ಚಾಂಪಿಯನ್ಸ್ ಟ್ರೋಫಿಗೆ ಇನ್ನೂ ತಂಡ ಪ್ರಕಟಿಸದ ಭಾರತ

Update: 2017-04-25 17:29 GMT

ದುಬೈ, ಎ.25: ಪ್ರಸ್ತಾವಿತ ಹೊಸ ಆದಾಯ ಹಂಚಿಕೆ ಮಾದರಿಗೆ ಮತ್ತೊಮ್ಮೆ ಅಸಮಾಧಾನ ವ್ಯಕ್ತಪಡಿಸಿರುವ ಬಿಸಿಸಿಐ, ಐಸಿಸಿ ಮುಖ್ಯಸ್ಥರಾದ ಶಶಾಂಕ್ ಮನೋಹರ್ ನೀಡಿರುವ 100 ಮಿಲಿಯನ್ ಡಾಲರ್ ಪರಿಹಾರದ ಆಫರ್‌ನ್ನು ತಿರಸ್ಕರಿಸಿದೆ.

ಇಂಗ್ಲೆಂಡ್‌ನಲ್ಲಿ ಜೂನ್‌ನಲ್ಲಿ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿಗೆ ತಂಡವನ್ನು ಪ್ರಕಟಿಸಲು ಇಂದು(ಎ.25) ಕೊನೆಯದಿನವಾಗಿದ್ದು, ಭಾರತ ಇನ್ನೂ ತಂಡವನ್ನು ಪ್ರಕಟಿಸಿಲ್ಲ. ಆದಾಯ ಹಂಚಿಕೆಗೆ ಸಂಬಂಧಿಸಿ ಐಸಿಸಿಯೊಂದಿಗೆ ಸಂಘರ್ಷಕ್ಕೆ ಇಳಿದಿರುವ ಬಿಸಿಸಿಐ ಚಾಂಪಿಯನ್ಸ್ ಟ್ರೋಫಿಯನ್ನು ಬಹಿಷ್ಕರಿಸುವುದೇ? ಎಂಬ ಪ್ರಶ್ನೆ ಎದುರಾಗಿದೆ.

‘‘ಐಸಿಸಿ ಚೇರ್ಮನ್ ಮನೋಹರ್ 100 ಮಿಲಿಯನ್ ಡಾಲರ್ ಹೆಚ್ಚುವರಿ ಆಫರ್‌ನ್ನು ನಮಗೆ ನೀಡಿದ್ದರು. ಅದನ್ನು ಪಡೆಯಲು ಗಡುವನ್ನು ನಿಗದಿಪಡಿಸಿದ್ದರು. ನಾವು ಅದನ್ನು ಸ್ವೀಕರಿಸುವುದಿಲ್ಲ’’ ಎಂದು ಬಿಸಿಸಿಐನ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಇತರ ದೇಶಗಳು ಟೂರ್ನಿಗೆ ತಂಡವನ್ನು ಪ್ರಕಟಿಸಿವೆ. ಆದರೆ, ಭಾರತ ಇನ್ನಷ್ಟೇ ತಂಡವನ್ನು ಪ್ರಕಟಿಸಬೇಕಾಗಿದೆ. ಟೂರ್ನಿಗೆ ತಂಡವನ್ನು ಪ್ರಕಟಿಸದ ಬಿಸಿಸಿಐ, ಐಸಿಸಿ ವಿರುದ್ಧ ಅಸಹಕಾರ ಚಳುವಳಿಯನ್ನು ಆರಂಭಿಸಿದೆ. ಮೇ 26 ರಂದು ದುಬೈನಲ್ಲಿ ಐಸಿಸಿ ಸಭೆ ನಡೆಯಲಿದ್ದು, ಶ್ರೀನಿವಾಸನ್‌ರ ಆಪ್ತ ಬಿಸಿಸಿಐನ ಸಕ್ರಿಯ ಕಾರ್ಯದರ್ಶಿ ಅಮಿತಾಭ್ ಚೌಧರಿ ಸುಪ್ರೀಂಕೋರ್ಟ್‌ನ ಆದೇಶದ ಮೇರೆಗೆ ಸಭೆಯಲ್ಲಿ ಬಿಸಿಸಿಐಯನ್ನು ಪ್ರತಿನಿಧಿಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News