ಕ್ರಿಸ್ಟಿಯಾನೊ ರೊನಾಲ್ಡೊ ತ್ರಿವಳಿ ಗೋಲು
ಮ್ಯಾಡ್ರಿಡ್,ಮೇ 3: ಕ್ರಿಸ್ಟಿಯಾನೊ ರೊನಾಲ್ಡೊ ಬಾರಿಸಿದ ಹ್ಯಾಟ್ರಿಕ್ ಗೋಲು ನೆರವಿನಿಂದ ರಿಯಲ್ ಮ್ಯಾಡ್ರಿಡ್ ತಂಡ ಅಟ್ಲೆಟಿಕೊ ಮ್ಯಾಡ್ರಿಡ್ ವಿರುದ್ಧದ ಚಾಂಪಿಯನ್ಸ್ ಲೀಗ್‌ನ ಮೊದಲ ಸೆಮಿ ಫೈನಲ್ ಪಂದ್ಯದಲ್ಲಿ 3-0 ಅಂತರದ ಜಯ ಸಾಧಿಸಿದೆ.
ಮಂಗಳವಾರ ಇಲ್ಲಿ ನಡೆದ ಮೊದಲ ಚರಣದ ಸೆಮಿ ಫೈನಲ್‌ನಲ್ಲಿ ರೊನಾಲ್ಡೊ ಅವರು 10ನೆ ನಿಮಿಷದಲ್ಲಿ ಮೊದಲ ಗೋಲು ಬಾರಿಸಿ ಮ್ಯಾಡ್ರಿಡ್‌ಗೆ 1-0 ಮುನ್ನಡೆ ಒದಗಿಸಿದರು. 73ನೆ ಹಾಗೂ 86ನೆ ನಿಮಿಷದಲ್ಲಿ ಇನ್ನೆರಡು ಗೋಲುಗಳನ್ನು ಬಾರಿಸಿದ ರೊನಾಲ್ಡೊ ರಿಯಲ್ ಮ್ಯಾಡ್ರಿಡ್‌ಗೆ ಭರ್ಜರಿ ಜಯ ತಂದುಕೊಟ್ಟರು. ಈ ಮೂಲಕ ತಂಡವನ್ನು ಫೈನಲ್‌ನತ್ತ ಕೊಂಡೊಯ್ದಿದ್ದಾರೆ.
ಈ ಸೋಲಿನೊಂದಿಗೆ ಅಟ್ಲೆಟಿಕೊ ತಂಡ ಚಾಂಪಿಯನ್ಸ್ ಲೀಗ್ ಸ್ಪರ್ಧೆಯಿಂದ ಹೊರ ನಡೆದಿದೆ. ರಿಯಲ್ ಮ್ಯಾಡ್ರಿಡ್ ಹಾಗೂ ಅಟ್ಲೆಟಿಕೊ ಮ್ಯಾಡ್ರಿಡ್ ತಂಡಗಳು ಮೇ 10ರಂದು ಎರಡನೆ ಬಾರಿ ಸೆಮಿಫೈನಲ್ ಪಂದ್ಯವನ್ನು ಆಡುತ್ತವೆ.
ನಾಲ್ಕು ಬಾರಿ ವಿಶ್ವದ ವರ್ಷದ ಆಟಗಾರ ಪ್ರಶಸ್ತಿ ಪಡೆದಿರುವ ರೊನಾಲ್ಡೊ ಈ ಋತುವಿನಲ್ಲಿ ಎರಡನೆ ಬಾರಿ ಅಟ್ಲೆಟಿಕೊ ವಿರುದ್ಧ ಹ್ಯಾಟ್ರಿಕ್ ಗೋಲು ಬಾರಿಸಿದ್ದಾರೆ.
ಚಾಂಪಿಯನ್ ಲೀಗ್‌ನಲ್ಲಿ ಏಳನೆ ಬಾರಿ ಹ್ಯಾಟ್ರಿಕ್ ಗೋಲು ಬಾರಿಸಿದ ರೊನಾಲ್ಡೊ ಅವರು ಅರ್ಜೆಂಟೀನದ ಸ್ಟಾರ್ ಆಟಗಾರ ಲಿಯೊನೆಲ್ ಮೆಸ್ಸಿಯೊಂದಿಗೆ ದಾಖಲೆ ಹಂಚಿಕೊಂಡರು. ರೊನಾಲ್ಡೊ ವೃತ್ತಿಬದುಕಿನಲ್ಲಿ 47ನೆ ಬಾರಿ ಹ್ಯಾಟ್ರಿಕ್ ಗೋಲು ಬಾರಿಸಿದ್ದಾರೆ.
ರೊನಾಲ್ಡೊ ಯುರೋಪಿಯನ್ ಕಪ್ ಹಾಗೂ ಚಾಂಪಿಯನ್ಸ್ ಲೀಗ್‌ನ ಸೆಮಿ ಫೈನಲ್‌ನಲ್ಲಿ 13ನೆ ಗೋಲು ಬಾರಿಸಿದರು. ರೊನಾಲ್ಡೊ ರಿಯಲ್ ಮ್ಯಾಡ್ರಿಡ್‌ಪರ 10, ಮ್ಯಾಂಚೆಸ್ಟರ್ ಯುನೈಟೆಡ್ ಪರ 3 ಗೋಲು ಬಾರಿಸಿದ್ದಾರೆ.