ಐಸಿಸಿ ಸಭೆಯಲ್ಲಿ ಬಿಸಿಸಿಐಗೆ ತೀವ್ರ ಮುಖಭಂಗ
ಹೊಸದಿಲ್ಲಿ, ಎ.26: ದುಬೈನಲ್ಲಿ ಬುಧವಾರ ನಡೆದ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್‌ನ(ಐಸಿಸಿ)ಮಂಡಳಿ ಸಭೆಯಲ್ಲಿ ಆದಾಯ ಹಂಚಿಕೆ ಹಾಗೂ ಆಡಳಿತದಲ್ಲಿ ಬದಲಾವಣೆಗಾಗಿ ನಡೆದ ಮತದಾನದಲ್ಲಿ ವಿಶ್ವದ ಶ್ರೀಮಂತ ಕ್ರಿಕೆಟ್ ಮಂಡಳಿ ಬಿಸಿಸಿಐ ತೀವ್ರ ಮುಖಭಂಗ ಅನುಭವಿಸಿದೆ.
ಐಸಿಸಿ ಮಂಡಳಿ ಸಭೆಯ ಮೊದಲ ದಿನವಾದ ಬುಧವಾರ ಐಸಿಸಿ ಆಡಳಿತ ಮಂಡಳಿ ರಚನೆಯಲ್ಲಿ ಬದಲಾವಣೆ ಹಾಗೂ ಆದಾಯ ಹಂಚಿಕೆ ಮಾದರಿಯ ಪುನರ್ರಚನೆಗೆ ಸಂಬಂಧಿಸಿ ಐಸಿಸಿ ಸದಸ್ಯ ರಾಷ್ಟ್ರಗಳ ಬಹುಮತದ ಪರೀಕ್ಷೆ ನಡೆಸಲಾಗಿದೆ.
ಐಸಿಸಿ ಆಡಳಿತ ಹಾಗೂ ಸಂವಿಧಾನದಲ್ಲಿನ ಬದಲಾವಣೆಗಾಗಿ ನಡೆದ ಮತದಾನದಲ್ಲಿ ಬಿಸಿಸಿಐ 1-9 ಅಂತರದಿಂದ ಸೋತಿದೆ. ಆದಾಯ ಹಂಚಿಕೆ ಮಾದರಿಯ ಬದಲಾವಣೆಗೆ ಸಂಬಂಧಿಸಿ ನಡೆದ ಮತದಾನದಲ್ಲಿ ಬಿಸಿಸಿಐಗೆ 2-8 ಅಂತರದ ಸೋಲಾಗಿದೆ. ಈ ವಿಷಯಕ್ಕೆ ಸಂಬಂಧಿಸಿ ಬಿಸಿಸಿಐ ಹಾಗೂ ಶ್ರೀಲಂಕಾದ ಪ್ರತಿನಿಧಿಗಳು ಮಾತ್ರ ವಿರುದ್ಧವಾಗಿ ಮತ ಚಲಾಯಿಸಿದ್ದರು. ಬಿಸಿಸಿಐ ಆದಾಯ ಹಂಚಿಕೆ ಮಾದರಿಯ ಬಗ್ಗೆ ತೀವ್ರ ವಿರೋಧ ವ್ಯಕ್ತಪಡಿಸುತ್ತಾ ಬಂದಿದೆ.
ಐಸಿಸಿ ಆದಾಯದಲ್ಲಿ ತನಗೆ ಸಿಂಹಪಾಲು ಬೇಕು ಎಂದು ಬಿಸಿಸಿಐ ವಾದವಾಗಿದೆ. ಬಿಸಿಸಿಐನ ಮಾಜಿ ಅಧ್ಯಕ್ಷ, ಇದೀಗ ಐಸಿಸಿಯ ಮೊದಲ ಸ್ವತಂತ್ರ ಮುಖ್ಯಸ್ಥರಾಗಿರುವ ಶಶಾಂಕ್ ಮನೋಹರ್ ಬಿಸಿಸಿಐ ವಿರುದ್ಧ ಬೌನ್ಸರ್ ಎಸೆದಿದ್ದಾರೆ.
‘‘ಹೌದು, ಮತದಾನ ಪ್ರಕ್ರಿಯೆಗಳೆಲ್ಲ ಮುಗಿದಿವೆ. ಆದಾಯ ಹಂಚಿಕೆ ಮಾದರಿಯ ಬದಲಾವಣೆಯ ಪರವಾಗಿ 8-2 ಮತಗಳು ಹಾಗೂ ಐಸಿಸಿ ಸಂವಿಧಾನದ ಬದಲಾವಣೆ ಪರವಾಗಿ 9-1 ಮತ ಚಲಾವಣೆಯಾಗಿದೆ. ಬಿಸಿಸಿಐ ಈ ಎರಡರ ವಿರುದ್ಧ ಮತ ಚಲಾಯಿಸಿದೆ. ಈ ಎಲ್ಲ ಬದಲಾವಣೆಯು ಸ್ವೀಕಾರಾರ್ಹವಲ್ಲ. ಭಾರತ ಮುಂಬರುವ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾಗವಹಿಸುವುದು ಸೇರಿದಂತೆ ಎಲ್ಲ ಆಯ್ಕೆಯು ಮುಕ್ತವಾಗಿದೆ. ಜಂಟಿ ಕಾರ್ಯದರ್ಶಿ ವಿಶೇಷ ಸಾಮಾನ್ಯ ಸಭೆ ಕರೆದು ಬೆಳವಣಿಗೆಯ ಬಗ್ಗೆ ಸದಸ್ಯರಲ್ಲಿ ವಿವರಿಸಲಿದ್ದು, ಅಲ್ಲಿಯೇ ಸೂಕ್ತ ನಿರ್ಧಾರ ಕೈಗೊಳ್ಳಲಾಗುತ್ತದೆ’’ ಎಂದು ದುಬೈನಲ್ಲಿ ನಡೆದಿದ್ದ ಐಸಿಸಿ ಸಭೆಯಲ್ಲಿ ಹಾಜರಿದ್ದ ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಐಸಿಸಿಯೊಂದಿಗೆ ಆದಾಯ ಹಂಚಿಕೆಯ ವಿಷಯಕ್ಕೆ ಸಂಬಂಧಿಸಿ ಸಂಘರ್ಷದಲ್ಲಿ ತೊಡಗಿರುವ ಬಿಸಿಸಿಐ ಈತನಕ ಚಾಂಪಿಯನ್ಸ್ ಟ್ರೋಫಿಗೆ ಟೀಮ್ ಇಂಡಿಯಾವನ್ನು ಪ್ರಕಟಿಸಿಲ್ಲ. ಉಳಿದ 7 ದೇಶಗಳು ತಂಡವನ್ನು ಪ್ರಕಟಿಸಿವೆ.