ಅನುಚಿತ ವರ್ತನೆ: ರೋಹಿತ್ ಶರ್ಮಗೆ ದಂಡ

Update: 2017-04-25 17:23 GMT

ಮುಂಬೈ,ಎ.25: ನೀತಿ ಸಂಹಿತೆ ಲೆವೆಲ್-1ನ್ನು ಉಲ್ಲಂಘಿಸಿರುವ ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಗೆ ಪಂದ್ಯಶುಲ್ಕದಲ್ಲಿ ಶೇ.50ರಷ್ಟು ದಂಡ ವಿಧಿಸಲಾಗಿದೆ ಎಂದು ಐಪಿಎಲ್ ಆಡಳಿತ ಮಂಡಳಿ ಮಂಗಳವಾರ ತಿಳಿಸಿದೆ.

ರೈಸಿಂಗ್ ಪುಣೆ ಸೂಪರ್‌ಜೈಂಟ್‌ನ ಅಂತಿಮ ಓವರ್‌ನಲ್ಲಿ ಅಂಪೈರ್ ತೀರ್ಪಿನ ಬಗ್ಗೆ ಮುಂಬೈನ ಪ್ರಮುಖ ಬ್ಯಾಟ್ಸ್‌ಮನ್ ರೋಹಿತ್ ಅಸಮಾಧಾನ ವ್ಯಕ್ತಪಡಿಸಿದ್ದರು.

ವಾಂಖೆಡೆ ಸ್ಟೇಡಿಯಂನಲ್ಲಿ ಮುಂಬೈ ತಂಡ ಗೆಲುವಿಗೆ 161 ರನ್ ಚೇಸಿಂಗ್‌ಗೆ ತೊಡಗಿತ್ತು. ಕೊನೆಯ ಓವರ್ ಬೌಲಿಂಗ್ ಮಾಡಲು ಬಂದಿದ್ದ ಜಯದೇವ್ ಉನದ್ಕಟ್ ಎಸೆದಿದ್ದ ಒಂದು ಎಸೆತ ವೈಡ್ ಎಂದು ಭಾವಿಸಿದ್ದ ರೋಹಿತ್ ಆ ಎಸೆತವನ್ನು ಆಡದೇ ಸುಮ್ಮನಿದ್ದರು. ಆದರೆ, ಅಂಪೈರ್ ಎಸ್. ರವಿ ಆ ಎಸೆತವನ್ನು ವೈಡ್ ಎಂದು ತೀರ್ಮಾನಿಸಲಿಲ್ಲ. ಇದರಿಂದ ಹತಾಶರಾದ ಮುಂಬೈ ನಾಯಕ ರೋಹಿತ್ ಅಂಪೈರ್‌ರೊಂದಿಗೆ ವಾಗ್ವಾದ ನಡೆಸಿದ್ದರು. ಬಳಿಕ ಬ್ಯಾಟಿಂಗ್ ಮುಂದುವರಿಸಿದ ರೋಹಿತ್ ಮುಂದಿನ ಎಸೆತದಲ್ಲಿ ಔಟಾದರು. ಮುಂಬೈ ಈ ಪಂದ್ಯವನ್ನು ಕೇವಲ 3 ರನ್‌ಗಳಿಂದ ಸೋತಿತ್ತು.

ಮ್ಯಾಚ್ ರೆಫರಿ ಜಾವಗಲ್ ಶ್ರೀನಾಥ್ ಅವರು ರೋಹಿತ್ ಆಟಗಾರರು ಹಾಗೂ ತಂಡದ ಅಧಿಕಾರಿಗಳ ಬಗ್ಗೆ ಇರುವ ಐಪಿಎಲ್ ನೀತಿ ಸಂಹಿತೆ ಆರ್ಟಿಕಲ್ 2.1.5ನ್ನು ಉಲ್ಲಂಘಿಸಿದ್ದನ್ನು ಉಲ್ಲೇಖಿಸಿದ್ದರು. ತಪ್ಪನ್ನು ಒಪ್ಪಿಕೊಂಡಿರುವ ರೋಹಿತ್ ಪಂದ್ಯಶುಲ್ಕದಲ್ಲಿ 50 ಶೇ. ಮೊತ್ತವನ್ನು ದಂಡ ತೆರಲು ಸಮ್ಮತಿಸಿದ್ದಾರೆ.

ಈ ವರ್ಷದ ಐಪಿಎಲ್‌ನಲ್ಲಿ ರೋಹಿತ್ ಅಂಪೈರ್ ನಿರ್ಧಾರವನ್ನು ಪ್ರಶ್ನಿಸಿ ಎರಡನೆ ಬಾರಿ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ. ಕೆಲವು ವಾರಗಳ ಹಿಂದೆ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ ಪಂದ್ಯದಲ್ಲಿ ಅಂಪೈರ್ ವಿರುದ್ಧ ತಿರುಗಿ ಬಿದ್ದಿದ್ದ ರೋಹಿತ್ ವಾಗ್ದಂಡನೆಗೆ ಒಳಗಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News