ಮತ್ತೊಮ್ಮೆ ಸರಳತೆ ಮೆರೆದ ಧೋನಿ: ತಾಹಿರ್ ಮಗನೊಂದಿಗೆ ಆಟವೋ ಆಟ
ಹೊಸದಿಲ್ಲಿ, ಮೇ 6: ಭಾರತದ ಮಾಜಿ ನಾಯಕ, ಪುಣೆ ತಂಡದ ಬ್ಯಾಟ್ಸ್‌ಮನ್ ಎಂಎಸ್ ಧೋನಿ ಪ್ರಸ್ತುತ ಐಪಿಎಲ್‌ನಲ್ಲಿ ಆಡುವುದರಲ್ಲಿ ವ್ಯಸ್ತರಾಗಿದ್ದಾರೆ. ಈವರ್ಷದ ಐಪಿಎಲ್‌ನಲ್ಲಿ ಮೈದಾನದ ಹೊರಗೆ ವಿವಾದಗಳಿಂದ ಸುದ್ದಿಯಾಗುತ್ತಿರುವ ಧೋನಿಯ ಸರಳತೆಯ ಬಗ್ಗೆ ಯಾವುದೇ ಸಂಶಯವಿಲ್ಲ.
ಏರ್‌ಪೋರ್ಟ್‌ನಲ್ಲಿ ನೆಲದ ಮೇಲೆ ಕುಳಿತುಕೊಂಡ ಧೋನಿ ಪುಣೆಯ ಸಹ ಆಟಗಾರ ಇಮ್ರಾನ್ ತಾಹಿರ್ ಪುತ್ರನೊಂದಿಗೆ ಆಟಿಕೆಯೊಂದಿಗೆ ಆಡಿದರು. ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಏರ್‌ಪೋರ್ಟ್‌ನ ನೆಲದಲ್ಲಿ ಕುಳಿತುಕೊಂಡ ಧೋನಿ ತಾಹಿರ್ ಪುತ್ರನೊಂದಿಗೆ ಆಟಿಕೆಯ ಕಾರಿನಲ್ಲಿ ಆಡುವ ದೃಶ್ಯ ವಿಡಿಯೋದಲ್ಲಿದೆ. ತನ್ನ ಪುತ್ರ ಧೋನಿಯೊಂದಿಗೆ ಆಡುತ್ತಿರುವುದನ್ನು ಇಮ್ರಾನ್ ತಾಹಿರ್ ಕುತೂಹಲದಿಂದ ನೋಡುತ್ತಿದ್ದರು.
ಧೋನಿಯ ಮಾನವೀಯತೆ ಹಾಗೂ ಸರಳತೆಯ ದರ್ಶನವಾಗುತ್ತಿರುವುದು ಇದೇ ಮೊದಲಲ್ಲ. ದೇಶೀಯ ಕ್ರಿಕೆಟ್ ಟೂರ್ನಿ ಆಡಲು ಜಾರ್ಖಂಡ್‌ನಿಂದ ಕೋಲ್ಕತಾಕ್ಕೆ ತನ್ನ ಸಹ ಆಟಗಾರರೊಂದಿಗೆ ಸಾಮಾನ್ಯ ಕೋಚ್‌ನಲ್ಲಿ ತೆರಳಿದ್ದರು. ತಾನು ರೈಲ್ವೇ ಟಿಸಿ ಆಗಿದ್ದ ಸಂದರ್ಭದಲ್ಲಿ ಖರಗ್‌ಪುರ ರೈಲ್ವೇ ಸ್ಟೇಶನ್‌ನಲ್ಲಿ ಪ್ರತಿದಿನ ಭೇಟಿಯಾಗುತ್ತಿದ್ದ ಚಾಯ್ ವಾಲಾನನ್ನು ಇತ್ತೀಚೆಗೆ ಭೇಟಿಯಾಗಿದ್ದ ಧೋನಿ ಆತನೊಂದಿಗೆ ಕೆಲ ಸಮಯ ಕಳೆದಿದ್ದರು.