ಎಂಎಸ್ ಧೋನಿಯ ವಿಕೆಟ್‌ಕೀಪಿಂಗ್ ಕೌಶಲ ಮತ್ತೆ ಸಾಬೀತು
ಹೊಸದಿಲ್ಲಿ, ಎ.27: ಎಂಎಸ್ ಧೋನಿ ಓರ್ವ ಸ್ಫೋಟಕ ಬ್ಯಾಟ್ಸ್‌ಮನ್ ಮಾತ್ರವಲ್ಲ ಓರ್ವ ಚಾಣಾಕ್ಷ ವಿಕೆಟ್‌ಕೀಪರ್. ಧೋನಿ ತನ್ನದೇ ಶೈಲಿಯಲ್ಲಿ ಹಲವು ಬಾರಿ ಎದುರಾಳಿ ಬ್ಯಾಟ್ಸ್‌ಮನ್‌ನನ್ನು ಸ್ಟಂಪಿಂಗ್ ಹಾಗೂ ರನೌಟ್ ಮಾಡಿದ್ದಾರೆ.
ಟ್ವೆಂಟಿ-20 ವಿಶ್ವಕಪ್‌ನಲ್ಲಿ ಅವರ ವಿಕೆಟ್‌ಕೀಪಿಂಗ್ ಶ್ಲಾಘನೆಗೆ ಒಳಗಾಗಿತ್ತು. ಬುಧವಾರ ನಡೆದ ಐಪಿಎಲ್ ಪಂದ್ಯದಲ್ಲಿ ಭಾರತದ ಮಾಜಿ ನಾಯಕ ಧೋನಿ ಕೋಲ್ಕತಾ ತಂಡದ ಆರಂಭಿಕ ಬ್ಯಾಟ್ಸ್‌ಮನ್ ನರೇನ್ರನ್ನು ರನೌಟ್ ಮಾಡಿ ಎಲ್ಲರ ಗಮನ ಸೆಳೆದಿದ್ದಾರೆ.
ಕೆಕೆಆರ್ ಇನಿಂಗ್ಸ್‌ನ ಮೂರನೆ ಓವರ್‌ನಲ್ಲಿ ಪುಣೆ ತಂಡದ ಸ್ಪಿನ್ನರ್ ಸುಂದರ್ ಎಸೆದ ಚೆಂಡನ್ನು ಫೈನ್ ಲೆಗ್‌ನತ್ತ ತಳ್ಳಿದ ನಾಯಕ ಗೌತಮ್ ಗಂಭೀರ್ ಒಂದು ರನ್ ಗಳಿಸುವ ಪ್ರಯತ್ನಕ್ಕೆ ಮುಂದಾದರು. ಮತ್ತೊಂದು ತುದಿಯಲ್ಲಿದ್ದ ನರೇನ್ ನಾಯಕನ ಕರೆಗೆ ಓಗೊಟ್ಟು ರನ್ ಕದಿಯಲು ಬಂದರು. ಫೀಲ್ಡರ್ ಶಾರ್ದೂಲ್ ಠಾಕೂರ್ ತಕ್ಷಣವೇ ಚೆಂಡನ್ನು ಸಂಗ್ರಹಿಸಿ ವಿಕೆಟ್‌ಕೀಪರ್ ಧೋನಿಗೆ ರವಾನಿಸಿದರು. ಒಂದು ಕ್ಷಣವೂ ವ್ಯರ್ಥ ಮಾಡದ ಧೋನಿ ಹಿಂತಿರುಗಿ ನೋಡದೇ ಸ್ಟಂಪ್‌ಗೆ ಗುರಿಯಾಗಿಸಿ ಚೆಂಡನ್ನು ಹೊಡೆದು ನರೇನ್ ಗುರಿ ತಲುಪುವ ಮೊದಲೇ ಬೆಲ್ಸ್ ಬೀಳಿಸಿದರು.
ಧೋನಿಯ ಮಿಂಚಿನ ವೇಗದ ರನೌಟ್‌ನಿಂದ ಸೂಕ್ತ ನಿರ್ಧಾರಕ್ಕೆ ಬರಲಾಗದ ಅಂಪೈರ್ ಟಿವಿ ಅಂಪೈರ್‌ನ ಮೊರೆ ಹೋದರು. ರಿಪ್ಲೇಯನ್ನು ವೀಕ್ಷಿಸಿದ ಟಿವಿ ಅಂಪೈರ್ ನರೇನ್ ವಿರುದ್ಧ ಔಟ್ ತೀರ್ಪು ನೀಡಿದರು.