ಲಾ ಲಿಗ ಪಂದ್ಯ: ಬಾರ್ಸಿಲೋನಕ್ಕೆ ಭರ್ಜರಿ ಜಯ
ಬಾರ್ಸಿಲೋನ, ಮೇ 7: ಲಿಯೊನೆಲ್ ಮೆಸ್ಸಿ ಅವಳಿ ಗೋಲು, ನೇಮರ್ ಹಾಗೂ ಲೂಯಿಸ್ ಸುಯರೆಝ್ ಬಾರಿಸಿದ ತಲಾ ಒಂದು ಗೋಲು ನೆರವಿನಿಂದ ಬಾರ್ಸಿಲೋನ ತಂಡ ವಿಲ್ಲಾರಿಯಲ್ ತಂಡದ ವಿರುದ್ಧದ ಲಾ ಲಿಗ ಪಂದ್ಯವನ್ನು 4-1 ಅಂತರದಿಂದ ಗೆದ್ದುಕೊಂಡಿತು.
ಈ ಗೆಲುವಿನೊಂದಿಗೆ ಬಾರ್ಸಿಲೋನ ತಂಡ ಲಾಲಿಗ ಅಂಕಪಟ್ಟಿಯಲ್ಲಿ ರಿಯಲ್ ಮ್ಯಾಡ್ರಿಡ್‌ಗಿಂತ ಮೂರು ಅಂಕ ಮುನ್ನಡೆ ಸಾಧಿಸಿತು. ಮ್ಯಾಡ್ರಿಡ್ ಟೂರ್ನಿಯಲ್ಲಿ ಇನ್ನೂ ನಾಲ್ಕು ಪಂದ್ಯಗಳನ್ನಾಡಲು ಬಾಕಿಯಿದ್ದರೆ ಬಾರ್ಸಿಲೋನಕ್ಕೆ ಇನ್ನೆರಡು ಪಂದ್ಯ ಆಡಲಷ್ಟೇ ಬಾಕಿಯಿದೆ. ಈ ಋತುವಿನ ಲಾ ಲಿಗದಲ್ಲಿ ಮೆಸ್ಸಿ, ಸುಯರೆಝ್, ನೇಮರ್ ಅವರು ಒಟ್ಟು 102 ಗೋಲುಗಳನ್ನು ಬಾರಿಸಿದ್ದಾರೆ.
ಶನಿವಾರ ನೌಕ್ಯಾಂಪ್ ಸ್ಟೇಡಿಯಂನಲ್ಲಿ ನಡೆದಿದ್ದ ಪಂದ್ಯದಲ್ಲಿ 21ನೆ ನಿಮಿಷದಲ್ಲಿ ಗೋಲು ಬಾರಿಸಿದ ನೇಮರ್ ಬಾರ್ಸಿಲೋನದ ಪರ ಗೋಲಿನ ಖಾತೆ ತೆರೆದರು. 32ನೆ ನಿಮಿಷದಲ್ಲಿ ಗೋಲು ಬಾರಿಸಿದ ವಿಲ್ಲರಿಯಲ್ ತಂಡದ ಸ್ಟ್ರೈಕರ್ ಸೆಡ್ರಿಕ್ ಬಕಾಂಬು 1-1 ರಿಂದ ಸಮಬಲ ಸಾಧಿಸಿದರು.
45ನೆ ನಿಮಿಷದಲ್ಲಿ ಗೋಲು ಬಾರಿಸಿದ ಮೆಸ್ಸಿ ತಂಡದ ಮುನ್ನಡೆಯನ್ನು 2-1ಕ್ಕೆ ಏರಿಸಿದರು. ಮೆಸ್ಸಿ ಈ ಋತವಿನಲ್ಲಿ 50ನೆ ಗೋಲು ಪೂರೈಸಿ ಗಮನಸೆಳೆದರು.
ಸುಯರೆಝ್ 69ನೆ ನಿಮಿಷದಲ್ಲಿ ಗೋಲು ಬಾರಿಸಿದರು. ಪೆನಾಲ್ಟಿ ಕಾರ್ನರ್ ಅವಕಾಶದಲ್ಲಿ ಮತ್ತೊಂದು ಗೋಲು ಬಾರಿಸಿದ ಮೆಸ್ಸಿ ಬಾರ್ಸಿಲೋನ ತಂಡಕ್ಕೆ 4-1 ಅಂತರದ ಗೆಲುವು ತಂದರು.