×
Ad

ಸ್ಯಾಮ್ಸನ್-ಪಂತ್ ಸಾಹಸ: ಲಯನ್ಸ್‌ನ್ನು ಮಣಿಸಿದ ಡೆಲ್ಲಿ ಡೆವಿಲ್ಸ್

Update: 2017-05-04 23:45 IST

ಹೊಸದಿಲ್ಲಿ, ಮೇ 4: ಆರಂಭಿಕ ಬ್ಯಾಟ್ಸ್‌ಮನ್ ಸಂಜು ಸ್ಯಾಮ್ಸನ್(61 ರನ್, 31 ಎಸೆತ, 7 ಸಿಕ್ಸರ್) ಹಾಗೂ ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ರಿಷಬ್ ಪಂತ್(97 ರನ್, 43 ಎಸೆತ, 6 ಬೌಂಡರಿ, 9 ಸಿಕ್ಸರ್) ಸಾಹಸದ ನೆರವಿನಿಂದ ಆತಿಥೇಯ ಡೆಲ್ಲಿ ಡೇರ್ ಡೆವಿಲ್ಸ್ ತಂಡ ಗುಜರಾತ್ ಲಯನ್ಸ್ ವಿರುದ್ಧದ ಐಪಿಎಲ್‌ನ 42ನೆ ಪಂದ್ಯವನ್ನು 7 ವಿಕೆಟ್‌ಗಳ ಅಂತರದಿಂದ ಗೆದ್ದುಕೊಂಡಿದೆ.

ಗೆಲುವಿಗೆ 209 ರನ್ ಕಠಿಣ ಗುರಿ ಪಡೆದಿದ್ದ ಡೆಲ್ಲಿ ತಂಡ 17.3 ಓವರ್‌ಗಳಲ್ಲಿ 3 ವಿಕೆಟ್‌ಗಳ ನಷ್ಟಕ್ಕೆ 214 ರನ್ ಗಳಿಸಿತು. ಆ್ಯಂಡರ್ಸನ್ (18)ಹಾಗೂ ಶ್ರೇಯಸ್ ಅಯ್ಯರ್(14) 4ನೆ ವಿಕೆಟ್‌ಗೆ ಮುರಿಯದ ಜೊತೆಯಾಟದಲ್ಲಿ 35 ರನ್ ಸೇರಿಸಿ ಇನ್ನೂ 15 ಎಸೆತಗಳು ಬಾಕಿ ಇರುವಾಗಲೇ ತಂಡಕ್ಕೆ ಗೆಲುವು ತಂದರು.

ಡೆಲ್ಲಿ ತಂಡ 24 ರನ್ ಗಳಿಸುವಷ್ಟರಲ್ಲಿ ಮೊದಲ ವಿಕೆಟ್ ಕಳೆದುಕೊಂಡಿತು. ಆಗ 2ನೆ ವಿಕೆಟ್‌ಗೆ 143 ರನ್ ಸೇರಿಸಿದ ಸ್ಯಾಮ್ಸನ್ ಹಾಗೂ ಪಂತ್ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು.

ಗುಜರಾತ್ ಲಯನ್ಸ್ 208/7: ಇದಕ್ಕೆ ಮೊದಲು ಬ್ಯಾಟಿಂಗ್‌ಗೆ ಆಹ್ವಾನಿಸಲ್ಪಟ್ಟ ಗುಜರಾತ್ ಲಯನ್ಸ್ ತಂಡ ನಾಯಕ ಸುರೇಶ್ ರೈನಾ(77 ರನ್, 43 ಎಸೆತ, 5 ಬೌಂಡರಿ, 4 ಸಿಕ್ಸರ್) ಹಾಗೂ ದಿನೇಶ್ ಕಾರ್ತಿಕ್(65 ರನ್, 34 ಎಸೆತ, 5 ಬೌಂಡರಿ, 5 ಸಿಕ್ಸರ್) ಅರ್ಧಶತಕದ ಕೊಡುಗೆ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್‌ಗಳ ನಷ್ಟಕ್ಕೆ 208 ರನ್ ಗಳಿಸಿತು.

ಗುಜರಾತ್‌ನ ಆರಂಭ ಚೆನ್ನಾಗಿರಲಿಲ್ಲ. 1.2ನೆ ಓವರ್‌ನಲ್ಲಿ 10 ರನ್‌ಗೆ 2 ವಿಕೆಟ್ ಪತನಗೊಂಡಿತು. ಬ್ರೆಂಡನ್ ಮೆಕಲಮ್(1) ಹಾಗೂ ಡರೆನ್ ಸ್ಮಿತ್(9) ಬೇಗನೆ ಔಟಾದರು.

ಆಗ 3ನೆ ವಿಕೆಟ್‌ಗೆ 133 ರನ್ ಜೊತೆಯಾಟ ನಡೆಸಿದ ರೈನಾ ಹಾಗೂ ಕಾರ್ತಿಕ್ ತಂಡದ ಸ್ಕೋರನ್ನು 143ಕ್ಕೆ ತಲುಪಿಸಿದರು. ರೈನಾ 13.2ನೆ ಓವರ್‌ನಲ್ಲಿ ರನೌಟಾಗುವ ಮೂಲಕ ಈ ಜೋಡಿ ಬೇರ್ಪಟ್ಟಿತು.

ರೈನಾ ಔಟಾದ ಬೆನ್ನಿಗೇ ಕಾರ್ತಿಕ್ ವಿಕೆಟ್ ಒಪ್ಪಿಸಿದರು. ಆ್ಯರೊನ್ ಫಿಂಚ್(27, 19 ಎಸೆತ, 4 ಬೌಂಡರಿ), ರವೀಂದ್ರ ಜಡೇಜ(ಅಜೇಯ 18, 7 ಎಸೆತ, 2 ಸಿಕ್ಸರ್)) ಕೆಳ ಕ್ರಮಾಂಕದ ಅಮೂಲ್ಯ ಕಾಣಿಕೆ ನೀಡಿ ರಾಜಸ್ಥಾನ ತಂಡ 208 ರನ್ ಗಳಿಸಲು ನೆರವಾದರು.

ಡೆಲ್ಲಿ ಡೆವಿಲ್ಸ್ ಪರವಾಗಿ ಕಾಗಿಸೊ ರಬಾಡ(2-28) ಹಾಗೂ ಕಮಿನ್ಸ್(2-30) ತಲಾ ಎರಡು ವಿಕೆಟ್ ಪಡೆದರು..

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News