ಫಿಫಾ ರ್ಯಾಂಕಿಂಗ್: ಎರಡು ದಶಕದ ಬಳಿಕ ಭಾರತ ಶ್ರೇಷ್ಠ ಸಾಧನೆ
ಕೋಲ್ಕತಾ, ಮೇ 4: ಭಾರತೀಯ ಫುಟ್ಬಾಲ್ ತಂಡ 21 ವರ್ಷಗಳ ಬಳಿಕ ಮೊದಲ ಬಾರಿ ಫಿಫಾ ವಿಶ್ವ ರ್ಯಾಂಕಿಂಗ್‌ನಲ್ಲಿ ಅಗ್ರ-100ರಲ್ಲಿ ಸ್ಥಾನ ಗಿಟ್ಟಿಸಿಕೊಂಡು ಶ್ರೇಷ್ಠ ಸಾಧನೆ ಮಾಡಿದೆ.
ಇಲ್ಲಿ ಗುರುವಾರ ಬಿಡುಗಡೆಯಾದ ರ್ಯಾಂಕಿಂಗ್‌ನಲ್ಲಿ ಭಾರತ ಫುಟ್ಬಾಲ್ ತಂಡ 100ನೆ ರ್ಯಾಂಕಿಗೆ ಭಡ್ತಿ ಪಡೆದಿದೆ. ಭಾರತ 1996ರಲ್ಲಿ ಕೊನೆಯ ಬಾರಿ ಅಗ್ರ-100ರಲ್ಲಿ ಸ್ಥಾನ ಪಡೆದಿತ್ತು. 1996ರ ಫೆಬ್ರವರಿಯಲ್ಲಿ ಬಿಡುಗಡೆಯಾಗಿದ್ದ ಫಿಫಾ ರ್ಯಾಂಕಿಂಗ್‌ನಲ್ಲಿ ಭಾರತ 94ನೆ ಸ್ಥಾನ ಪಡೆದಿತ್ತು.
ಕಾಂಬೋಡಿಯ ಹಾಗೂ ಮೈನ್ಮಾರ್ ವಿರುದ್ಧ ವಿದೇಶಿ ನೆಲದಲ್ಲಿ ನಡೆದಿದ್ದ ಪಂದ್ಯದಲ್ಲಿ ಜಯ ಸಾಧಿಸಿರುವ ಭಾರತ ಫಿಫಾ ರ್ಯಾಂಕಿಂಗ್‌ನಲ್ಲಿ ಗಮನಾರ್ಹ ಸಾಧನೆ ಮಾಡಿದೆ. ಎಎಫ್‌ಸಿ ಏಷ್ಯನ್ ಕಪ್ ಅರ್ಹತಾ ಸುತ್ತಿನ ಪಂದ್ಯದಲ್ಲಿ ಭಾರತ ತಂಡ ಮೈನ್ಮಾರ್ ವಿರುದ್ಧ 1-0 ಅಂತರದಿಂದ ಐತಿಹಾಸಿಕ ಜಯ ಸಾಧಿಸಿತ್ತು. ಭಾರತ 64 ವರ್ಷಗಳ ಬಳಿಕ ಮೈನ್ಮಾರ್ ತಂಡವನ್ನು ಮಣಿಸಿತ್ತು.
ಕಾಂಬೋಡಿಯ ವಿರುದ್ಧ ಅಂತಾರಾಷ್ಟ್ರೀಯ ಸೌಹಾರ್ದ ಪಂದ್ಯದಲ್ಲಿ 3-2 ಅಂತರದ ರೋಚಕ ಜಯ ಸಾಧಿಸಿತ್ತು. ದಕ್ಷಿಣ ಅಮೆರಿಕದ ಎದುರಾಳಿ ಪೊರ್ಟೊ ರಿಕೊ ತಂಡವನ್ನು 4-1 ಅಂತರದಿಂದ ಸೋಲಿಸಿದ್ದ ಭಾರತ ತನ್ನ ಸಾಧನೆಯ ಮುಕುಟಕ್ಕೆ ಮತ್ತೊಂದು ಗರಿ ಸೇರಿಸಿಕೊಂಡಿತ್ತು.
ಭಾರತ ತಂಡ ಕಳೆದ 13 ಪಂದ್ಯಗಳಲ್ಲಿ (ಭೂತಾನ್ ವಿರುದ್ಧ ಅನಧಿಕೃತ ಪಂದ್ಯ ಸೇರಿದಂತೆ) 11ರಲ್ಲಿ ಜಯ ಸಾಧಿಸಿದ್ದು, ಒಟ್ಟು 31 ಗೋಲುಗಳನ್ನು ಬಾರಿಸಿತ್ತು.
ಭಾರತ ಜೂ.7 ರಂದು ಲೆಬನಾನ್ ವಿರುದ್ಧ ಅಂತಾರಾಷ್ಟ್ರೀಯ ಸೌಹಾರ್ದ ಪಂದ್ಯವನ್ನು ಆಡಲಿದೆ. ಜೂ.13 ರಂದು ಕಝಕ್‌ಸ್ತಾನದ ವಿರುದ್ಧ 2019ರ ಎಎಫ್‌ಸಿ ಏಷ್ಯನ್ ಕಪ್‌ಗಾಗಿ ಅರ್ಹತಾ ಪಂದ್ಯವನ್ನಾಡಲಿದೆ.
"ಭಾರತ ಫುಟ್ಬಾಲ್ ತಂಡ ಫಿಫಾ ರ್ಯಾಂಕಿಂಗ್‌ನಲ್ಲಿ 100ನೆ ಸ್ಥಾನಕ್ಕೆ ಭಡ್ತಿ ಪಡೆದಿರುವುದಕ್ಕೆ ನಮಗೆ ತುಂಬಾ ಸಂತೋಷವಾಗುತ್ತಿದೆ. ಇದೇ ವೇಳೆ ನಮ್ಮ ಮುಂದಿರುವ ಸವಾಲಿನ ಅರಿವು ನಮಗಿದೆ. 2019ರಲ್ಲಿ ಯುಎಇನಲ್ಲಿ ನಡೆಯಲಿರುವ ಎಎಫ್‌ಸಿ ಏಷ್ಯನ್ ಕಪ್ ಅರ್ಹತಾ ಪಂದ್ಯ ನಮ್ಮ ತಂಡಕ್ಕೆ ಅಗ್ನಿ ಪರೀಕ್ಷೆಯಾಗಿದೆ. ಎಐಎಫ್‌ಎಫ್ ಭಾರತ ತಂಡಕ್ಕೆ ಎಲ್ಲ ರೀತಿಯ ಬೆಂಬಲ, ಸೌಲಭ್ಯವನ್ನು ನೀಡಲಿದೆ. ತಂಡ ಇದೇ ಪ್ರದರ್ಶನವನ್ನು ಮುಂದುವರಿಸುವ ವಿಶ್ವಾಸ ನಮಗಿದೆ''
ಕುಶಾಲ್ ದಾಸ್, ಅಖಿಲ ಭಾರತ ಫುಟ್ಬಾಲ್ ಫೆಡರೇಶನ್(ಎಐಎಫ್‌ಎಫ್) ಪ್ರಧಾನ ಕಾರ್ಯದರ್ಶಿ.