ಫ್ಲೋರಿಡಾ ಚಾಲೆಂಜರ್: ಪೇಸ್-ಲಿಪ್‌ಸ್ಕಿ ಜೋಡಿಗೆ ಪ್ರಶಸ್ತಿ

Update: 2017-04-30 17:46 GMT

ಫ್ಲೋರಿಡಾ, ಎ.30: ಭಾರತದ ಹಿರಿಯ ಟೆನಿಸ್ ಆಟಗಾರ ಲಿಯಾಂಡರ್ ಪೇಸ್ ಈ ಋತುವಿನಲ್ಲಿ ಎರಡನೆ ಬಾರಿ ಚಾಲೆಂಜರ್ ಪ್ರಶಸ್ತಿಯನ್ನು ಜಯಿಸಿದರು. ಸಿಂಗಲ್ಸ್ ವಿಭಾಗದಲ್ಲಿ ಭಾರತದ ಯುವ ಆಟಗಾರ ರಾಮ್‌ಕುಮಾರ್ ರಾಮನಾಥನ್ ರನ್ನರ್-ಅಪ್‌ಗೆ ತೃಪ್ತಿಪಟ್ಟುಕೊಂಡರು.

ಅಗ್ರ ಶ್ರೇಯಾಂಕಿತ ಜೋಡಿ ಪೇಸ್ ಹಾಗೂ ಅಮೆರಿಕದ ಸ್ಕಾಟ್ ಲಿಪ್‌ಸ್ಕಿ ಪುರುಷರ ಡಬಲ್ಸ್‌ನ ಫೈನಲ್ ಪಂದ್ಯದಲ್ಲಿ ಅರ್ಜೆಂಟೀನದ 3ನೆ ಶ್ರೇಯಾಂಕದ ಲಿಯೊನಾರ್ಡೊ ಮಯೆರ್ ಹಾಗೂ ಮ್ಯಾಕ್ಸಿಮೊ ಗೊಂಝಾಲೆಝ್‌ರನ್ನು 4-6, 7-6(5), 10-7 ಸೆಟ್‌ಗಳ ಅಂತರದಿಂದ ಮಣಿಸಿದರು. ಈ ಮೂಲಕ ಫ್ಲೋರಿಡಾ ಓಪನ್ ಪ್ರಶಸ್ತಿಯನ್ನು ಗೆದ್ದುಕೊಂಡರು.

ಪೇಸ್ ಈ ಮೊದಲು ಆದಿಲ್ ಶಂಸುದ್ದೀನ್ ಜೊತೆಗೂಡಿ ಲಿಯೊನ್ ಚಾಲೆಂಜರ್ಸ್‌ ಟೂರ್ನಿಯಲ್ಲಿ ಡಬಲ್ಸ್ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದರು.

ಇದೇ ವೇಳೆ, ಪುರುಷರ ಸಿಂಗಲ್ಸ್ ಫೈನಲ್‌ನಲ್ಲಿ ಭಾರತದ ರಾಮ್‌ಕುಮಾರ್ ರಾಮನಾಥನ್ ಅವರು ಸ್ಲೋವೆನಿಯದ ಬ್ಲಾಝ್ ರೊಲಾ ವಿರುದ್ಧ 2-6, 7-6(6), 5-7 ಸೆಟ್‌ಗಳಿಂದ ಸೋತಿದ್ದಾರೆ. 48 ರ್ಯಾಂಕಿಂಗ್ ಪಾಯಿಂಟ್ಸ್‌ನ್ನು ಗಿಟ್ಟಿಸಿಕೊಂಡ ಭಾರತದ 22ರ ಹರೆಯದ ಆಟಗಾರ ರಾಮ್‌ಕುಮಾರ್ 6,360 ಡಾಲರ್ ಚೆಕ್‌ನ್ನು ಪಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News