200ನೆ ಅಂತಾರಾಷ್ಟ್ರೀಯ ಹಾಕಿ ಪಂದ್ಯವನ್ನಾಡಿದ ಕನ್ನಡಿಗ ಸುನೀಲ್

Update: 2017-04-30 17:43 GMT

ಇಪೋ(ಮಲೇಷ್ಯಾ), ಎ.30: ಭಾರತ ಹಾಕಿ ತಂಡದ ಫಾರ್ವರ್ಡ್ ಆಟಗಾರ ಎಸ್.ವಿ.ಸುನೀಲ್ ರವಿವಾರ ದೇಶದ ಪರ 200ನೆ ಅಂತಾರಾಷ್ಟ್ರೀಯ ಪಂದ್ಯವನ್ನಾಡುವ ಮೂಲಕ ಹೊಸ ಮೈಲುಗಲ್ಲು ತಲುಪಿದರು.

‘ಕೊಡಗಿನ ಕುವರ’ ಸುನೀಲ್ 26ನೆ ಆವೃತ್ತಿಯ ಸುಲ್ತಾನ್ ಅಝ್ಲಾನ್ ಶಾ ಹಾಕಿ ಕಪ್‌ನಲ್ಲಿ ನ್ಯೂಝಿಲೆಂಡ್ ವಿರುದ್ಧದ ಪಂದ್ಯದಲ್ಲಿ ಈ ಮೈಲುಗಲ್ಲು ತಲುಪಿದರು.

ಚೆನ್ನೈನಲ್ಲಿ 2007ರಲ್ಲಿ ನಡೆದ ಏಷ್ಯಾಕಪ್‌ನಲ್ಲಿ ಸುನೀಲ್ ಚೊಚ್ಚಲ ಹಾಕಿ ಪಂದ್ಯ ಆಡಿದ್ದರು. 2008ರಲ್ಲಿ ನಡೆದಿದ್ದ ಸುಲ್ತಾನ್ ಅಝ್ಲಾನ್ ಶಾ ಹಾಕಿ ಟೂರ್ನಿಯಲ್ಲಿ ಬೆಳ್ಳಿ ಪದಕ ಗೆದ್ದ ತಂಡದ ಭಾಗವಾಗಿದ್ದರು.

2011ರ ಚಾಂಪಿಯನ್ಸ್ ಚಾಲೆಂಜ್‌ನಲ್ಲಿ ವೃತ್ತಿಜೀವನದ ಅತ್ಯುತ್ತಮ ಸಾಧನೆ ಮಾಡಿದ್ದ ಸುನೀಲ್ ಮೂರು ಗೋಲುಗಳನ್ನು ಬಾರಿಸಿದ್ದರು.

ಹಾಕಿ ಪಿಚ್‌ನಲ್ಲಿ ಅತ್ಯಂತ ವೇಗವಾಗಿ ಆಡುವ ಆಟಗಾರನೆಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಸುನೀಲ್ ಆಟ ಚಿತ್ತಾಕರ್ಷಕವಾಗಿರುತ್ತದೆ. ಕಳೆದ ವರ್ಷ ಲಂಡನ್‌ನಲಲಿ ನಡೆದಿದ್ದ 36ನೆ ಆವೃತ್ತಿಯ ಎಫ್‌ಐಎಚ್ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತೀಯ ತಂಡ ಬೆಳ್ಳಿ ಪದಕ ಜಯಿಸಿದ್ದಾಗ ಆ ತಂಡ ಮುಖ್ಯ ಆಟಗಾರನಾಗಿದ್ದ ಸುನೀಲ್ ಭಾರತ ತಂಡದ ಅತ್ಯಂತ ಪ್ರಮುಖ ಆಟಗಾರನಾಗಿದ್ದಾರೆ.

27ರ ಹರೆಯದ ಸುನೀಲ್‌ಗೆ ಏಷ್ಯಾ ಹಾಕಿ ಫೆಡರೇಶನ್ 2016ರಲ್ಲಿ ಏಷ್ಯಾ ವರ್ಷದ ಆಟಗಾರ ಪ್ರಶಸ್ತಿ ನೀಡಿ ಗೌರವಿಸಿತ್ತು.

2014ರ ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನದ ಪದಕ, 2015ರ ವರ್ಲ್ಡ್ ಲೀಗ್ ಫೈನಲ್‌ನಲ್ಲಿ ಕಂಚಿನ ಪದಕ ಗೆದ್ದುಕೊಂಡಿರುವ ಸುನೀಲ್ 2012ರ ಲಂಡನ್ ಗೇಮ್ಸ್ ಹಾಗೂ 2016ರ ರಿಯೋ ಗೇಮ್ಸ್‌ನಲ್ಲಿ ದೇಶವನ್ನು ಪ್ರತಿನಿಧಿಸಿದ್ದರು.

ಎಸ್‌ವಿ ಸುನೀಲ್ ಅವರ ಅಂತಾರಾಷ್ಟ್ರೀಯ ವೃತ್ತಿ ಜೀವನ ಅಪೂರ್ವವಾಗಿದ್ದು, ಕಳೆದ ಕೆಲವು ವರ್ಷಗಳಿಂದ ಭಾರತದ ಹಿರಿಯರ ತಂಡ ವಿಶ್ವ ರ್ಯಾಂಕಿಂಗ್‌ನಲ್ಲಿ ಮಹತ್ವದ ಸಾಧನೆ ಮಾಡಿದೆ. ಹೊಸ ಮೈಲುಗಲ್ಲು ತಲುಪಿದ ಸುನೀಲ್‌ಗೆ ನಾನು ಅಭಿನಂದನೆ ಸಲ್ಲಿಸುವೆ. ಭವಿಷ್ಯದಲ್ಲಿ ಇನ್ನಷ್ಟು ಯಶಸ್ಸನ್ನು ಕಾಣಲಿ. ಸುನೀಲ್ ಭಾರತದ ಯುವ ಹಾಕಿ ಆಟಗಾರರಿಗೆ ಸ್ಫೂರ್ತಿಯಾಗಿದ್ದಾರೆ.

ಹಾಕಿ ಪಿಚ್‌ನಲ್ಲಿ ವೀರೋಚಿತ ಪ್ರದರ್ಶನದಿಂದ ಇನ್ನಷ್ಟು ಯುವ ಆಟಗಾರರಿಗೆ ಪ್ರೇರಣೆಯಾಗಲಿ ಎಂದು ಹಾಕಿ ಇಂಡಿಯಾದ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಮುಶ್ತಾಕ್ ಅಹ್ಮದ್ ಶುಭ ಹಾರೈಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News