ವಾರ್ನರ್ ಶತಕ; ಸನ್‌ರೈಸರ್ಸ್‌ 209

Update: 2017-04-30 18:29 GMT

 ಹೈದರಾಬಾದ್ ಎ. 30: ನಾಯಕ ಡೇವಿಡ್ ವಾರ್ನರ್ ದಾಖಲಿಸಿದ ಭರ್ಜರಿ ಶತಕದ ನೆರವಿನಲ್ಲಿ ಸನ್‌ರೈಸರ್ಸ್‌ ಹೈದರಾಬಾದ್ ತಂಡ ಐಪಿಎಲ್ ಟ್ವೆಂಟಿ-20 ಟೂರ್ನಿಯ 37ನೆ ಪಂದ್ಯದಲ್ಲಿ ನಿಗದಿತ 20 ಓವರ್‌ಗಳಲ್ಲಿ 3 ವಿಕೆಟ್ ನಷ್ಟದಲ್ಲಿ 209 ರನ್ ಗಳಿಸಿತ್ತು.

 ಉಪ್ಪಳದ ರಾಜೀವ್ ಗಾಂಧಿ ಇಂಟರ್‌ನ್ಯಾಶನಲ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ನಾಯಕ ಡೇವಿಡ್ ವಾರ್ನರ್ ಸ್ಫೋಟಕ ಬ್ಯಾಟಿಂಗ್ ನಡೆಸಿದರು.59ಎಸೆತಗಳನ್ನು ಎದುರಿಸಿದ ಅವರು 10 ಬೌಂಡರಿ ಮತ್ತು 8 ಸಿಕ್ಸರ್ ನೆರವಿನಲ್ಲಿ 126 ರನ್ ಗಳಿಸಿದರು.

 ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಸನ್‌ರೈಸರ್ಸ್‌ ತಂಡದ ಇನಿಂಗ್ಸ್ ಆರಂಭಿಸಿದ ವಾರ್ನರ್ ಮತ್ತು ಶಿಖರ್ ಧವನ್ ಮೊದಲ ವಿಕೆಟ್‌ಗೆ 12.4 ಓವರ್‌ಗಳಲ್ಲಿ 139 ರನ್‌ಗಳ ಜೊತೆಯಾಟ ನೀಡಿದರು.

ಧವನ್ ಅವರು ವಾರ್ನರ್‌ಗೆ ಉತ್ತಮ ಬೆಂಬಲ ನೀಡಿದರು. ಧವನ್ 29ರನ್(30ಎ, 2ಬೌ,1ಸಿ) ಗಳಿಸಿ ರನೌಟಾದರು. ಕಳೆದ ಪಂದ್ಯದಲ್ಲಿ ಕೆಕೆಆರ್ ವಿರುದ್ಧ ಧವನ್ ಮತ್ತು ವಾರ್ನರ್ ಮೊದಲ ವಿಕೆಟ್‌ಗೆ 107 ರನ್‌ಗಳ ಜೊತೆಯಾಟ ನೀಡಿದ್ದರು. ಅದೇ ಪ್ರದರ್ಶನವನ್ನು ಈ ಪಂದ್ಯದಲ್ಲಿ ಮುಂದುವರಿಸಿದರು. ಪವರ್ ಪ್ಲೇಯ 6 ಓವರ್‌ಗಳಲ್ಲಿ ವಾರ್ನರ್ ಮತ್ತು ಧವನ್ 79 ರನ್‌ಗಳ ಕಾಣಿಕೆ ನೀಡಿ ಮತ್ತೊಮ್ಮೆ ದೊಡ್ಡ ಮೊತ್ತದ ಸವಾಲು ದಾಖಲಿಸುವ ಸೂಚನೆ ನೀಡಿದ್ದರು.

   ಮೂರನೆ ಓವರ್‌ನಲ್ಲಿ ವೋಕ್ಸ್ ಬೆವರಿಳಿಸಿದ ವಾರ್ನರ್ 2 ಸಿಕ್ಸರ್ ಮತ್ತು 1 ಬೌಂಡರಿ ಇರುವ 17 ರನ್ ಕಬಳಿಸಿದರು. ಯೂಸುಫ್ ಪಠಾಣ್ ಅವರ ಒಂದೇ ಓವರ್‌ನಲ್ಲಿ 1 ಸಿಕ್ಸರ್ ಮತ್ತು 2 ಬೌಂಡರಿ ಇರುವ 17 ರನ್ ಕೊಳ್ಳೆ ಹೊಡೆದರು. ಇವರ ಪವರ್‌ಫುಲ್ ಬ್ಯಾಟಿಂಗ್‌ನಿಂದಾಗಿ ಸನ್‌ರೈಸರ್ಸ್‌ ತಂಡ ಕೇವಲ 17 ಎಸೆತಗಳಲ್ಲಿ 50 ರನ್ ದಾಖಲಿಸಿತ್ತು.

 ಧವನ್ ನಿರ್ಗಮನದ ಬಳಿಕ ವಾರ್ನರ್‌ಗೆ ಕೇನ್ ವಿಲಿಯಮ್ಸನ್ ಸಾಥ್ ನೀಡಿದರು. ಇವರು ಎರಡನೆ ವಿಕೆಟ್‌ಗೆ ಜೊತೆಯಾಟದಲ್ಲಿ 32 ರನ್ ಸೇರಿಸಿದರು. ವಾರ್ನರ್ 16.2ನೆ ಓವರ್‌ನಲ್ಲಿ ವಾರ್ನರ್ ವೋಕ್ಸ್ ಎಸೆತದಲ್ಲಿ ಗಂಭೀರ್‌ಗೆ ಕ್ಯಾಚ್ ನೀಡಿದರು. ವಾರ್ನರ್ 43 ಎಸೆತಗಳಲ್ಲಿ 7 ಬೌಂಡರಿ ಮತ್ತು 8 ಸಿಕ್ಸರ್ ನೆರವಿನಲ್ಲಿ ಶತಕ ಪೂರ್ಣಗೊಳಿಸಿದರು. 10ನೆ ಓವರ್‌ನಲ್ಲಿ ಕುಲದೀಪ್ ಯಾದವ್ ಕೈ ಸುಟ್ಟುಕೊಂಡರು. ಯಾದವ್ ಒಂದೇ ಓವರ್‌ನಲ್ಲಿ ವಾರ್ನರ್‌ಗೆ 2 ಸಿಕ್ಸರ್ ಮತ್ತು 1 ಬೌಂಡರಿ ಒಳಗೊಂಡ 18 ರನ್ ಬಿಟ್ಟುಕೊಟ್ಟರು.

ವಿಲಿಯಮ್ಸನ್ ಮತ್ತು ಯುವರಾಜ್ ಸಿಂಗ್ ಮೂರನೆ ವಿಕೆಟ್‌ಗೆ 38 ರನ್‌ಗಳ ಜೊತೆಯಾಟ ನೀಡಿ ತಂಡದ ಸ್ಕೋರ್ 200ರ ಗಡಿ ದಾಟುವಲ್ಲಿ ನೆರವಾದರು. ವಿಲಿಯಮ್ಸನ್(40) ಕೊನೆಯ ಓವರ್‌ನ ಕೊನೆಯ ಎಸೆತದಲ್ಲಿ ರನೌಟಾದರು. ಯುವರಾಜ್ ಸಿಂಗ್ ಔಟಾಗದೆ 6 ರನ್ ಗಳಿಸಿದರು.

ಇದರೊಂದಿಗೆ ಹೈದರಾಬಾದ್ ಮೂರನೆ ಬಾರಿ 200ಕ್ಕಿಂತ ಅಧಿಕ ರನ್ ದಾಖಲಿಸಿದೆ. ಆರ್‌ಸಿಬಿ ವಿರುದ್ಧ 4 ವಿಕೆಟ್ ನಷ್ಟದಲ್ಲಿ 207 ರನ್ ಗಳಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News