ಚಾಂಪಿಯನ್ಸ್ ಟ್ರೋಫಿಯಿಂದ ಹೊರಗುಳಿಯಲು ಬಿಸಿಸಿಐ ಗಂಭೀರ ಚಿಂತನೆ
ಮುಂಬೈ/ಹೊಸದಿಲ್ಲಿ, ಎ.27: ಐಸಿಸಿಯ ಪ್ರಸ್ತಾವಿತ ಸುಧಾರಣೆಯನ್ನು ತೀವ್ರವಾಗಿ ವಿರೋಧಿಸುತ್ತಿರುವ ಬಿಸಿಸಿಐ ಇದೀಗ ವಿಶ್ವದಲ್ಲಿ ಏಕಾಂಗಿಯಾಗಿದ್ದು, ಮುಂಬರುವ ಚಾಂಪಿಯನ್ಸ್ ಟ್ರೋಫಿಯನ್ನು ಬಹಿಷ್ಕರಿಸುವ ಕುರಿತು ಗಂಭೀರ ಚಿಂತನೆ ನಡೆಸುತ್ತಿದೆ.
ಐಸಿಸಿ ಹಣಕಾಸು ಮಾದರಿಯ ಪುನರ್ರಚನೆ ಹಾಗೂ ಆಡಳಿತ ರಚನೆಯ ಬದಲಾವಣೆಗೆ ಸಂಬಂಧಿಸಿ ಬುಧವಾರ ನಡೆದ ಎಲ್ಲ ಸದಸ್ಯ ಮಂಡಳಿಗಳ ಚುನಾವಣೆಯಲ್ಲಿ ಬಿಸಿಸಿಐ ಹಾಗೂ ಶ್ರೀಲಂಕಾ ಹೊರತುಪಡಿಸಿ ಉಳಿದೆಲ್ಲಾ ಮಂಡಳಿಗಳು ಸಹಮತ ವ್ಯಕ್ತಪಡಿಸಿ ಮತದಾನ ಮಾಡಿವೆ. ಜಾಗತಿಕ ಮಟ್ಟದಲ್ಲಿ ಬಿಸಿಸಿಐಗೆ ಭಾರೀ ಮುಖಭಂಗವಾಗಿದೆ.
ಐಸಿಸಿ ಹೊಸ ಹಣಕಾಸು ಮಾದರಿ ಜಾರಿಗೆ ಬಂದರೆ ಬಿಸಿಸಿಐ 2015ರಿಂದ 2023ರ ತನಕ ಕೇವಲ 290 ಮಿಲಿಯನ್ ಡಾಲರ್ ಆದಾಯವನ್ನು ಪಡೆಯಲಿದೆ. ಬಿಸಿಸಿಐ 570 ಮಿಲಿಯನ್ ಡಾಲರ್ ಆದಾಯದ ನಿರೀಕ್ಷೆಯಲ್ಲಿತ್ತು.
ಐಸಿಸಿ ಸ್ವತಂತ್ರ ಮುಖ್ಯಸ್ಥರಾದ ಶಶಾಂಕ್ ಮನೋಹರ್ ಅವರು ಬಿಸಿಸಿಐಗೆ ಹೆಚ್ಚುವರಿ 100 ಮಿಲಿಯನ್ ಡಾಲರ್ ಆಫರ್‌ನ್ನು ನೀಡಿದ್ದರು. ಈ ಆಫರ್‌ನ್ನು ಬಿಸಿಸಿಐ ತಿರಸ್ಕರಿಸಿತ್ತು.
ಐಸಿಸಿ ಮತದಾನದಲ್ಲಿ ಮುಖಭಂಗ ಅನುಭವಿಸಿರುವ ಬಿಸಿಸಿಐ ಇದೀಗ ಮುಂಬೈನಲ್ಲಿ ವಿಶೇಷ ಸಾಮಾನ್ಯ ಸಭೆಯನ್ನು ಕರೆದಿದ್ದು, ಮುಂದಿನ ಹೆಜ್ಜೆಯ ಕುರಿತು ಅಂತಿಮ ನಿರ್ಧಾರ ಕೈಗೊಳ್ಳಲಿದೆ. ಚಾಂಪಿಯನ್ಸ್ ಟ್ರೋಫಿಗೆ ತಂಡ ಪ್ರಕಟಿಸಲು ಎ.25 ರಂದು ಕೊನೆಯ ದಿನವಾಗಿದ್ದು, ಭಾರತ ಇನ್ನೂ ತನ್ನ ತಂಡವನ್ನು ಪ್ರಕಟಿಸಿಲ್ಲ.
ಸುಪ್ರೀಂಕೋರ್ಟಿನಿಂದ ನೇಮಿಸಲ್ಪಟ್ಟ ಆಡಳಿತಾಧಿಕಾರಿಗಳ ಸಮಿತಿಯ ಅಧ್ಯಕ್ಷರಾದ ವಿನೋದ್ ರಾಯ್ ಬಿಸಿಸಿಐನ ಆಡಳಿತವನ್ನು ನೋಡಿಕೊಳ್ಳುತ್ತಿದ್ದು, ಈಗಿನ ಬೆಳವಣಿಗೆಯಿಂದ ಸಮಿತಿಯು ಬೇಸರ ವ್ಯಕ್ತಪಡಿಸಿದ್ದು, ಬಿಸಿಸಿಐ ಸದಸ್ಯರು ಎಸ್‌ಜಿಎಂ ನಡೆಸಲು ಅನುಮತಿ ನೀಡಿದೆ.