ಏಷ್ಯನ್ ಅಥ್ಲೆಟಿಕ್ಸ್ ಗ್ರಾನ್‌ಪ್ರಿ: 8 ಪದಕ ಗೆದ್ದುಕೊಂಡ ಭಾರತ

Update: 2017-04-30 17:55 GMT

 ತೈಪೆ ಸಿಟಿ, ಎ.30: ಏಷ್ಯನ್ ಅಥ್ಲೆಟಿಕ್ಸ್ ಗ್ರಾನ್‌ಪ್ರಿ ಟೂರ್ನಿಯಲ್ಲಿ ಮುಹಮ್ಮದ್ ಅನಾಸ್ ಹಾಗೂ ಶಾಟ್‌ಪುಟ್ ಪಟು ಓಂ ಪ್ರಕಾಶ್ ಕರ್ಹಾನಾ ತಲಾ ಒಂದು ಚಿನ್ನದ ಪದಕ ಜಯಿಸಿದ್ದು, ಕೂಟದ ಅಂತಿಮ ದಿನವಾದ ರವಿವಾರ ಭಾರತ ಒಟ್ಟು 8 ಪದಕಗಳ ಗೊಂಚಲು ಪಡೆದುಕೊಂಡಿದೆ.

ವೀಸಾ ಸಮಸ್ಯೆಯಿಂದಾಗಿ ಟೂರ್ನಿಯ ಆರಂಭಿಕ ಪಂದ್ಯಗಳಿಂದ ಹೊರಗುಳಿದಿದ್ದ ಅನಾಸ್ ಈ ವರ್ಷ ಆಡಿದ ಮೊದಲ ಅಂತಾರಾಷ್ಟ್ರೀಯ ಸ್ಪರ್ಧೆಯಲ್ಲಿ 45.69 ಸೆಕೆಂಡ್‌ನಲ್ಲಿ ಗುರಿ ತಲುಪಿ ಚಿನ್ನದ ಪದಕ ಜಯಿಸಿದರು.

ಪುರುಷರ ಶಾಟ್‌ಪುಟ್ ವಿಭಾಗದಲ್ಲಿ 19.58 ಮೀ.ದೂರ ಶಾಟ್‌ಪುಟ್ ಎಸೆದಿದ್ದ ಓಂ ಪ್ರಕಾಶ್ ದೀರ್ಘಸಮಯದ ಬಳಿಕ ಮೊದಲ ಬಾರಿ ಚಿನ್ನದ ಪದಕವನ್ನು ತನ್ನದಾಗಿಸಿಕೊಂಡರು. ಚೀನಾದ ಯೂ ಜಿಯಾಕ್ಸಿಂಗ್(19.21) ಹಾಗೂ ಇರಾನ್‌ನ ಅಲಿ ಸಮರಿ(18.68) ಕ್ರಮವಾಗಿ ಬೆಳ್ಳಿ ಹಾಗೂ ಕಂಚಿನ ಪದಕವನ್ನು ಜಯಿಸಿದ್ದಾರೆ.

ಮನ್‌ಪ್ರೀತ್ ಕೌರ್(ಮಹಿಳೆಯರ ಶಾಟ್‌ಪುಟ್), ಟಿಂಟು ಲುಕಾ(ಮಹಿಳೆಯರ 800 ಮೀ. ಓಟ), ಜಿನ್ಸನ್ ಜಾನ್ಸನ್(ಪುರುಷರ 800 ಮೀ. ಓಟ) ಹಾಗೂ ದುತೀ ಚಂದ್(ಮಹಿಳೆಯರ 100 ಮೀ.) ತಲಾ ಒಂದು ಬೆಳ್ಳಿ ಪದಕವನ್ನು ಗೆದ್ದುಕೊಂಡರು. ನೀರಜ್ ಚೋಪ್ರಾ(ಪುರುಷರ ಜಾವೆಲಿನ್ ಎಸೆತ) ಹಾಗೂ ಎಂ.ಆರ್.ಪೂವಮ್ಮ(ಮಹಿಳೆಯರ 400 ಮೀ.) ಕಂಚಿನ ಪದಕಕ್ಕೆ ತೃಪ್ತಿಪಟ್ಟುಕೊಂಡರು.

ಶಾಟ್‌ಪುಟ್ ಪಟು ಮನ್‌ಪ್ರೀತ್ ಕೌರ್ 18.86 ಮೀ. ದೂರ ಶಾಟ್‌ಪುಟ್‌ನ್ನು ಎಸೆದು ಚಿನ್ನದ ಪದಕ ಗೆದ್ದುಕೊಂಡಿದ್ದಲ್ಲದೆ ತನ್ನದೇ ರಾಷ್ಟ್ರೀಯ ದಾಖಲೆ ಮುರಿದಿದ್ದರು. ಮಹಿಳೆಯರ 100 ಮೀ. ಓಟದಲ್ಲಿ ದುತೀ ಚಂದ್ 11.52 ಸೆಕೆಂಡ್ ಗುರಿ ತಲುಪಿ ಬೆಳ್ಳಿ ಪದಕವನ್ನು ಗೆದ್ದುಕೊಂಡಿದ್ದಾರೆ.

ಭಾರತ ಎ.24 ರಂದು ನಡೆದಿದ್ದ ಟೂರ್ನಿಯ ಮೊದಲ ಚರಣದಲ್ಲಿ ಏಳು ಪದಕಗಳು(1 ಚಿನ್ನ, 4 ಬೆಳ್ಳಿ, 2 ಕಂಚು) ಎ.27 ರಂದು ನಡೆದಿದ್ದ ಎರಡನೆ ಚರಣದಲ್ಲಿ ಆರು ಪದಕಗಳು(1 ಚಿನ್ನ, 4 ಬೆಳ್ಳಿ, 1 ಕಂಚು)ಗೆದ್ದುಕೊಂಡಿತ್ತು. ಇಂದು ಕೊನೆಗೊಂಡ ಕೂಟದಲ್ಲಿ ಒಟ್ಟು 8 ಪದಕವನ್ನು ಭಾರತ ಗೆದ್ದುಕೊಂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News