×
Ad

ಉಮರ್ ಅಕ್ಮಲ್-ಜುನೈದ್ ಖಾನ್ ನಡುವೆ ತೀವ್ರ ವಾಗ್ವಾದ

Update: 2017-04-28 13:12 IST

ಕರಾಚಿ, ಎ.28: ಪಾಕಿಸ್ತಾನ ಕಪ್(ನ್ಯಾಶನಲ್ ಏಕದಿನ) ಪಂದ್ಯದ ವೇಳೆ ತೀವ್ರ ವಾಗ್ವಾದ ನಡೆಸಿರುವ ಅಂತಾರಾಷ್ಟ್ರೀಯ ಕ್ರಿಕೆಟಿಗರಾದ ಉಮರ್ ಅಕ್ಮಲ್ ಹಾಗೂ ಜುನೈದ್ ಖಾನ್ ವಿರುದ್ಧ ತನಿಖೆ ನಡೆಸಲು ಪಾಕಿಸ್ತಾನ ಕ್ರಿಕೆಟ್ ಮಂಡಳಿ(ಪಿಸಿಬಿ) ತ್ರಿಸದಸ್ಯ ಸಮಿತಿಯನ್ನು ರಚಿಸಿದೆ.

ಪಂಜಾಬ್ ಪ್ರಾವಿನ್ಸ್ ತಂಡದ ನಾಯಕತ್ವವಹಿಸಿದ್ದ ಅಕ್ಮಲ್‌ರಲ್ಲಿ ಸಿಂಧ್ ತಂಡದ ವಿರುದ್ಧ ಯಾವ ಆಟಗಾರರನ್ನು ಕೈಬಿಡಲಾಗಿದೆ ಎಂದು ಕೇಳಲಾಗಿತ್ತು. ಇದಕ್ಕೆ ಉತ್ತರಿಸಿದ ಅಕ್ಮಲ್, ಆಲ್‌ರೌಂಡರ್ ನಾಸಿರ್ ನಝೀರ್ ಎಡಗೈ ವೇಗದ ಬೌಲರ್ ಜುನೈದ್ ಬದಲಿಗೆ ಆಡಲಿದ್ದಾರೆಂದು ಉತ್ತರಿಸಿದ್ದರು.

‘‘ನಾನು ಮೈದಾನಕ್ಕೆ ಬಂದ ಬಳಿಕವಷ್ಟೇ ಜುನೈದ್ ಖಾನ್ ಗೈರಾಗಿರುವುದು ಗೊತಾಯಿತು. ಮ್ಯಾನೇಜರ್ ಹಾಗೂ ಕೋಚ್ ಅವರು ಜುನೈದ್ ಇಂದು ಆಡುವುದಿಲ್ಲ ಎಂದು ಹೇಳಿದರು. ತಂಡದ ನಾಯಕನಾಗಿ ಈ ಸುದ್ದಿ ಕೇಳಿ ನನಗೆ ಆಶ್ಚರ್ಯವಾಯಿತು’’ ಎಂದು ಅಕ್ಮಲ್ ಹೇಳಿದ್ದಾರೆ.

ಅಕ್ಮಲ್ ಹೇಳಿಕೆಗೆ ಕೆರಳಿದ ಜುನೈದ್ ಖಾನ್ ತಾನು ವಾಸ್ತವ್ಯವಿದ್ದ ಹೊಟೇಲ್ ರೂಮ್‌ನಿಂದಲೇ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಸಂದೇಶವನ್ನು ರವಾನಿಸಿದ್ದಾರೆ. ‘‘ನಾನು ತಂಡವನ್ನು ಬಿಟ್ಟು ಓಡಿ ಹೋಗಿಲ್ಲ. ವಿಷಾಹಾರ ಸೇವನೆಯಿಂದ ಅಸೌಖ್ಯಗೊಂಡಿದ್ದು, ಈ ಬಗ್ಗೆ ತಂಡದ ಮ್ಯಾನೇಜ್‌ಮೆಂಟ್‌ಗೆ ತಿಳಿಸಿದ್ದೇನೆ. ಅವರಿಗೆ ಈ ವಿಷಯ ಗೊತ್ತಿದೆ. ತಂಡದ ವೈದ್ಯರು ನನಗೆ ವಿಶ್ರಾಂತಿ ಪಡೆಯಲು ಸಲಹೆ ನೀಡಿದ್ದರು’’ ಜುನೈದ್ ವಿಡಿಯೋ ಸಂದೇಶದಲ್ಲಿ ತಿಳಿಸಿದ್ದಾರೆ.

 ಜನರಲ್ ಮ್ಯಾನೇಜರ್ ಶಫೀಖ್ ಅಹ್ಮದ್ ಅಧ್ಯಕ್ಷತೆಯ ತ್ರಿಸದಸ್ಯ ತನಿಖಾ ಸಮಿತಿಯನ್ನು ರಚಿಸಿದ್ದು, ಸಮಿತಿಗೆ ವರದಿ ಸಲ್ಲಿಸಲು ಸೂಚಿಸಲಾಗಿದೆ. ಅಗತ್ಯವಿದ್ದರೆ ಶಿಸ್ತುಕ್ರಮ ಕೈಗೊಳ್ಳಲಾಗುತ್ತದೆ ಎಂದು ಪಿಸಿಬಿ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News