ಜಯರಾಮ್‌ಗೆ ಜಯ, ಸೈನಾಗೆ ಸೋಲು
ಹೊಸದಿಲ್ಲಿ, ಎ.26: ಚೀನಾದಲ್ಲಿ ಬುಧವಾರ ಆರಂಭವಾದ ಬ್ಯಾಡ್ಮಿಂಟನ್ ಏಷ್ಯಾ ಚಾಂಪಿಯನ್‌ಶಿಪ್‌ನಲ್ಲಿ ಮಹಿಳೆಯರ ಸಿಂಗಲ್ಸ್‌ನಲ್ಲಿ ಮೂರನೆ ಶ್ರೇಯಾಂಕದ ಪಿ.ವಿ. ಸಿಂಧು ಶುಭಾರಂಭ ಮಾಡಿದರೆ, ಸೈನಾ ನೆಹ್ವಾಲ್ ಸೋಲನುಭವಿಸಿದ್ದಾರೆ. ಮೊದಲ ಸುತ್ತಿನ ಪಂದ್ಯದಲ್ಲಿ ಮೂರನೆ ಶ್ರೇಯಾಂಕದ ಸಿಂಧು ಇಂಡೋನೇಷ್ಯದ ದಿನಾರ್ ಡಿಯ್ಹಿರನ್ನು 31ನಿಮಿಷಗಳ ಹೋರಾಟದಲ್ಲಿ 21-8, 21-18 ಸೆಟ್‌ಗಳ ಅಂತರದಿಂದ ಮಣಿಸಿದ್ದಾರೆ.
ಇದೇ ವೇಳೆ, ಏಳನೆ ಶ್ರೇಯಾಂಕದ ಸೈನಾ ನೆಹ್ವಾಲ್ ಜಪಾನ್‌ನ ಸಯಾಕಾ ಸಾಟೊರನ್ನು 19-21, 21-16 ಅಂತರದಿಂದ ಸೋಲಿಸಿದರು. ಎರಡು ಬಾರಿ ಈ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕ ಜಯಿಸಿದ್ದ ಸೈನಾ ಈ ಬಾರಿ ಮೊದಲ ಸುತ್ತು ದಾಟಲು ವಿಫಲರಾಗಿದ್ದಾರೆ.
ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಭಾರತದ ಅಜಯ್ ಜಯರಾಮ್ ಚೀನಾದ ಹೌವಿ ಟಿಯಾನ್‌ರನ್ನು 21-18, 18-21, 21-19 ಅಂತರದಿಂದ ಮಣಿಸಿ ದ್ವಿತೀಯ ಸುತ್ತಿಗೆ ಪ್ರವೇಶಿಸಿದರು.
ಮಿಶ್ರ ಡಬಲ್ಸ್ ವಿಭಾಗದಲ್ಲಿ ಪ್ರಣಯ್ ಜೆರ್ರಿ ಚೋಪ್ರಾ ಹಾಗೂ ಸಿಕ್ಕಿ ಎನ್.ರೆಡ್ಡಿ ಅಗ್ರ ಶ್ರೇಯಾಂಕದ ಸಿವೀ ಝೆಂಗ್ ಹಾಗೂ ಕ್ವಿಂಗ್‌ಚೆನ್ ಚೆನ್ ವಿರುದ್ಧ 15-21, 21-14, 16-21 ಗೇಮ್‌ಗಳ ಅಂತರದಿಂದ ಸೋತಿದ್ದಾರೆ.
ಅಶ್ವಿನಿ ಪೊನ್ನಪ್ಪ ಹಾಗೂ ಸಿಕ್ಕಿ ರೆಡ್ಡಿ ಜೋಡಿ ಮಹಿಳೆಯರ ಡಬಲ್ಸ್‌ನಲ್ಲಿ ದಕ್ಷಿಣ ಕೊರಿಯದ ಚಾಯೆ ಯೂ ಜಂಗ್ ಹಾಗೂ ಕಿಮ್ ಸೋ ಯೆಯೊಂಗ್ ವಿರುದ್ಧ 20-22, 16-21 ಗೇಮ್‌ಗಳಿಂದ ಸೋತಿದ್ದಾರೆ.