×
Ad

ಸುಲ್ತಾನ್ ಅಝ್ಲಾನ್ ಶಾ ಟೂರ್ನಿಯಿಂದ ಶ್ರೀಜೇಶ್ ಔಟ್

Update: 2017-05-03 22:58 IST

ಇಪೋ(ಮಲೇಷ್ಯಾ), ಮೇ.3: ಹಾಲಿ ಚಾಂಪಿಯನ್ ಆಸ್ಟ್ರೇಲಿಯ ವಿರುದ್ಧದ ಸುಲ್ತಾನ್ ಅಝ್ಲಾನ್ ಶಾ ಹಾಕಿ ಕಪ್ ಪಂದ್ಯದ ವೇಳೆ ಮಂಡಿನೋವಿಗೆ ಒಳಗಾಗಿರುವ ಭಾರತದ ನಾಯಕ ಹಾಗೂ ಗೋಲ್‌ಕೀಪರ್ ಪಿ.ಆರ್.ಶ್ರೀಜೇಶ್ ಟೂರ್ನಿಯಿಂದ ಹೊರಗುಳಿದಿದ್ದಾರೆ.

 ಆಸ್ಟ್ರೇಲಿಯ ವಿರುದ್ಧ ಪಂದ್ಯದಲ್ಲಿ ಆಸ್ಟ್ರೇಲಿಯ ಸ್ಟ್ರೈಕರ್ ಭಾರತದ ಸರ್ಕಲ್‌ನತ್ತ ಬಾರಿಸಿದ ಚೆಂಡನ್ನು ತಡೆಯಲು ಜಿಗಿದಾಗ ಕೇರಳದ ಗೋಲ್‌ಕೀಪರ್ ಶ್ರೀಜೇಶ್‌ಗೆ ಮಂಡಿನೋವು ಕಾಣಿಸಿಕೊಂಡಿದ್ದು, ಈ ನೋವು ಗುಣಮುಖವಾಗಲು ಎರಡರಿಂದ ಮೂರು ತಿಂಗಳ ವಿಶ್ರಾಂತಿಯ ಅಗತ್ಯವಿದೆ ಎಂದು ಮೂಲಗಳು ತಿಳಿಸಿವೆ.

28ರ ಹರೆಯದ ಶ್ರೀಶಾಂತ್ ನಡೆದಾಡಲು ಊರುಗೋಲನ್ನು ಬಳಸಿಕೊಳ್ಳುತ್ತಿದ್ದು, ಗ್ಯಾಲರಿಯಲ್ಲಿ ಕುಳಿತುಕೊಂಡು ತಂಡದ ಅಭ್ಯಾಸವನ್ನು ವೀಕ್ಷಿಸಿದರು.

‘‘ಶ್ರೀಜೇಶ್ ಬಲಮಂಡಿಗೆ ಇಂದು ನಡೆಸಲಾಗಿದ್ದ ಸ್ಕಾನಿಂಗ್‌ನಲ್ಲಿ ಗಾಯಗೊಂಡಿರುವುದು ಗೊತ್ತಾಗಿದೆ. ಅವರು ಈಗ ನಡೆಯುತ್ತಿರುವ ಟೂರ್ನಿಯಲ್ಲಿ ಇನ್ನು ಮುಂದೆ ಆಡುವುದಿಲ್ಲ. ಜೂನ್‌ನಲ್ಲಿ ಲಂಡನ್‌ನಲ್ಲಿ ನಡೆಯಲಿರುವ ವರ್ಲ್ಡ್ ಲೀಗ್ ಸೆಮಿ ಫೈನಲ್‌ನಲ್ಲಿ ಆಡುವ ಬಗ್ಗೆಯೂ ಸಂಶಯವಿದೆ. ತನಗಾಗಿರುವ ಗಾಯ ಗುಣಮುಖವಾಗಲು 2 ರಿಂದ 3 ತಿಂಗಳು ಬೇಕಾಗುತ್ತದೆ ಎಂದು ಸ್ವತಹ ಶ್ರೀಜೇಶ್ ಹೇಳಿದ್ದಾರೆ’’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಭಾರತದ ಪ್ರಮುಖ ಗೋಲ್‌ಕೀಪರ್ ಶ್ರೀಜೇಶ್‌ರನ್ನು ವರ್ಲ್ಡ್ ಲೀಗ್ ಸೆಮಿಫೈನಲ್‌ನಲ್ಲಿ ಆಡಿಸುವ ಗೋಜಿಗೆ ಹೋಗದಿರಲು ನಿರ್ಧರಿಸಲಾಗಿದೆ. ಭಾರತ ಈಗಾಗಲೇ ಭುವನೇಶ್ವರದಲ್ಲಿ ನಡೆಯಲಿರುವ ವರ್ಲ್ಡ್ ಲೀಗ್ ಫೈನಲ್ಸ್‌ನಲ್ಲಿ ಅರ್ಹತೆ ಗಿಟ್ಟಿಸಿಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಳೆದ ವರ್ಷ ಲಂಡನ್‌ನಲ್ಲಿ ನಡೆದಿದ್ದ ಚಾಂಪಿಯನ್ಸ್ ಟ್ರೋಫಿಗೆ ಶ್ರೀಜೇಶ್‌ರನ್ನು ಭಾರತದ ನಾಯಕನಾಗಿ ಆಯ್ಕೆ ಮಾಡಲಾಗಿತ್ತು. ಸರ್ದಾರ್ ಸಿಂಗ್ ಉತ್ತರಾಧಿಕಾರಿಯಾಗಿ ನೇಮಕಗೊಂಡಿದ್ದ ಶ್ರೀಜೇಶ್ ನೇತೃತ್ವದಲ್ಲಿ ಭಾರತ ಫೈನಲ್‌ನಲ್ಲಿ ಆಸ್ಟ್ರೇಲಿಯಕ್ಕೆ ಶರಣಾಗಿ ರನ್ನರ್ಸ್‌-ಅಪ್‌ಗೆ ತೃಪ್ತಿಪಟ್ಟುಕೊಂಡಿತ್ತು. ಶ್ರೀಜೇಶ್ ರಿಯೋ ಡಿ ಜನೈರೋದಲ್ಲಿ ನಡೆದಿದ್ದ ಒಲಿಂಪಿಕ್ ಗೇಮ್ಸ್‌ನಲ್ಲೂ ಭಾರತದ ನಾಯಕತ್ವವನ್ನು ವಹಿಸಿಕೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News