ಇಂದು ಪಂಜಾಬ್ ಕಿಂಗ್ಸ್‌ಗೆ ಬೆಂಗಳೂರು ಎದುರಾಳಿ
ಬೆಂಗಳೂರು, ಮೇ 4: ಹತ್ತನೆ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಪ್ಲೇ-ಆಫ್ ಹಂತ ತಲುಪುವ ಗುರಿ ಹಾಕಿಕೊಂಡಿರುವ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಶುಕ್ರವಾರ ನಡೆಯಲಿರುವ ಪಂದ್ಯದಲ್ಲಿ ಆತಿಥೇಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಎದುರಿಸಲಿದೆ.
9 ಪಂದ್ಯಗಳಲ್ಲಿ 8 ಅಂಕ ಗಳಿಸಿರುವ ಪಂಜಾಬ್ ಅಂಕಪಟ್ಟಿಯಲ್ಲಿ ಐದನೆ ಸ್ಥಾನದಲ್ಲಿದೆ. ಮತ್ತೊಂದೆಡೆ 11 ಪಂದ್ಯಗಳ ಪೈಕಿ 8ರಲ್ಲಿ ಸೋತಿರುವ ಆರ್‌ಸಿಬಿ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. ಪಂಜಾಬ್ ಶುಕ್ರವಾರದ ಪಂದ್ಯವನ್ನು ಜಯಿಸಿದರೆ ಪ್ಲೇ-ಆಫ್ ಸ್ಪರ್ಧೆಯಲ್ಲಿ ಉಳಿಯಲಿದೆ. ಪಂಜಾಬ್‌ಗೆ ಶುಕ್ರವಾರದ ಪಂದ್ಯ ಹೊರತುಪಡಿಸಿ ಇನ್ನೂ 4 ಪಂದ್ಯಗಳು ಆಡಲು ಬಾಕಿಯಿದೆ.
ಪ್ಲೇ-ಆಫ್ ಆಸೆ ಕೈ ಬಿಟ್ಟಿರುವ ವಿರಾಟ್ ಕೊಹ್ಲಿ ಪಡೆ ಈಗ ಕೇವಲ ಪ್ರತಿಷ್ಠೆಗಾಗಿ ಆಡಬೇಕಾಗಿದೆ. ಕೊಹ್ಲಿ ಪಂಜಾಬ್ ವಿರುದ್ಧ ಪಂದ್ಯದಲ್ಲಿ ಹೊಸ ಆಟಗಾರರಿಗೆ ಅವಕಾಶ ಕಲ್ಪಿಸುವ ಸಾಧ್ಯತೆಯಿದೆ.
ಆರ್‌ಸಿಬಿ ಈ ವರ್ಷದ ಐಪಿಎಲ್‌ನಲ್ಲಿ ಕಳಪೆ ಪ್ರದರ್ಶನ ನೀಡಿದ್ದು, ಸ್ವತಹ ಕೊಹ್ಲಿ ಕಳಪೆ ಫಾರ್ಮ್‌ನಲ್ಲಿದ್ದಾರೆ. ಪಂಜಾಬ್ ತಂಡ ಕಳೆದ ಪಂದ್ಯದಲ್ಲಿ ಡೆಲ್ಲಿ ವಿರುದ್ಧ 10 ವಿಕೆಟ್‌ಗಳ ಭರ್ಜರಿ ಜಯ ಗಳಿಸಿತ್ತು. ಗ್ಲೆನ್ ಮ್ಯಾಕ್ಸ್‌ವೆಲ್ ನೇತೃತ್ವದ ಪಂಜಾಬ್ ತಂಡದಲ್ಲಿ ಹಾಶಿಮ್ ಅಮ್ಲ(315 ರನ್) ಉತ್ತಮ ಫಾರ್ಮ್‌ನಲ್ಲಿದ್ದಾರೆ. ಮಾರ್ಟಿನ್ ಗಪ್ಟಿಲ್ 27 ಎಸೆತಗಳಲ್ಲಿ ಅರ್ಧಶತಕ ಬಾರಿಸಿ ಮೊದಲಿನ ಲಯಕ್ಕೆ ಮರಳಿದ್ದಾರೆ.
ಪಂಜಾಬ್ ಕ್ರಿಕೆಟ್ ಅಭಿಮಾನಿಗಳು ನಾಯಕ ಮ್ಯಾಕ್ಸ್‌ವೆಲ್‌ರಿಂದ ಉತ್ತಮ ಪ್ರದರ್ಶನದ ನಿರೀಕ್ಷೆಯಲ್ಲಿದ್ದಾರೆ. ಈವರ್ಷದ ಐಪಿಎಲ್‌ನಲ್ಲಿ 9 ಪಂದ್ಯಗಳನ್ನು ಆಡಿರುವ ಮ್ಯಾಕ್ಸ್‌ವೆಲ್ ಕೇವಲ 193 ರನ್ ಗಳಿಸಿದ್ದು, ಅಜೇಯ 44 ಗರಿಷ್ಠ ವೈಯಕ್ತಿಕ ಸ್ಕೋರಾಗಿದೆ.
ಒಂದು ವೇಳೆ ಪಂಜಾಬ್ ಬ್ಯಾಟ್ಸ್‌ಮನ್‌ಗಳು ಸಂಘಟಿತ ಪ್ರದರ್ಶನ ನೀಡಿದರೆ, ಬೌಲರ್‌ಗಳಾದ ಸಂದೀಪ್ ಶರ್ಮ ಹಾಗೂ ವರುಣ್ ಆ್ಯರೊನ್ ಎದುರಾಳಿಗಳನ್ನು ನಿಯಂತ್ರಿಸಬಲ್ಲರು. 9 ಪಂದ್ಯಗಳಲ್ಲಿ 10 ವಿಕೆಟ್‌ಗಳನ್ನು ಕಬಳಿಸಿರುವ ಎಡಗೈ ಸ್ಪಿನ್ನರ್ ಅಕ್ಷರ್ ಪಟೇಲ್ ಮೇಲೆ ವಿಶ್ವಾಸವಿರಿಸಲಾಗಿದೆ.
ಮತ್ತೊಂದೆಡೆ, ಆರ್‌ಸಿಬಿ ತಂಡದ ಬ್ಯಾಟಿಂಗ್ ದಯನೀಯ ವೈಫಲ್ಯ ಕಂಡಿದ್ದು, ವಿರಾಟ್ ಕೊಹ್ಲಿ, ಕ್ರಿಸ್ ಗೇಲ್, ಎಬಿಡಿ ವಿಲಿಯರ್ಸ್ ಹಾಗೂ ಕೇದಾರ್ ಜಾಧವ್ ವಿಫಲರಾಗಿದ್ದಾರೆ. ಭಾರತದ ಆಟಗಾರರಾದ ಮನ್‌ದೀಪ್ ಸಿಂಗ್ ಹಾಗೂ ಸ್ಟುವರ್ಟ್ ಬಿನ್ನಿ ಭಾರೀ ನಿರಾಸೆಗೊಳಿಸಿದ್ದಾರೆ.
ಇಬ್ಬರು ಲೆಗ್-ಸ್ಪಿನ್ನರ್‌ಗಳಾದ ಸ್ಯಾಮುಯೆಲ್ ಬದ್ರಿ(9 ವಿಕೆಟ್‌ಗಳು) ಹಾಗೂ ಯುಜ್ವೇಂದ್ರ ಚಾಹಲ್(11 ವಿಕೆಟ್) ಸಮಾಧಾನಕರ ಪ್ರದರ್ಶನ ನೀಡಿದ್ದಾರೆ. ವೇಗದ ಬೌಲರ್‌ಗಳಾದ ಎಸ್.ಅರವಿಂದ್(4), ಆಡಮ್ ಮಿಲ್ನೆ(3) ಹಾಗೂ ಅಂಕಿತ್ ಚೌಧರಿ(2) ದುಬಾರಿ ಬೌಲರ್‌ಗಳೆನಿಸಿಕೊಂಡಿದ್ದಾರೆ.
.........
ಇಂದಿನ ಪಂದ್ಯ
ರಾಯಲ್ ಚಾಲೆಂಜರ್ಸ್ ಬೆಂಗಳೂರು-
ಕಿಂಗ್ಸ್ ಇಲೆವೆನ್ ಪಂಜಾಬ್
ಸಮಯ: ರಾತ್ರಿ 8:00, ಸ್ಥಳ: ಚಿನ್ನಸ್ವಾಮಿ ಸ್ಟೇಡಿಯಂ, ಬೆಂಗಳೂರು.