4 ಎಸೆತಗಳಲ್ಲಿ 92 ರನ್ ನೀಡಿದ್ದ ಬೌಲರ್‌ಗೆ 10 ವರ್ಷ ನಿಷೇಧ
ಢಾಕಾ, ಮೇ 3: ಅಂಪೈರ್ ನೀಡಿದ ಕಳಪೆ ನಿರ್ಧಾರವನ್ನು ಪ್ರತಿಭಟಿಸಿ ಬಾಂಗ್ಲಾದ ಕ್ಲಬ್ ಕ್ರಿಕೆಟ್ ಪಂದ್ಯವೊಂದರಲ್ಲಿ 4 ಎಸೆತಗಳಲ್ಲಿ 92 ರನ್ ನೀಡಿದ್ದ ಬೌಲರ್ ಸುಜೊನ್ ಮುಹಮ್ಮದ್‌ಗೆ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ(ಬಿಸಿಬಿ) 10 ವರ್ಷಗಳ ಕಾಲ ನಿಷೇಧ ಹೇರಿದೆ.
ಢಾಕಾ ಸೆಕೆಂಡ್ ಡಿವಿಜನ್ ಲೀಗ್‌ನಲ್ಲಿ ಲಾಲ್‌ಮಟಿಯ ಕ್ಲಬ್‌ನ್ನು ಪ್ರತಿನಿಧಿಸಿದ್ದ ಮುಹಮ್ಮದ್ ಉದ್ದೇಶಪೂರ್ವಕವಾಗಿಯೇ ಇಷ್ಟೊಂದು ರನ್ ನೀಡಿದ್ದರು. ಕ್ರಿಕೆಟ್ ಪಂದ್ಯಕ್ಕೆ ಅಗೌರವ ತೋರಿದ ಮುಹಮ್ಮದ್ ವಿರುದ್ಧ ಕಠಿಣ ಕ್ರಮಕೈಗೊಳ್ಳಲು ನಿರ್ಧರಿಸಿರುವ ಬಿಸಿಬಿ, ಕ್ಲಬ್‌ನ ಕೋಚ್, ನಾಯಕ ಹಾಗೂ ಮ್ಯಾನೇಜರ್‌ಗೆ ತಲಾ 5 ವರ್ಷ ನಿಷೇಧ ವಿಧಿಸಿದೆ.
ಕಳೆದ ತಿಂಗಳು ನಡೆದಿದ್ದ 50 ಓವರ್‌ಗಳ ಪಂದ್ಯದಲ್ಲಿ ಲಾಲ್‌ಮಟಿಯ ಕ್ಲಬ್ 14 ಓವರ್‌ಗಳಲ್ಲಿ ಕೇವಲ 88 ರನ್‌ಗೆ ಆಲೌಟಾಗಿತ್ತು. ಎದುರಾಳಿ ಅಕ್ಸಿಯೊಮ್ ಆಟಗಾರರು ಲಾಲ್‌ಮಟಿಯ ಕ್ಲಬ್ ಬೌಲರ್ ಸರಿಯಾಗಿ ಎಸೆದಿದ್ದ ನಾಲ್ಕು ಎಸೆತಗಳ ನೆರವಿನಿಂದ ವಿಕೆಟ್ ನಷ್ಟವಿಲ್ಲದೆ 92 ರನ್ ಗಳಿಸಿದರು.
ಸುಜೋನ್ ಉದ್ದೇಶಪೂರ್ವಕವಾಗಿ ಮೊದಲ ಓವರ್‌ನಲ್ಲಿ 13 ವೈಡ್‌ಗಳು ಹಾಗೂ 3 ನೋ-ಬಾಲ್ ಎಸೆದಿದ್ದರು. ಈ ಎಲ್ಲ ಎಸೆತಗಳು ಬೌಂಡರಿ ಗೆರೆ ದಾಟಿದ್ದವು. ಇತರೇ ರನ್ 80 ಆಗಿತ್ತು. ಆರಂಭಿಕ ಬ್ಯಾಟ್ಸ್‌ಮನ್ ಮುಸ್ತಫಿಝುರ್ರಹ್ಮಾನ್ 12 ರನ್ ಗಳಿಸಿದರು.