ಪುಣೆಗೆ ‘ಸೂಪರ್’ ಜಯ
ಹೈದರಾಬಾದ್, ಮೇ 6: ರೈಸಿಂಗ್ ಪುಣೆ ಸೂಪರ್ ಜೈಂಟ್ ತಂಡ ಆತಿಥೇಯ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು 12 ರನ್‌ಗಳಿಂದ ಮಣಿಸಿದೆ. ಈ ಮೂಲಕ ಐಪಿಎಲ್‌ನ 44ನೆ ಪಂದ್ಯದಲ್ಲಿ ‘ಸೂಪರ್’ ಜಯ ದಾಖಲಿಸಿದೆ.
ವೇಗದ ಬೌಲರ್ ಜೈದೇವ್ ಉನದ್ಕಟ್ ‘ಹ್ಯಾಟ್ರಿಕ್’ ಸಹಿತ ಐದು ವಿಕೆಟ್ ಗೊಂಚಲು ಪಡೆದು ಐಪಿಎಲ್‌ನಲ್ಲಿ ‘100 ವಿಕೆಟ್’ ಪೂರೈಸಿದರು. ಈ ಮೂಲಕ ಒಂದೇ ಕಲ್ಲಿನಲ್ಲಿ ಮೂರು ಹಣ್ಣು ಉದುರಿಸಿದರು. ಆಲ್‌ರೌಂಡ್ ಪ್ರದರ್ಶನ ನೀಡಿದ ಬೆನ್ ಸ್ಟೋಕ್ಸ್ ತಂಡದ ಗೆಲುವಿನ ರೂವಾರಿಯಾದರು.
12ನೆ ಪಂದ್ಯದಲ್ಲಿ 8ನೆ ಜಯ ದಾಖಲಿಸಿದ ಪುಣೆ ಒಟ್ಟು 16 ಅಂಕ ಗಳಿಸಿ ಅಂಕಪಟ್ಟಿಯಲ್ಲಿ 2ನೆ ಸ್ಥಾನಕ್ಕೆ ಲಗ್ಗೆ ಇಟ್ಟಿದೆ.
ಇಲ್ಲಿನ ರಾಜೀವ್‌ಗಾಂಧಿ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಗೆಲ್ಲಲು 149 ರನ್ ಗುರಿ ಪಡೆದಿದ್ದ ಹೈದರಾಬಾದ್ ತಂಡ ಪುಣೆಯ ವೇಗದ ಬೌಲರ್‌ಗಳಾದ ಉನದ್ಕಟ್(5-30) ಹಾಗೂ ಬೆನ್ ಸ್ಟೋಕ್ಸ್(3-30) ದಾಳಿಗೆ ತತ್ತರಿಸಿ ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್‌ಗಳ ನಷ್ಟಕ್ಕೆ 136 ರನ್ ಗಳಿಸಿ ಸೋಲೊಪ್ಪಿಕೊಂಡಿತು.
ಹೈದರಾಬಾದ್ ಗೆಲುವಿಗೆ ಅಂತಿಮ ಓವರ್‌ನಲ್ಲಿ 13 ರನ್ ಅಗತ್ಯವಿತ್ತು. ಕೊನೆಯ ಓವರ್ ಬೌಲಿಂಗ್ ಮಾಡಿದ ಉನದ್ಕಟ್ ಅವರು ಬಿಪುಲ್ ಶರ್ಮ, ರಶೀದ್ ಖಾನ್ ಹಾಗೂ ಭುವನೇಶ್ವರ ಕುಮಾರ್ ವಿಕೆಟ್‌ನ್ನು ಸತತ ಮೂರು ಎಸೆತಗಳಲ್ಲಿ ಕಬಳಿಸುವ ಮೂಲಕ ‘ಹ್ಯಾಟ್ರಿಕ್’ ಸಾಧಿಸಿದರು. ಮಾತ್ರವಲ್ಲ ಪುಣೆಗೆ ವಿಜಯದ ಮಾಲೆ ತೊಡಿಸಿದರು. 30 ರನ್‌ಗೆ ‘5 ವಿಕೆಟ್ ಗೊಂಚಲು’ ಪಡೆದ ಉನದ್ಕಟ್ ಐಪಿಎಲ್‌ನಲ್ಲಿ ‘100 ವಿಕೆಟ್’ ಪೂರೈಸಿದ ಸಾಧನೆೆ ಮಾಡಿದರು.
ಹೈದರಾಬಾದ್ ಪರ ಯುವರಾಜ್ ಸಿಂಗ್(47 ರನ್, 43 ಎಸೆತ) ಅಗ್ರ ಸ್ಕೋರರ್ ಎನಿಸಿಕೊಂಡರು. ನಾಯಕ ಡೇವಿಡ್ ವಾರ್ನರ್(40 ರನ್, 34 ಎಸೆತ) ಹಾಗೂ ಯುವಿ 3ನೆ ವಿಕೆಟ್‌ಗೆ 54 ರನ್ ಸೇರಿಸಿದ್ದು ತಂಡದ ಪರ ದಾಖಲಾದ ಗರಿಷ್ಠ ಜೊತೆಯಾಟವಾಗಿತ್ತು. ಈ ಯುವಿ, ವಾರ್ನರ್ ಹಾಗೂ ಧವನ್(19) ಹೊರತುಪಡಿಸಿ ಉಳಿದ ಆಟಗಾರ ಎರಡಂಕೆ ದಾಟಲು ವಿಫಲರಾದರು.
ಪುಣೆ 148/8: ಇದಕ್ಕೆ ಮೊದಲು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಪುಣೆ ತಂಡ ಬೆನ್ ಸ್ಟೋಕ್ಸ್(39 ರನ್), ಸ್ಟೀವನ್ ಸ್ಮಿತ್(34), ಎಂಎಸ್ ಧೋನಿ(31), ಹಾಗೂ ಅಜಿಂಕ್ಯ ರಹಾನೆ(22) ಕೊಡುಗೆಯ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್‌ಗಳ ನಷ್ಟಕ್ಕೆ 148 ರನ್ ಗಳಿಸಿತು. ಹೈದರಾಬಾದ್‌ನ ಪರ ಸಿದ್ದಾರ್ಥ್ ಕೌಲ್(4-29) ಯಶಸ್ವಿ ಬೌಲರ್ ಎನಿಸಿಕೊಂಡರು.
ಪುಣೆ 39 ರನ್‌ಗೆ 2 ವಿಕೆಟ್ ಕಳೆದುಕೊಂಡಿತ್ತು. ಆಗ 3ನೆ ವಿಕೆಟ್‌ಗೆ 60 ರನ್ ಜೊತೆಯಾಟ ನಡೆಸಿದ ಸ್ಮಿತ್-ಸ್ಟೋಕ್ಸ್ ಜೋಡಿ ತಂಡವನ್ನು ಆಧರಿಸಿದರು. ಸ್ಟೋಕ್ಸ್, ಸ್ಮಿತ್ ಹಾಗೂ ಕ್ರಿಸ್ಟಿಯನ್(4)ಬೆನ್ನು ಬೆನ್ನಿಗೆ ಔಟಾದಾಗ ತಂಡದ ಸ್ಕೋರ್ 5 ವಿಕೆಟ್‌ಗೆ 105 ರನ್. ಮಾಜಿ ನಾಯಕ ಧೋನಿ ಹಾಗೂ ಮನೋಜ್ ತಿವಾರಿ 6ನೆ ವಿಕೆಟ್‌ಗೆ 37 ರನ್ ಸೇರಿಸಿ ತಂಡ ಗೌರವಾರ್ಹ ಮೊತ್ತ ಗಳಿಸಲು ನೆರವಾದರು.
ಸ್ಕೋರ್ ವಿವರ
ರೈಸಿಂಗ್ ಪುಣೆ ಸೂಪರ್ ಜೈಂಟ್: 20 ಓವರ್‌ಗಳಲ್ಲಿ 148/8
ಅಜಿಂಕ್ಯ ರಹಾನೆ ಸಿ ಯುವರಾಜ್ ಬಿ ಶರ್ಮ 22
ರಾಹುಲ್ ತ್ರಿಪಾಠಿ ರನೌಟ್ 01
ಸ್ಟೀವ್ ಸ್ಮಿತ್ ಸಿ ಬಿಪುಲ್ ಶರ್ಮ ಬಿ ಕೌಲ್ 34
ಸ್ಟೋಕ್ಸ್ ಬಿ ರಶೀದ್ ಖಾನ್ 39
ಧೋನಿ ಸಿ ಓಜಾ ಬಿ ಕೌಲ್ 31
ಕ್ರಿಸ್ಟಿಯನ್ ಸಿ ರಶೀದ್ ಬಿ ಕೌಲ್ 04
ಮನೋಜ್ ತಿವಾರಿ ರನೌಟ್ 09
ವಿ.ಸುಂದರ್ ಅಜೇಯ 01
ಠಾಕೂರ್ ಸಿ ವಾರ್ನರ್ ಬಿ ಕೌಲ್ 00
ಉನದ್ಕಟ್ ಅಜೇಯ 00
ಇತರ 07
ವಿಕೆಟ್ ಪತನ: 1-6, 2-39, 3-99, 4-101, 5-105, 6-142, 7-147, 8-147.
ಬೌಲಿಂಗ್ ವಿವರ:
ಭುವನೇಶ್ವರ ಕುಮಾರ್ 4-0-39-0
ಆಶೀಷ್ ನೆಹ್ರಾ 1.1-0-5-0
ಸಿದ್ದಾರ್ಥ್ ಕೌಲ್ 4-0-29-4
ರಶೀದ್ ಖಾನ್ 4-0-18-1
ಹೆನ್ರಿಕ್ಸ್ 2.5-0-15-0
ಬಿಪುಲ್ ಶರ್ಮ 4-0-39-1
ಸನ್‌ರೈಸರ್ಸ್ ಹೈದರಾಬಾದ್: 20 ಓವರ್‌ಗಳಲ್ಲಿ 136/9
ಡೇವಿಡ್ ವಾರ್ನರ್ ಸಿ ಠಾಕೂರ್ ಬಿ ಸ್ಟೋಕ್ಸ್ 40 ಶಿಖರ್ ಧವನ್ ಬಿ ಸ್ಟೋಕ್ಸ್ 19
ವಿಲಿಯಮ್ಸನ್ ಸಿ ಧೋನಿ ಬಿ ಸ್ಟೋಕ್ಸ್ 04
ಯುವರಾಜ್ ಸಿಂಗ್ ಸಿ ತ್ರಿಪಾಠಿ ಬಿ ಉನದ್ಕಟ್ 47
ಹೆನ್ರಿಕ್ಸ್ ಬಿ ತಾಹಿರ್ 04
ನಮನ್ ಓಜಾ ಸಿ ಸ್ಟೋಕ್ಸ್ ಬಿ ಉನದ್ಕಟ್ 09
ಬಿಪುಲ್ ಶರ್ಮ ಸಿ ಸ್ಟೋಕ್ಸ್ ಬಿ ಉನದ್ಕಟ್ 08
ರಶೀದ್ ಖಾನ್ ಸಿ ಮತ್ತು ಬಿ ಉನದ್ಕಟ್ 03
ಭುವನೇಶ್ವರ ಕುಮಾರ್ ಸಿ ತಿವಾರಿ ಬಿ ಉನದ್ಕಟ್ 00
ಕೌಲ್ ಅಜೇಯ 0
ನೆಹ್ರಾ ಅಜೇಯ 0
ಇತರ 02
ವಿಕೆಟ್ ಪತನ: 1-25, 2-29, 3-83, 4-96, 5-117, 6-127, 7-136, 8-136, 9-136
ಬೌಲಿಂಗ್ ವಿವರ:
ಜಯದೇವ್ ಉನದ್ಕಟ್ 4-1-30-5
ವಾಷಿಂಗ್ಟನ್ ಸುಂದರ್ 3-0-19-0
ಸ್ಟೋಕ್ಸ್ 4-0-30-3
ಇಮ್ರಾನ್ ತಾಹಿರ್ 4-0-24-1
ಠಾಕೂರ್ 2-0-12-0
ಕ್ರಿಸ್ಟಿಯನ್ 3-0-21-0.