ಪಾಕಿಸ್ತಾನ ತಂಡ ಮೊದಲ ಇನಿಂಗ್ಸ್‌ನಲ್ಲಿ 81 ರನ್ ಮುನ್ನಡೆ
ಬಾರ್ಬಡೊಸ್, ಮೇ 3: ಆತಿಥೇಯ ವೆಸ್ಟ್‌ಇಂಡೀಸ್ ವಿರುದ್ಧ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಪಾಕಿಸ್ತಾನ ತಂಡ ಮೊದಲ ಇನಿಂಗ್ಸ್‌ನಲ್ಲಿ 81 ರನ್ ಮುನ್ನಡೆ ಸಾಧಿಸಿದ್ದು, ಅಝರ್ ಅಲಿ ಶತಕ ಪೂರೈಸಿದರೆ, ನಾಯಕ ಮಿಸ್ಬಾವುಲ್ ಹಕ್ ಸತತ ಎರಡನೆ ಬಾರಿ ಶತಕ ವಂಚಿತರಾದರು.
ವಿಂಡೀಸ್‌ನ ಮೊದಲ ಇನಿಂಗ್ಸ್ ಮೊತ್ತ 321 ರನ್‌ಗೆ ಉತ್ತರವಾಗಿ ಪಾಕ್ ತಂಡ 393 ರನ್ ಗಳಿಸಿ ಆಲೌಟಾಯಿತು. 3 ವಿಕೆಟ್‌ನಷ್ಟಕ್ಕೆ 173 ರನ್‌ನಿಂದ ಬ್ಯಾಟಿಂಗ್ ಮುಂದುವರಿಸಿದ ಪಾಕ್ ಪರ ಆರಂಭಿಕ ಆಟಗಾರ ಅಝರ್ ಅಲಿ(105 ರನ್, 278 ಎಸೆತ, 9 ಬೌಂಡರಿ) 13ನೆ ಟೆಸ್ಟ್ ಶತಕ ಪೂರೈಸಿದರು. ಅಲಿ ತನ್ನ ಮ್ಯಾರಥಾನ್ ಇನಿಂಗ್ಸ್‌ನಲ್ಲಿ 278 ಎಸೆತ ಎದುರಿಸಿದರೂ ಕೇವಲ 9 ಬೌಂಡರಿ ಬಾರಿಸಿದರು.
ಜಮೈಕಾದಲ್ಲಿ ನಡೆದ ಮೊದಲ ಟೆಸ್ಟ್‌ನ ಮೊದಲ ಇನಿಂಗ್ಸ್‌ನಲ್ಲಿ ಅಜೇಯ 99 ರನ್ ಗಳಿಸಿದ್ದ ಮಿಸ್ಬಾವುಲ್ ಹಕ್ 2ನೆ ಟೆಸ್ಟ್‌ನಲ್ಲಿ 99 ರನ್ ಗಳಿಸಿದ್ದಾಗ ಹೋಲ್ಡರ್‌ಗೆ ವಿಕೆಟ್ ಒಪ್ಪಿಸಿ ಕೇವಲ ಒಂದು ರನ್‌ನಿಂದ ಶತಕ ವಂಚಿತರಾದರು.
ಸುಮಾರು 5 ಗಂಟೆ ಕ್ರೀಸ್ ಆಕ್ರಮಿಸಿಕೊಂಡಿದ್ದ ಮಿಸ್ಬಾ 201 ಎಸೆತಗಳನ್ನು ಎದುರಿಸಿದ್ದು, 9 ಬೌಂಡರಿ, 2 ಸಿಕ್ಸರ್ ಸಿಡಿಸಿದರು. ಮಿಸ್ಬಾವುಲ್ ಹಕ್ ಅವರು ಔಟಾಗುವ ಮೊದಲು ಅಲಿಯೊಂದಿಗೆ 4ನೆ ವಿಕೆಟ್‌ಗೆ 98 ರನ್ ಹಾಗೂ ಅಸದ್ ಶಫೀಕ್‌ರೊಂದಿಗೆ 7ನೆ ವಿಕೆಟ್‌ಗೆ 57 ರನ್ ಜೊತೆಯಾಟ ನಡೆಸಿದ್ದರು.
ವಿಂಡೀಸ್‌ನ ಪರ ಗ್ಯಾಬ್ರಿಯಲ್(4-81) ಯಶಸ್ವಿ ಬೌಲರ್ ಎನಿಸಿಕೊಂಡರು. ಹೋಲ್ಡರ್(3-43) ಹಾಗೂ ಬಿಶೂ(3-116) ತಲಾ ಮೂರು ವಿಕೆಟ್ ಪಡೆದರು.