ಮೊದಲ ಟೆಸ್ಟ್: ಪಾಕ್‌ಗೆ ಭರ್ಜರಿ ಜಯ

Update: 2017-04-25 18:28 GMT

ಜಮೈಕಾ, ಎ.25: ಸ್ಪಿನ್ನರ್ ಯಾಸಿರ್ ಶಾ ಅತ್ಯುತ್ತಮ ಬೌಲಿಂಗ್ ನೆರವಿನಿಂದ ಪಾಕಿಸ್ತಾನ ತಂಡ ವೆಸ್ಟ್‌ಇಂಡೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯವನ್ನು 7 ವಿಕೆಟ್‌ಗಳಿಂದ ಗೆದ್ದುಕೊಂಡಿದೆ.

ಇಲ್ಲಿನ ಸಬೀನಾಪಾರ್ಕ್‌ನಲ್ಲಿ ಮೊದಲ ಟೆಸ್ಟ್‌ನ ಗೆಲುವಿಗೆ 32 ರನ್ ಗುರಿ ಪಡೆದಿದ್ದ ಪಾಕ್ 10.5 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 36 ರನ್ ಗಳಿಸಿತು. ಬಾಬರ್ ಆಝಂ(9) ಹಾಗೂ ನಾಯಕ ಮಿಸ್ಬಾವುಲ್ ಹಕ್(ಅಜೇಯ 12) ತಂಡವನ್ನು ಗೆಲುವಿನ ದಡ ಸೇರಿಸಿದರು.

 5ನೆ ಹಾಗೂ ಅಂತಿಮ ದಿನವಾದ ಮಂಗಳವಾರ 4 ವಿಕೆಟ್‌ಗಳ ನಷ್ಟಕ್ಕೆ 93 ರನ್‌ನಿಂದ ದ್ವಿತೀಯ ಇನಿಂಗ್ಸ್ ಮುಂದುವರಿಸಿದ ವಿಂಡೀಸ್ ತಂಡ ಶಾ(6-63) ಸ್ಪಿನ್ ಮೋಡಿಗೆ ತತ್ತರಿಸಿ 52.4 ಓವರ್‌ಗಳಲ್ಲಿ 152 ರನ್‌ಗೆ ಆಲೌಟಾಯಿತು. ವಿಂಡೀಸ್‌ನ ಪರ ಅಗ್ರ ಕ್ರಮಾಂಕದ ಪೊವೆಲ್(49) ಗರಿಷ್ಠ ಮೊತ್ತ ದಾಖಲಿಸಿದರು. ಉಳಿದವರು ವಿಫಲರಾದರು.

4ನೆೆ ದಿನದಾಟದಲ್ಲಿ ಪಾಕ್ ಮೊದಲ ಇನಿಂಗ್ಸ್‌ನಲ್ಲಿ 407 ರನ್‌ಗೆ ಆಲೌಟಾಯಿತು. ನಾಯಕ ಮಿಸ್ಬಾವುಲ್ ಹಕ್ ಅಜೇಯ 99 ರನ್ ಗಳಿಸಿ 11ನೆ ಶತಕದಿಂದ ವಂಚಿತರಾದರು. ಹಕ್ ಟೆಸ್ಟ್ ಇತಿಹಾಸದಲ್ಲಿ ಕೇವಲ ಒಂದು ರನ್‌ನಿಂದ ಶತಕ ವಂಚಿತರಾದ ಆರನೆ ಬ್ಯಾಟ್ಸ್‌ಮನ್ ಎನಿಸಿಕೊಂಡರು. 223 ಎಸೆತಗಳನ್ನು ಎದುರಿಸಿದ್ದ ಮಿಸ್ಬಾವುಲ್ ಹಕ್ ಮೂರು ಸಿಕ್ಸರ್ ಹಾಗೂ ಐದು ಬೌಂಡರಿಗಳನ್ನು ಬಾರಿಸಿದ್ದರು.

121 ಹಿನ್ನಡೆಯೊಂದಿಗೆ ಎರಡನೆ ಇನಿಂಗ್ಸ್ ಆರಂಭಿಸಿದ್ದ ವಿಂಡೀಸ್ 4ನೆ ದಿನದಾಟದಂತ್ಯಕ್ಕೆ 93 ರನ್‌ಗೆ 4 ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ಯಾಸಿರ್ ಶಾ(4-33) ಎಲ್ಲ ನಾಲ್ಕು ವಿಕೆಟ್‌ಗಳನ್ನು ಉರುಳಿಸಿದ್ದರು. ಶಾ ತಾನೆಸೆದ ಮೊದಲ ಎಸೆತದಲ್ಲೇ ಕ್ರೆಗ್ ಬ್ರಾತ್‌ವೇಟ್ ವಿಕೆಟ್ ಪಡೆದರು. ಆನಂತರ ಹೊಸ ಆಟಗಾರ ಶಿಮ್ರಾನ್ ಹೆಟ್ಮೆಯರ್, ಶೈ ಹೋಪ್ ಹಾಗೂ ಕೀರನ್ ಪೊವೆಲ್ ವಿಕೆಟ್ ಪಡೆದರು. ವಿಂಡೀಸ್ ಮೊದಲ ಇನಿಂಗ್ಸ್‌ನಲ್ಲಿ 286 ರನ್‌ಗೆ ಆಲೌಟಾಗಿತ್ತು.

ಇದಕ್ಕೂ ಮೊದಲು 4 ವಿಕೆಟ್ ನಷ್ಟಕ್ಕೆ 201 ರನ್‌ನಿಂದ ಮೊದಲ ಇನಿಂಗ್ಸ್ ಮುಂದುವರಿಸಿದ ಪಾಕ್‌ಗೆ ಮಿಸ್ಬಾವುಲ್ ಹಕ್ ಹಾಗೂ ಸರ್ಫರಾಜ್ ಅಹ್ಮದ್ 8ನೆ ವಿಕೆಟ್‌ಗೆ 88 ರನ್ ಜೊತೆಯಾಟ ನಡೆಸಿ ಆಧಾರವಾದರು. 54 ರನ್ ಗಳಿಸಿದ ಅಹ್ಮದ್‌ಗೆ ಬಿಶೂ ಪೆವಿಲಿಯನ್ ಹಾದಿ ತೋರಿಸಿದರು. 70 ಎಸೆತಗಳಲ್ಲಿ 5 ಬೌಂಡರಿ, 1 ಸಿಕ್ಸರ್‌ಗಳಿರುವ ಅರ್ಧಶತಕ ಗಳಿಸಿದ ಅಹ್ಮದ್ ಟೆಸ್ಟ್‌ನಲ್ಲಿ 2,000 ರನ್ ಪೂರೈಸಿದರು.

 ಮಿಸ್ಬಾವುಲ್ ಹಕ್ ಅರ್ಧಶತಕ ಗಳಿಸುವ ಮೊದಲು ಟೆಸ್ಟ್‌ನಲ್ಲಿ 5,000 ರನ್ ಪೂರೈಸಿದರು. ವಿಂಡೀಸ್‌ನ ಪರ ಗ್ಯಾಬ್ರಿಯೆಲ್(3-92) ಹಾಗೂ ಜೋಸೆಫ್(3-71) ತಲಾ ಮೂರು ವಿಕೆಟ್‌ಗಳನ್ನು ಪಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News