ಉತ್ತಪ್ಪ-ಗಂಭೀರ ಆಟ, ಕೆಕೆಆರ್ ಗೆಲುವಿನ ಕೇಕೆ

Update: 2017-04-28 17:55 GMT

ಕೋಲ್ಕತಾ, ಎ.28: ನಾಯಕ ಗೌತಮ್ ಗಂಭೀರ್ ಹಾಗೂ ರಾಬಿನ್ ಉತ್ತಪ್ಪ ಸಿಡಿಸಿದ ಆಕರ್ಷಕ ಅರ್ಧಶತಕ, ಕೌಲ್ಟರ್ ನೀಲ್ ಅಮೋಘ ಬೌಲಿಂಗ್ (3-36)ಸಹಾಯದಿಂದ ಕೋಲ್ಕತಾ ನೈಟ್ ರೈಡರ್ಸ್ ತಂಡ ಡೆಲ್ಲಿ ಡೇರ್ ಡೆವಿಲ್ಸ್ ವಿರುದ್ಧದ ಐಪಿಎಲ್ ಪಂದ್ಯವನ್ನು ಏಳು ವಿಕೆಟ್‌ಗಳ ಅಂತರದಿಂದ ಜಯಿಸಿದೆ.

 ಐತಿಹಾಸಿಕ ಈಡನ್‌ಗಾರ್ಡನ್ಸ್ ಸ್ಟೇಡಿಯಂನಲ್ಲಿ ಶುಕ್ರವಾರ ನಡೆದ ಐಪಿಎಲ್‌ನ 32ನೆ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಡೆಲ್ಲಿ ತಂಡ ಕೆಕೆಆರ್ ಗೆಲುವಿಗೆ 161 ರನ್ ಗುರಿ ನೀಡಿತು. 2ನೆ ಓವರ್‌ನಲ್ಲಿ ಸುನೀಲ್ ನರೇನ್ ವಿಕೆಟ್ ಕಳೆದುಕೊಂಡ ಕೆಕೆಆರ್‌ಗೆ ಗಂಭೀರ್(ಅಜೇಯ 71, 52 ಎಸೆತ, 11 ಬೌಂಡರಿ) ಹಾಗೂ ರಾಬಿನ್ ಉತ್ತಪ್ಪ(59, 33 ಎಸೆತ, 5 ಬೌಂಡರಿ, 4 ಸಿಕ್ಸರ್)2ನೆ ವಿಕೆಟ್‌ಗೆ 108 ರನ್ ಜೊತೆಯಾಟ ನಡೆಸಿ ಆಸರೆಯಾದರು.

 ಉತ್ತಪ್ಪ 59 ರನ್‌ಗೆ ರನೌಟಾದ ಬಳಿಕ ಮನೀಷ್ ಪಾಂಡೆ(5) ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲಿಲ್ಲ. ಅಜೇಯ 71 ರನ್ ಗಳಿಸಿದ ಗಂಭೀರ್ ಅವರು ಜಾಕ್ಸನ್(ಅಜೇಯ 12) ಅವರೊಂದಿಗೆ 4ನೆ ವಿಕೆಟ್‌ಗೆ ಮುರಿಯದ ಜೊತೆಯಾಟದಲ್ಲಿ 22 ರನ್ ಸೇರಿಸಿ ಇನ್ನೂ 22 ಎಸೆತಗಳು ಬಾಕಿ ಇರುವಾಗಲೇ ತಂಡವನ್ನು ಗೆಲುವಿನ ದಡ ಸೇರಿಸಿದರು.

ಐಪಿಎಲ್‌ನಲ್ಲಿ 35ನೆ ಅರ್ಧಶತಕ ಬಾರಿಸಿದ ಗಂಭೀರ್ ಈ ವರ್ಷ ಕೋಲ್ಕತಾ ತಂಡ ಡೆಲ್ಲಿ ವಿರುದ್ಧ ಸತತ 2ನೆ ಜಯ ಸಾಧಿಸಲು ನೆರವಾದರು. ಕೆಕೆಆರ್ ಎ.17 ರಂದು ನಡೆದಿದ್ದ ಪಂದ್ಯವನ್ನು 4 ವಿಕೆಟ್‌ಗಳಿಂದ ಜಯಿಸಿತ್ತು.

9ನೆ ಪಂದ್ಯದಲ್ಲಿ 7ನೆ ಗೆಲುವು ದಾಖಲಿಸಿ 14 ಅಂಕ ಗಳಿಸಿರುವ ಕೆಕೆಆರ್ ತಂಡ ಐಪಿಎಲ್ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೇರಿದೆ.

ಡೇರ್ ಡೆವಿಲ್ಸ್ 160/6: ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್‌ಗೆ ಆಹ್ವಾನಿಸಲ್ಪಟ್ಟ ಡೆಲ್ಲಿ ಡೇರ್ ಡೆವಿಲ್ಸ್ ತಂಡ ಆರಂಭಿಕ ಬ್ಯಾಟ್ಸ್‌ಮನ್ ಸಂಜು ಸ್ಯಾಮ್ಸನ್(60 ರನ್) ಹಾಗೂ ಶ್ರೇಯಸ್ ಐಯ್ಯರ್(47) 2ನೆ ವಿಕೆಟ್‌ಗೆ ಸೇರಿಸಿದ 75 ರನ್ ಜೊತೆಯಾಟದ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್‌ಗಳ ನಷ್ಟಕ್ಕೆ 160 ರನ್ ಗಳಿಸಿತು.

ಮೊದಲ 3 ಓವರ್‌ಗಳಲ್ಲಿ 31 ರನ್ ಗಳಿಸಿದ ಸ್ಯಾಮ್ಸನ್ ಹಾಗೂ ಕರುಣ್ ನಾಯರ್ ಡೆಲ್ಲಿಗೆ ಉತ್ತಮ ಆರಂಭ ನೀಡಿದರು. ಸ್ಪಿನ್ನರ್ ಸುನೀಲ್ ನರೇನ್ ತಾನೆಸೆದ ಮೊದಲ ಓವರ್‌ನ 5ನೆ ಎಸೆತದಲ್ಲಿ ನಾಯರ್(17 ರನ್, 15 ಎಸೆತ) ವಿಕೆಟ್ ಉಡಾಯಿಸಿದರು.

ಪ್ರಸ್ತುತ ಐಪಿಎಲ್‌ನಲ್ಲಿ ಉತ್ತಮ ಪ್ರದರ್ಶನ ಮುಂದುವರಿಸಿದ ಸ್ಯಾಮ್ಸನ್ 32 ಎಸೆತಗಳಲ್ಲಿ ಅರ್ಧಶತಕ ಪೂರೈಸಿ ಡೆಲ್ಲಿ ತಂಡವನ್ನು ಸ್ಪರ್ಧಾತ್ಮಕ ಮೊತ್ತದತ್ತ ಮುನ್ನಡೆಸಿದರು. ಅಯ್ಯರ್(47 ರನ್, 34 ಎಸೆತ, 4 ಬೌಂಡರಿ, 1 ಸಿಕ್ಸರ್) ಅವರೊಂದಿಗೆ 2ನೆ ವಿಕೆಟ್‌ಗೆ 75 ರನ್ ಜೊತೆಯಾಟ ನಡೆಸಿದ ಸ್ಯಾಮ್ಸನ್ ತಂಡವನ್ನು ಆಧರಿಸಿದರು.

ಅಪಾಯಕಾರಿ ಆಟಗಾರ ಸ್ಯಾಮ್ಸನ್(60 ರನ್, 38 ಎಸೆತ, 4 ಬೌಂಡರಿ, 3 ಸಿಕ್ಸರ್) ವಿಕೆಟ್ ಪಡೆದ ಉಮೇಶ್ ಯಾದವ್ 2ನೆ ವಿಕೆಟ್ ಜೊತೆಯಾಟಕ್ಕೆ ತೆರೆ ಎಳೆದರು.

ವೇಗದ ಬೌಲರ್ ಕೌಲ್ಟರ್-ನೀಲ್ 15ನೆ ಓವರ್‌ನ ಮೊದಲ ಎಸೆತದಲ್ಲಿ ರಿಷಬ್ ಪಂತ್(6) ವಿಕೆಟ್ ಪಡೆದು ಡೆಲ್ಲಿಗೆ ಆಘಾತ ನೀಡಿದರು. 16ನೆ ಓವರ್‌ನಲ್ಲಿ ಅಯ್ಯರ್ ವಿಕೆಟ್ ಪಡೆದ ಕೌಲ್ಟರ್-ನೀಲ್ ಡೆಲ್ಲಿಯ ರನ್ ವೇಗಕ್ಕೆ ಕಡಿವಾಣ ಹಾಕಿದರು.

ಆಲ್‌ರೌಂಡರ್‌ಗಳಾದ ಆ್ಯಂಡರ್ಸನ್(02) ಹಾಗೂ ಮೊರಿಸ್(11) ಹೆಚ್ಚುಹೊತ್ತು ಕ್ರೀಸ್‌ನಲ್ಲಿ ನಿಲ್ಲಲಿಲ್ಲ. ಚೊಚ್ಚಲ ಐಪಿಎಲ್ ಪಂದ್ಯ ಆಡಿರುವ ಅಂಕಿತ್ ಭಾವ್ನೆ ಅಜೇಯ 12 ರನ್ ಗಳಿಸಿದರು.

ಡೆಲ್ಲಿಯ ಪರವಾಗಿ ನಥಾನ್ ಕೌಲ್ಟರ್-ನೀಲ್(3-34) ಯಶಸ್ವಿ ಬೌಲರ್ ಎನಿಸಿಕೊಂಡರು.

ಸ್ಕೋರ್ ವಿವರ

ಡೆಲ್ಲಿ ಡೇರ್ ಡೆವಿಲ್ಸ್: 20 ಓವರ್‌ಗಳಲ್ಲಿ 160/6

ಸ್ಯಾಮ್ಸನ್ ಎಲ್‌ಬಿಡಬ್ಲು ಬಿ ಯಾದವ್ 60

ಕರುಣ್ ನಾಯರ್ ಎಲ್‌ಬಿಡಬ್ಲು ನರೇನ್ 15

ಶ್ರೇಯಸ್ ಐಯ್ಯರ್ ಎಲ್‌ಬಿಡಬ್ಲು ಕೌಲ್ಟರ್-ನೀಲ್ 47

ರಿಷಬ್ ಪಂತ್ ಎಲ್‌ಬಿಡಬ್ಲು ಕೌಲ್ಟರ್-ನೀಲ್ 06

ಕ್ರಿಸ್ ಮೊರಿಸ್ ಸಿ ವೋಕ್ಸ್ ಬಿ ಕೌಲ್ಟರ್-ನೀಲ್ 11

ಆ್ಯಂಡರ್ಸನ್ ರನೌಟ್ 02

ಅಂಕಿತ್ ಭಾವ್ನೆ ಅಜೇಯ 12

ಇತರ 07

ವಿಕೆಟ್ ಪತನ: 1-48, 2-123, 3-131, 4-140, 5-146, 6-159.

ಬೌಲಿಂಗ್ ವಿವರ:

ಕೌಲ್ಟರ್-ನೀಲ್ 4-0-34-3

ಉಮೇಶ್ ಯಾದವ್ 4-0-38-1

ಕ್ರಿಸ್ ವೋಕ್ಸ್ 3-0-20-0

ಸುನೀಲ್ ನರೇನ್ 4-0-25-1

ಕುಲ್‌ದೀಪ್‌ಯಾದವ್ 4-0-27-0

ಗ್ರಾಂಡ್‌ಹೊಮ್ 1-0-15-0.

ಕೋಲ್ಕತಾ ನೈಟ್ ರೈಡರ್ಸ್: 16.2 ಓವರ್‌ಗಳಲ್ಲಿ 161/3

ಸುನೀಲ್ ನರೇನ್ ಬಿ ರಬಾಡ 04

ಗೌತಮ್ ಗಂಭೀರ್ ಅಜೇಯ 71

ರಾಬಿನ್ ಉತ್ತಪ್ಪ ರನೌಟ್ 59

ಮನೀಷ್ ಪಾಂಡೆ ಬಿ ರಬಾಡ 05

ಜಾಕ್ಸನ್ ಅಜೇಯ 12

ಇತರ 10

ವಿಕೆಟ್ ಪತನ: 1-9, 2-117, 3-139

ಬೌಲಿಂಗ್ ವಿವರ:

ಝಹೀರ್ ಖಾನ್ 1.1-0-8-0

ರಬಾಡ 3.2-0-20-2

ಆ್ಯಂಡರ್ಸನ್ 2.5-0-27-0

ಮೊರಿಸ್ 3-0-39-0

ಕಮಿನ್ಸ್ 3-0-22-0

ಮಿಶ್ರಾ 3-0-36-0

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News