ಎಟಿಪಿ ರ್ಯಾಂಕಿಂಗ್: ಐದನೆ ಸ್ಥಾನಕ್ಕೇರಿದ ನಡಾಲ್

Update: 2017-04-24 17:39 GMT

ಪ್ಯಾರಿಸ್, ಎ.24: ದಾಖಲೆ 10ನೆ ಬಾರಿ ಮಾಂಟೆ ಕಾರ್ಲೊ ಪ್ರಶಸ್ತಿಯನ್ನು ಗೆದ್ದುಕೊಂಡಿರುವ ಸ್ಪೇನ್‌ನ ರಫೆಲ್ ನಡಾಲ್ ಸೋಮವಾರ ಬಿಡುಗಡೆಯಾಗಿರುವ ಹೊಸ ಎಟಿಪಿ ರ್ಯಾಂಕಿಂಗ್‌ನಲ್ಲಿ ಐದನೆ ಸ್ಥಾನಕ್ಕೇರಿದ್ದಾರೆ.

 30ರ ಹರೆಯದ ‘ಆವೆಮಣ್ಣಿನ ರಾಜ’ ನಡಾಲ್ ತನ್ನ ನೆಚ್ಚಿನ ಅಂಗಣದಲ್ಲಿ 50ನೆ ಪ್ರಶಸ್ತಿಯನ್ನು ಜಯಿಸಿದ್ದು, ಒಟ್ಟಾರೆ ಅವರು ಗೆದ್ದುಕೊಂಡಿರುವ 70ನೆ ಪ್ರಶಸ್ತಿ ಇದಾಗಿದೆ. ತಮ್ಮದೇ ದೇಶದ ಅಲ್ಬರ್ಟ್ ರಾಮೊಸ್-ವಿನೊಲಸ್‌ರನ್ನು ಕೇವಲ 76 ನಿಮಿಷದಲ್ಲಿ 6-1, 6-3 ಸೆಟ್‌ಗಳ ಅಂತರದಿಂದ ಮಣಿಸಿದ್ದ ನಡಾಲ್ ಸುಮಾರು ಒಂದು ವರ್ಷದ ಬಳಿಕ ಪ್ರಶಸ್ತಿಯ ಬರ ನೀಗಿಸಿಕೊಂಡರು.

ಪ್ರಶಸ್ತಿ ಸುತ್ತಿಗೆ ತಲುಪುವ ಮೊದಲು ವಿಶ್ವದ ನಂ.1 ಆ್ಯಂಡಿ ಮರ್ರೆ ಹಾಗೂ ಮರಿನ್ ಸಿಲಿಕ್‌ರನ್ನು ಮಣಿಸಿದ್ದ 29ರ ಹರೆಯದ ರಾಮೊಸ್-ವಿನೊಲಸ್ ಐದು ಸ್ಥಾನ ಭಡ್ತಿ ಪಡೆದು ಜೀವನಶ್ರೇಷ್ಠ 19ನೆ ಸ್ಥಾನಕ್ಕೇರಿದರು.ಬ್ರಿಟನ್‌ನ ಆ್ಯಂಡಿ ಮರ್ರೆ ನಂ.1 ಸ್ಥಾನದಲ್ಲೇ ಮುಂದುವರಿದಿದ್ದಾರೆ.

ಎಟಿಪಿ ರ್ಯಾಂಕಿಂಗ್ಸ್: 1.ಆ್ಯಂಡಿ ಮರ್ರೆ(ಬ್ರಿಟನ್), 2.ನೊವಾಕ್ ಜೊಕೊವಿಕ್(ಸರ್ಬಿಯ), 3.ಸ್ಟಾನ್ ವಾವ್ರಿಂಕ(ಸ್ವಿಸ್), 4. ರೋಜರ್ ಫೆಡರರ್(ಸ್ವಿಸ್), 5. ರಫೆಲ್ ನಡಾಲ್(ಸ್ಪೇನ್), 6. ಮಿಲೊಸ್ ರಾವೊನಿಕ್(ಕೆನಡಾ), 7. ಕೀ ನಿಶಿಕೊರಿ(ಜಪಾನ್), 8. ಮರಿನ್ ಸಿಲಿಕ್(ಕ್ರೊಯೇಷಿಯ), 9. ಡೊಮಿನಿಕ್ ಥೀಮ್(ಆಸ್ಟ್ರೀಯ), 10. ಡೇವಿಡ್ ಗಫಿನ್(ಬೆಲ್ಜಿಯಂ).

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News