ಶೀಘ್ರವೇ ಚಾಂಪಿಯನ್ ಟ್ರೋಫಿಗೆ ತಂಡ ಪ್ರಕಟಿಸಿ
Update: 2017-05-04 23:05 IST
ಮುಂಬೈ, ಮೇ 4: ಮುಂಬರುವ ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ ಆದಷ್ಟು ಬೇಗನೆ ಟೀಮ್ ಇಂಡಿಯಾವನ್ನು ಆಯ್ಕೆ ಮಾಡಬೇಕೆಂದು ಸುಪ್ರೀಂಕೋರ್ಟ್‌ನಿಂದ ನೇಮಿಸಲ್ಪಟ್ಟಿರುವ ಆಡಳಿತಾಧಿಕಾರಿಗಳ ಸಮಿತಿ(ಸಿಒಎ) ಬಿಸಿಸಿಐಗೆ ಮನವಿ ಮಾಡಿದೆ.
ಬಿಸಿಸಿಐನ ಕಾನೂನು ಹಕ್ಕಿಗೆ ಯಾವುದೇ ಹಾನಿಯಾಗದ ರೀತಿಯಲ್ಲಿ ಐಸಿಸಿಗೆ ತಂಡದ ಪಟ್ಟಿಯನ್ನು ಸಲ್ಲಿಸಬೇಕು. ಜೂ.1 ರಿಂದ ಆರಂಭವಾಗಲಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ತನ್ನಲ್ಲೇ ಪ್ರಶಸ್ತಿಯನ್ನು ಉಳಿಸಿಕೊಳ್ಳಬೇಕಾದರೆ ಪೂರ್ವ ತಯಾರಿಯ ಅಗತ್ಯವಿದೆ ಎಂದು ಗುರುವಾರ ಮಧ್ಯಾಹ್ನ ಬಿಸಿಸಿಐ ಸದಸ್ಯರಿಗೆ ಬರೆದಿರುವ ಪತ್ರದಲ್ಲಿ ಸಿಒಎ ತಿಳಿಸಿದೆ.
ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ ಭಾರತವನ್ನು ಪ್ರತಿನಿಧಿಸುವ ತಂಡದ ಪಟ್ಟಿಯನ್ನು ಎ.25ಕ್ಕೆ ಮೊದಲೇ ಆಯ್ಕೆ ಮಾಡಿ ಐಸಿಸಿಗೆ ಸಲ್ಲಿಸಬೇಕಾಗಿತ್ತು. ಆದರೆ, ಈತನಕ ತಂಡವನ್ನೇ ಆಯ್ಕೆ ಮಾಡಿಲ್ಲ. ತಂಡವನ್ನು ಆಯ್ಕೆ ಮಾಡಲು ಆದಷ್ಟು ಬೇಗನೆ ಆಯ್ಕೆ ಸಮಿತಿಯ ಸಭೆ ಕರೆಯಬೇಕೆಂದು ಸಿಒಎ ವಿನಂತಿಸಿದೆ.