ನ್ಯೂಝಿಲೆಂಡ್ ವಿರುದ್ಧ ಭಾರತಕ್ಕೆ ಭರ್ಜರಿ ಜಯ

Update: 2017-04-30 17:45 GMT

ಇಪೋ(ಮಲೇಷ್ಯಾ), ಎ.30: ಡಿಫೆಂಡರ್ ಹರ್ಮನ್‌ಪ್ರೀತ್ ಸಿಂಗ್ ಬಾರಿಸಿದ ಅವಳಿ ಗೋಲುಗಳ ನೆರವಿನಿಂದ 26ನೆ ಆವೃತ್ತಿಯ ಸುಲ್ತಾನ್ ಅಝ್ಲಾನ್ ಶಾ ಹಾಕಿ ಟೂರ್ನಮೆಂಟ್‌ನಲ್ಲಿ ಭಾರತ ತಂಡ ನ್ಯೂಝಿಲೆಂಡ್‌ನ ವಿರುದ್ಧ 3-0 ಗೋಲುಗಳ ಅಂತರದಿಂದ ಜಯ ಸಾಧಿಸಿದೆ.

ಶನಿವಾರ ನಡೆದ ಟೂರ್ನಿಯ ಮೊದಲ ಪಂದ್ಯದಲ್ಲಿ ಭಾರತ ತಂಡ ಗ್ರೇಟ್ ಬ್ರಿಟನ್ ವಿರುದ್ಧ 2-2 ರಿಂದ ಡ್ರಾ ಸಾಧಿಸಿತ್ತು. ಇದೀಗ ಭಾರತ 2 ಪಂದ್ಯಗಳಲ್ಲಿ ನಾಲ್ಕು ಅಂಕ ಗಳಿಸಿದೆ.

 23ನೆ ನಿಮಿಷದಲ್ಲಿ ಗೋಲು ಬಾರಿಸಿದ ಮನ್‌ದೀಪ್ ಸಿಂಗ್ ಭಾರತಕ್ಕೆ 1-0 ಮುನ್ನಡೆ ಒದಗಿಸಿಕೊಟ್ಟರು. ನ್ಯೂಝಿಲೆಂಡ್ ತಂಡ ಆರನೆ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್ ಅವಕಾಶ ಪಡೆದಿತ್ತು. ಆದರೆ, ಗೋಲ್‌ಕೀಪರ್ ಪಿ.ಆರ್. ಶ್ರೀಜೇಶ್ ಕಿವೀಸ್‌ಗೆ ಗೋಲು ನಿರಾಕರಿಸಿದರು.

27ನೆ ನಿಮಿಷದಲ್ಲಿ ಗೋಲು ಬಾರಿಸಿದ ಹರ್ಮನ್‌ಪ್ರೀತ್ ಸಿಂಗ್ ಭಾರತದ ಮುನ್ನಡೆಯನ್ನು 2-0ಗೆ ವಿಸ್ತರಿಸಿದರು. ಮೊದಲಾರ್ಧ ಕೊನೆಗೊಳ್ಳುವ ಮೊದಲು ಭಾರತ ಎರಡು ಪೆನಾಲ್ಟಿ ಕಾರ್ನರ್ ಅವಕಾಶವನ್ನು ಪಡೆದಿತ್ತು. ಆದರೆ, ಎರಡೂ ಬಾರಿಯೂ ಗೋಲು ಬಾರಿಸಲು ವಿಫಲವಾಯಿತು.

47ನೆ ನಿಮಿಷದಲ್ಲಿ ಗೋಲು ಬಾರಿಸಿದ ಹರ್ಮನ್‌ಪ್ರೀತ್ ಭಾರತಕ್ಕೆ 3-0 ಅಂತರದ ಗೆಲುವು ತಂದುಕೊಟ್ಟರು.

ಕನ್ನಡಿಗ ಎಸ್.ವಿ. ಸುನೀಲ್ 200ನೆ ಅಂತಾರಾಷ್ಟ್ರೀಯ ಪಂದ್ಯವನ್ನು ಆಡಿದರು. ಭಾರತ ಮಂಗಳವಾರ ನಡೆಯಲಿರುವ ಟೂರ್ನಿಯ ಮೂರನೆ ಪಂದ್ಯದಲ್ಲಿ 9 ಬಾರಿಯ ಚಾಂಪಿಯನ್ ಆಸ್ಟ್ರೇಲಿಯವನ್ನು ಎದುರಿಸಲಿದೆ. ಆಸ್ಟ್ರೇಲಿಯ ತಂಡ 2016ರ ಸುಲ್ತಾನ್ ಅಝ್ಲಾನ್ ಶಾ ಹಾಕಿ ಫೈನಲ್‌ನಲ್ಲಿ ಭಾರತವನ್ನು 4-0 ಅಂತರದಿಂದ ಸೋಲಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News