ಆತಿಥೇಯ ಮಲೇಷ್ಯಾಕ್ಕೆ ಇಂದು ಭಾರತ ಸವಾಲು
ಇಪೋ, ಮೇ 4: ಇಪ್ಪತ್ತಾರನೆ ಆವೃತ್ತಿಯ ಸುಲ್ತಾನ್ ಅಝ್ಲಾನ್ ಶಾ ಕಪ್ ಹಾಕಿ ಟೂರ್ನಿಯಲ್ಲಿ ಫೈನಲ್‌ಗೆ ತಲುಪುವತ್ತ ಚಿತ್ತವಿರಿಸಿರುವ ಭಾರತ ತಂಡ ಶುಕ್ರವಾರ ನಡೆಯಲಿರುವ ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ಆತಿಥೇಯ ಮಲೇಷ್ಯಾ ತಂಡವನ್ನು ಎದುರಿಸಲಿದೆ.
ಹಾಲಿ ಚಾಂಪಿಯನ್ ಆಸ್ಟ್ರೇಲಿಯಕ್ಕೆ ಪ್ರಶಸ್ತಿ ಸುತ್ತು ತಲುಪಲು ಜಪಾನ್ ವಿರುದ್ಧ ಕನಿಷ್ಠ ಡ್ರಾ ಸಾಧಿಸುವ ಅಗತ್ಯವಿದೆ. ಭಾರತ ಫೈನಲ್‌ಗೆ ತಲುಪಬೇಕಾದರೆ ಮಲೇಷ್ಯಾ ವಿರುದ್ಧ ಎಚ್ಚರಿಕೆ ಆಟ ಪ್ರದರ್ಶಿಸಬೇಕಾಗಿದೆ. ರೌಂಡ್-ರಾಬಿನ್ ಹಂತದ ಅಂಕಪಟ್ಟಿಯಲ್ಲಿ ಭಾರತಕ್ಕೆ ಗ್ರೇಟ್ ಬ್ರಿಟನ್ ತೀವ್ರ ಸ್ಪರ್ಧೆಯೊಡ್ಡುತ್ತಿದೆ.
ಮನ್‌ದೀಪ್ ಸಿಂಗ್ ಜಪಾನ್ ವಿರುದ್ಧ ಬುಧವಾರ ನಡೆದಿದ್ದ ಪಂದ್ಯದಲ್ಲಿ ಹ್ಯಾಟ್ರಿಕ್ ಗೋಲು ಬಾರಿಸಿ ಗಮನ ಸೆಳೆದಿದ್ದರು. ಆಕಾಶ್‌ದೀಪ್ ಸಿಂಗ್ ಭಾರತದ ಉತ್ತಮ ಸ್ಟ್ರೈಕರ್ ಆಗಿದ್ದಾರೆ. ಭಾರತ ತಂಡ ಪೆನಾಲ್ಟಿ ಕಾರ್ನರ್ ಸ್ಪೆಷಲಿಸ್ಟ್‌ಗಳಾದ ರೂಪಿಂದರ್ ಪಾಲ್ ಸಿಂಗ್ ಹಾಗೂ ಹರ್ಮನ್‌ಪ್ರೀತ್ ಸಿಂಗ್‌ರನ್ನು ಹೆಚ್ಚು ಅವಲಂಬಿಸಿದೆ.
ಕಳೆದ ವರ್ಷ ನಡೆದಿದ್ದ ಫೈನಲ್‌ನಲ್ಲಿ ಆಸ್ಟ್ರೇಲಿಯ ವಿರುದ್ಧ ಸೋತಿದ್ದ ಭಾರತ ರನ್ನರ್-ಅಪ್ ಪ್ರಶಸ್ತಿ ಪಡೆದಿತ್ತು. ಫೈನಲ್‌ನಲ್ಲಿ ಭಾರತವನ್ನು 4-0 ಅಂತರದಿಂದ ಮಣಿಸಿದ್ದ ಆಸ್ಟ್ರೇಲಿಯ 9ನೆ ಬಾರಿ ಅಝ್ಲಿನ್ ಶಾ ಹಾಕಿ ಕಪ್‌ನ್ನು ಜಯಿಸಿತ್ತು.
ಇದೀಗ ಆಸ್ಟ್ರೇಲಿಯ 4 ಪಂದ್ಯಗಳಲ್ಲಿ 10 ಅಂಕ ಗಳಿಸಿ ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ಭಾರತ, ಗ್ರೇಟ್ ಬ್ರಿಟನ್ ಹಾಗೂ ನ್ಯೂಝಿಲೆಂಡ್ ತಲಾ 7 ಅಂಕ ಗಳಿಸಿವೆ.