×
Ad

ಪುಣೆ ಪುಟಿದೇಳಲು ಇಮ್ರಾನ್ ತಾಹಿರ್ ನೆರವು

Update: 2017-05-04 22:54 IST

ಹೊಸದಿಲ್ಲಿ, ಮೇ 4: ಹತ್ತನೆ ಆವೃತ್ತಿಯ ಐಪಿಎಲ್ ಟೂರ್ನಿ ನಾಲ್ಕನೆ ವಾರದಲ್ಲಿ(ಎ.27-ಮೇ 3) ಸತತ ಮೂರು ಪಂದ್ಯಗಳನ್ನು ಜಯಿಸಿರುವ ರೈಸಿಂಗ್ ಪುಣೆ ಸೂಪರ್ ಜೈಂಟ್ ಫೀನಿಕ್ಸ್ ಹಕ್ಕಿಯಂತೆ ಮೇಲೆದ್ದು ಬಂದಿದೆ. ಪುಣೆ ತಂಡದ ಸ್ಪಿನ್ ಬೌಲರ್ ಇಮ್ರಾನ್ ತಾಹಿರ್ 6.75 ಇಕಾನಮಿ ರೇಟ್‌ನಲ್ಲಿ 7 ವಿಕೆಟ್‌ಗಳನ್ನು ಕಬಳಿಸಿ ತಂಡದ ಸತತ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಹೈದರಾಬಾದ್ ಬೌಲರ್ ಭುವನೇಶ್ವರ ಕುಮಾರ್(21) ಬಳಿಕ ಟೂರ್ನಿಯಲ್ಲಿ ಎರಡನೆ ಗರಿಷ್ಠ ವಿಕೆಟ್‌ಗಳನ್ನು(17) ಕಬಳಿಸಿ ಗಮನ ಸೆಳೆದಿದ್ದಾರೆ.

ಪುಣೆಯ ಪ್ರಬಲ ಪ್ರತಿ ಹೋರಾಟದಲ್ಲಿ ನಾಯಕ ಸ್ಟೀವನ್ ಸ್ಮಿತ್, ಯುವ ಆಟಗಾರ ರಾಹುಲ್ ತ್ರಿಪಾಠಿ, ಮನೋಜ್ ತಿವಾರಿ, ನ್ಯೂಝಿಲೆಂಡ್‌ನ ಲಾಕಿ ಫರ್ಗ್ಯುಸನ್(4-1-7-2), ಜಯದೇವ್ ಉನದ್ಕಟ್ ಹಾಗೂ ಲಯನ್ಸ್ ವಿರುದ್ಧ ಚೊಚ್ಚಲ ಟ್ವೆಂಟಿ-20 ಶತಕ ಸಿಡಿಸಿದ್ದ ಬೆನ್ ಸ್ಟೋಕ್ಸ್(ಅಜೇಯ 103, 63 ಎಸೆತ) ಮಹತ್ವದ ಕೊಡುಗೆ ನೀಡಿದ್ದಾರೆ.

ಆರ್‌ಪಿಎಸ್‌ನ ಕಳೆದ ವಾರದ ಯಶಸ್ಸಿನಲ್ಲಿ ದಕ್ಷಿಣ ಆಫ್ರಿಕದ ನಂ.1 ಟ್ವೆಂಟಿ-20 ಬೌಲರ್ ತಾಹಿರ್ ಕೊಡುಗೆ ಅಪಾರವಿದೆ. ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿ ಪವನ್ ನೇಗಿ, ಆಡಮ್ ಮಿಲ್ನೆ ಹಾಗೂ ಸ್ಯಾಮುಯೆಲ್ ಬದ್ರಿ ವಿಕೆಟ್ ಕಬಳಿಸಿ 96 ರನ್‌ಗೆ ಆಲೌಟ್ ಮಾಡಿದ್ದರು. ಗುಜರಾತ್ ವಿರುದ್ಧದ ಪಂದ್ಯದಲ್ಲಿ 27 ರನ್‌ಗೆ 3 ವಿಕೆಟ್‌ಗಳನ್ನು ಉರುಳಿಸಿದ್ದರು. ಗುಜರಾತ್‌ನ ಇಶಾನ್ ಕಿಶನ್, ಆ್ಯರೊನ್ ಫಿಂಚ್ ಹಾಗೂ ಡ್ವೆಯ್ನೆ ಸ್ಮಿತ್ ವಿಕೆಟ್‌ನ್ನು ಉರುಳಿಸಿ 10ನೆ ಓವರ್‌ನಲ್ಲಿ 94 ರನ್‌ಗೆ 4 ವಿಕೆಟ್ ಕಳೆದುಕೊಳ್ಳಲು ಕಾರಣರಾಗಿದ್ದರು.

ತಾಹಿರ್ ಇತ್ತೀಚೆಗೆ ಕೋಲ್ಕತಾದಲ್ಲಿ ನಡೆದಿದ್ದ ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಅಪಾಯಕಾರಿ ಬ್ಯಾಟ್ಸ್‌ಮನ್ ಯೂಸುಫ್ ಪಠಾಣ್ ವಿಕೆಟ್ ಪಡೆದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News