ವಿಕೆಟ್‌ಗಳ ನಷ್ಟಕ್ಕೆ 278 ರನ್‌ನಿಂದ ಬ್ಯಾಟಿಂಗ್ ಮುಂದುವರಿಸಿದ ವೆಸ್ಟ್‌ಇಂಡೀಸ್ 286 ರನ್‌ಗೆ ಆಲೌಟಾಯಿತು. ನಾಯಕ ಜೇಸನ್ ಹೋಲ್ಡರ್ ಅಜೇಯ 57 ರನ್ ಗಳಿಸಿದರು. ವಿಂಡೀಸ್‌ನ ಕೊನೆಯ ಆಟಗಾರ ಗ್ಯಾಬ್ರಿಯಲ್ ವಿಕೆಟ್‌ನ್ನು ಕಬಳಿಸಿದ ಮುಹಮ್ಮದ್ ಆಮಿರ್ ಟೆಸ್ಟ್‌ನಲ್ಲಿ ಜೀವನಶ್ರೇಷ್ಠ(6-44) ಬೌಲಿಂಗ್ ಮಾಡಿದರು. ಆಮಿರ್ 2010ರಲ್ಲಿ ಇಂಗ್ಲೆಂಡ್‌ನ ವಿರುದ್ಧ ಲಾರ್ಡ್ಸ್‌ನಲ್ಲಿ 84 ರನ್‌ಗೆ ಆರು ವಿಕೆಟ್‌ಗಳನ್ನು ಪಡೆದಿದ್ದರು.

ಟೆಸ್ಟ್ ಕ್ರಿಕೆಟ್‌ನಲ್ಲಿ 10,000 ರನ್ ಗಳಿಸಿದ ಸಾಧಕರು

ಆಟಗಾರ                          ಪಂದ್ಯ            ರನ್‌              ಗರಿಷ್ಠ

ಸಚಿನ್ ತೆಂಡುಲ್ಕರ್(ಭಾರತ)       200               15,921            248

ರಿಕಿ ಪಾಂಟಿಂಗ್(ಆಸ್ಟ್ರೇಲಿಯ)       168               13,378            257

ಜಾಕ್ ಕಾಲಿಸ್(ದ.ಆಫ್ರಿಕ)           166               13,289            224

ರಾಹುಲ್ ದ್ರಾವಿಡ್(ಭಾರತ)         164               13,288            270

ಕುಮಾರ ಸಂಗಕ್ಕರ(ಶ್ರೀಲಂಕಾ)     134               12,400           319

ಬ್ರಿಯಾನ್ ಲಾರಾ(ವಿಂಡೀಸ್)       131                11,953            400

ಎಸ್.ಚಂದ್ರಪಾಲ್(ವಿಂಡೀಸ್)       164               11,867             203

ಎಂ.ಜಯವರ್ಧನೆ(ಶ್ರೀಲಂಕಾ)       149               11,814             374

ಬಾರ್ಡರ್(ಆಸ್ಟ್ರೇಲಿಯ)              156               11,174             205

ಕುಕ್(ಇಂಗ್ಲೆಂಡ್)                     140               11,057             294

ಸ್ಟೀವ್‌ವಾ(ಆಸ್ಟ್ರೇಲಿಯ)              168               10,927            200

ಸುನೀಲ್‌ಗವಾಸ್ಕರ್(ಭಾರತ)        125               10,122            236

ಯೂನಿಸ್‌ಖಾನ್(ಪಾಕ್)             116                10,035            313

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News