×
Ad

ಯಾಸಿರ್ ಶಾಗೆ ಏಳು ವಿಕೆಟ್: ಪಾಕ್ ಗೆಲುವಿಗೆ 188 ರನ್‌ ಗುರಿ

Update: 2017-05-04 23:04 IST

 ಬಾರ್ಬಡೊಸ್, ಮೇ 4: ಲೆಗ್ ಸ್ಪಿನ್ನರ್ ಯಾಸಿರ್ ಶಾ(7-94) ಅವರ ಅಮೋಘ ಬೌಲಿಂಗ್ ನೆರವಿನಿಂದ ಪಾಕಿಸ್ತಾನ ತಂಡ ಇಲ್ಲಿ ನಡೆಯುತ್ತಿರುವ ವೆಸ್ಟ್‌ಇಂಡೀಸ್ ವಿರುದ್ಧದ ಎರಡನೆ ಟೆಸ್ಟ್ ಪಂದ್ಯದ ಗೆಲುವಿಗೆ 188 ರನ್ ಗುರಿ ಪಡೆದಿದೆ.

ಒಂದು ವಿಕೆಟ್ ನಷ್ಟಕ್ಕೆ 41 ರನ್‌ನಿಂದ 2ನೆ ಇನಿಂಗ್ಸ್ ಆರಂಭಿಸಿದ ವಿಂಡೀಸ್ ತಂಡ ಶೈ ಹೋಪ್ ಅವರ ಜೀವನಶ್ರೇಷ್ಠ ಇನಿಂಗ್ಸ್(90 ರನ್) ಹೊರತಾಗಿಯೂ 268 ರನ್‌ಗೆ ಆಲೌಟಾಯಿತು. ಪಾಕ್ ಗೆಲುವಿಗೆ 188 ರನ್ ಗುರಿ ನೀಡಿತು.

5ನೆ ದಿನವಾದ ಗುರುವಾರ ಪಾಕಿಸ್ತಾನ ತಂಡ ವಿಂಡೀಸ್‌ನ ಕೊನೆಯ ವಿಕೆಟ್ ಕಬಳಿಸಿತು. ಅಜೇಯ 16 ರನ್ ಗಳಿಸಿದ್ದ ಬಿಶೂ ನಿನ್ನೆಯ ಮೊತ್ತಕ್ಕೆ 4 ರನ್ ಸೇರಿಸಿ ಯಾಸಿರ್ ಶಾಗೆ ವಿಕೆಟ್ ಒಪ್ಪಿಸಿದರು. ಮೊದಲ ಟೆಸ್ಟ ಪಂದ್ಯವನ್ನು ಜಯಿಸಿ 1-0 ಮುನ್ನಡೆಯಲ್ಲಿರುವ ಪಾಕ್ ತಂಡ ಕೆರಿಬಿಯನ್ ನಾಡಿನಲ್ಲಿ ಮೊತ್ತ ಮೊದಲ ಬಾರಿ ಟೆಸ್ಟ್ ಸರಣಿಯನ್ನು ಜಯಿಸುವ ಯೋಜನೆ ಹಾಕಿಕೊಂಡಿದೆ.

ಜಮೈಕಾದಲ್ಲಿ ನಡೆದಿದ್ದ ಮೊದಲ ಟೆಸ್ಟ್ ಪಂದ್ಯದಲ್ಲಿ ಏಳು ವಿಕೆಟ್ ಗಳನ್ನು ಕಬಳಿಸಿ ಪಾಕ್ ತಂಡಕ್ಕೆ 7 ವಿಕೆಟ್‌ಗಳ ಗೆಲುವು ತಂದುಕೊಟ್ಟು ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದಿದ್ದ ಶಾ 2ನೆ ಟೆಸ್ಟ್‌ನಲ್ಲೂ ಉತ್ತಮ ಪ್ರದರ್ಶನ ನೀಡಿದ್ದಾರೆ.

ಚೊಚ್ಚಲ ಶತಕ ವಂಚಿತರಾದ ಹೋಪ್ 3 ಬಾರಿ ಅರ್ಧಶತಕ ಜೊತೆಯಾಟ ನಡೆಸಿ ತಂಡಕ್ಕೆ ಆಸರೆಯಾದರು. ಕ್ರೆಗ್ ಬ್ರಾತ್‌ವೇಟ್‌ರೊಂದಿಗೆ 3ನೆ ವಿಕೆಟ್‌ಗೆ 56 ರನ್, ಚೇಸ್‌ರೊಂದಿಗೆ 4ನೆ ವಿಕೆಟ್‌ಗೆ 58 ರನ್ ಹಾಗೂ ವಿಶಾಲ್ ಸಿಂಗ್ ಅವರೊಂದಿಗೆ 5ನೆ ವಿಕೆಟ್‌ಗೆ 80 ರನ್ ಜೊತೆಯಾಟ ನಡೆಸಿ ತಂಡವನ್ನು ಆಧರಿಸಿದರು. ಸಿಂಗ್(32) ವಿಕೆಟ್ ಕಬಳಿಸಿದ ವೇಗದ ಬೌಲರ್ ಮುಹಮ್ಮದ್ ಅಬ್ಬಾಸ್ ಈ ಜೋಡಿಯನ್ನು ಬೇರ್ಪಡಿಸಿದರು.

ಒಂದು ಹಂತದಲ್ಲಿ 4 ವಿಕೆಟ್‌ಗಳ ನಷ್ಟಕ್ಕೆ 235 ರನ್ ಗಳಿಸಿದ್ದ ವಿಂಡೀಸ್ ಕೇವಲ ಒಂದು ರನ್ ಗಳಿಸುವಷ್ಟರಲ್ಲಿ 3 ವಿಕೆಟ್‌ಗಳನ್ನು ಕಳೆದುಕೊಂಡು ದಿಢೀರ್ ಕುಸಿತ ಕಂಡಿತು. ಹೋಪ್, ಸಿಂಗ್ ಹಾಗೂ ಹೋಲ್ಡರ್ ಬೆನ್ನುಬೆನ್ನಿಗೆ ಔಟಾದರು.

ವಿದಾಯದ ಟೆಸ್ಟ್ ಸರಣಿ ಆಡುತ್ತಿರುವ ನಾಯಕ ಮಿಸ್ಬಾವುಲ್ ಹಕ್ ಹಾಗೂ ಯೂನಿಸ್ ಖಾನ್ 50ಕ್ಕೂ ಅಧಿಕ ಕ್ಯಾಚ್ ಪಡೆದ ಅತ್ಯಂತ ಹಿರಿಯ ಕ್ರಿಕೆಟಿಗರೆಂಬ ಗೌರವಕ್ಕೆ ಪಾತ್ರರಾಗಿದ್ದಾರೆ.

ಪಾಕ್ ಪರ ಸ್ಪಿನ್ನರ್ ಯಾಸಿರ್ ಶಾ ಯಶಸ್ವಿ ಬೌಲರ್ ಎನಿಸಿಕೊಂಡರೆ, ಮುಹಮ್ಮದ್ ಅಬ್ಬಾಸ್ 57 ರನ್‌ಗೆ 2 ವಿಕೆಟ್ ಪಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News