×
Ad

ಮುಂಬೈ ವಿರುದ್ಧ ಹೈದರಾಬಾದ್‌ಗೆ ಕಠಿಣ ಸವಾಲು

Update: 2017-05-07 22:58 IST

ಹೈದರಾಬಾದ್, ಮೇ 7: ಸತತ ಸೋಲಿನಿಂದ ಆಘಾತಕ್ಕೊಳಗಾಗಿರುವ ಹಾಲಿ ಚಾಂಪಿಯನ್ ಸನ್‌ರೈಸರ್ಸ್ ಹೈದರಾಬಾದ್ ತಂಡ ಸೋಮವಾರ ಇಲ್ಲಿ ಆಡಲಿರುವ ತನ್ನ ನಿರ್ಣಾಯಕ ಐಪಿಎಲ್ ಪಂದ್ಯದಲ್ಲಿ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿರುವ ಮುಂಬೈ ಇಂಡಿಯನ್ಸ್ ತಂಡದ ವಿರುದ್ಧ ಕಠಿಣ ಸವಾಲು ಎದುರಿಸಲಿದೆ.

13 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ನಾಲ್ಕನೆ ಸ್ಥಾನದಲ್ಲಿರುವ ಹೈದರಾಬಾದ್ ಪ್ಲೇ-ಆಫ್‌ಗೆ ತೇರ್ಗಡೆಯಾಗಬೇಕಾದರೆ ಉಳಿದ ಎರಡೂ ಪಂದ್ಯಗಳನ್ನು ಗೆಲ್ಲಲೇಬೇಕಾಗಿದೆ. ಹೈದರಾಬಾದ್ ತಂಡ ಹೊಸದಿಲ್ಲಿಯಲ್ಲಿ ನಡೆದಿದ್ದ ಡೆಲ್ಲಿ ಡೇರ್ ಡೆವಿಲ್ಸ್ ವಿರುದ್ಧದ ಪಂದ್ಯವನ್ನು ಸೋತಿತ್ತು. ಆದರೆ, ಶನಿವಾರ ತನ್ನ ತವರು ಅಂಗಣದಲ್ಲಿ ರೈಸಿಂಗ್ ಪುಣೆ ಸೂಪರ್‌ಜೈಂಟ್ ವಿರುದ್ಧ 12 ರನ್‌ನಿಂದ ಸೋತಿರುವುದು ತಂಡಕ್ಕೆ ತೀವ್ರ ಹಿನ್ನಡೆಯಾಗಿದೆ. ಹೈದರಾಬಾದ್ ಈ ವರ್ಷ ತನ್ನ ತವರು ನೆಲದಲ್ಲಿ ಸೋತ ಮೊದಲ ಪಂದ್ಯ ಇದಾಗಿತ್ತು.

 ಗೆಲ್ಲಲು 149 ರನ್ ಗುರಿ ಪಡೆದಿದ್ದ ಹೈದರಾಬಾದ್ ತಂಡದ ಪರ ನಾಯಕ ಡೇವಿಡ್ ವಾರ್ನರ್(40) ಹಾಗೂ ಯುವರಾಜ್ ಸಿಂಗ್(47) ಗೆಲುವಿಗಾಗಿ ಶ್ರಮಿಸಿದ್ದರು. ಆದರೆ, ಶಿಖರ್ ಧವನ್(19), ಕೇನ್ ವಿಲಿಯಮ್ಸನ್(4), ಮೊಸೆಸ್ ಹೆನ್ರಿಕ್ಸ್(4) ಹಾಗೂ ನಮನ್ ಓಜಾ(9) ಸಂಪೂರ್ಣ ವೈಫಲ್ಯ ಅನುಭವಿಸಿರುವುದು ತಂಡಕ್ಕೆ ದುಬಾರಿಯಾಗಿ ಪರಿಣಮಿಸಿತು.

ಪುಣೆ ತಂಡದ ಬೌಲರ್ ಜೈದೇವ್ ಉನದ್ಕಟ್ ಅಂತಿಮ ಓವರ್‌ನಲ್ಲಿ ಹ್ಯಾಟ್ರಿಕ್ ಸಹಿತ ಐದು ವಿಕೆಟ್ ಗೊಂಚಲು ಪಡೆದು ಹೈದರಾಬಾದ್‌ನ್ನು 9 ವಿಕೆಟ್ ನಷ್ಟಕ್ಕೆ 136 ರನ್‌ಗೆ ನಿಯಂತ್ರಿಸಿದ್ದರು.

ಸನ್‌ರೈಸರ್ಸ್‌ಗೆ ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ಚಿಂತೆಯಾಗಿ ಪರಿಣಮಿಸಿದೆ. ಮುಂಬೈ ವಿರುದ್ಧ ಸೋಮವಾರದ ಪಂದ್ಯ ಗೆಲ್ಲಬೇಕಾದರೆ ಮಧ್ಯಮ ಕ್ರಮಾಂಕದ ಆಟಗಾರರು ಸಿಡಿದೇಳಬೇಕು.

 ಸನ್‌ರೈಸರ್ಸ್‌ಗೆ ಬೌಲಿಂಗ್ ವಿಭಾಗ ಪ್ರಮುಖ ಶಕ್ತಿಯಾಗಿದೆ. ಭುವನೇಶ್ವರ ಕುಮಾರ್, ರಶೀದ್ ಖಾನ್ ಹಾಗೂ ಸಿದ್ಧ್ದಾರ್ಥ್ ಕೌಲ್ ಪ್ರತಿಯೊಂದು ಪಂದ್ಯದಲ್ಲೂ ವಿಕೆಟ್ ಕಬಳಿಸುತ್ತಿದ್ದಾರೆ. ಶನಿವಾರ ನಡೆದಿದ್ದ ಪಂದ್ಯದಲ್ಲಿ ಪುಣೆ ತಂಡದ ನಾಲ್ಕು ವಿಕೆಟ್‌ಗಳನ್ನು ಕಬಳಿಸಿದ್ದ ಕೌಲ್ 8 ವಿಕೆಟ್‌ಗೆ 148 ರನ್‌ಗೆ ನಿಯಂತ್ರಿಸಿದ್ದರು.

ಹೈದರಾಬಾದ್‌ನ ಹಿರಿಯ ಬೌಲರ್ ಆಶೀಷ್ ನೆಹ್ರಾ ಪುಣೆ ವಿರುದ್ಧ ಪಂದ್ಯದಲ್ಲಿ ಬೌಲಿಂಗ್‌ನಲ್ಲಿ ಏಳು ಎಸೆತಗಳನ್ನು ಎಸೆದು ಮೈದಾನ ತೊರೆದಿದ್ದರು. ಗಾಯಗೊಂಡಿರುವ ನೆಹ್ರಾ ಸೋಮವಾರದ ಪಂದ್ಯದಲ್ಲಿ ಆಡುವುದು ಅನುಮಾನವಾಗಿದೆ.

ಮತ್ತೊಂದೆಡೆ ಮುಂಬೈ ಇಂಡಿಯನ್ಸ್ ತಂಡ ಈಗಾಗಲೇ ಪ್ಲೇ-ಆಫ್‌ಗೆ ತೇರ್ಗಡೆಯಾಗಿದೆ. ಉಳಿದ ಲೀಗ್ ಪಂದ್ಯಗಳನ್ನು ಜಯಿಸಿ ಪ್ಲೇ-ಆಫ್‌ಗೆ ಸಿದ್ಧತೆ ಮಾಡುವ ವಿಶ್ವಾಸದಲ್ಲಿದೆ.

ಮುಂಬೈ ಇಂಡಿಯನ್ಸ್ ಭರ್ಜರಿ ಫಾರ್ಮ್‌ನಲ್ಲಿದ್ದು, ಡೆಲ್ಲಿ ವಿರುದ್ಧ ಕಳೆದ ರಾತ್ರಿ ನಡೆದಿದ್ದ ಪಂದ್ಯದಲ್ಲಿ 146 ರನ್ ಅಂತರದಿಂದ ಗೆಲುವು ಸಾಧಿಸಿ ಈ ವರ್ಷದ ಐಪಿಎಲ್‌ನಲ್ಲಿ ಪ್ಲೇ-ಆಫ್‌ಗೆ ತೇರ್ಗಡೆಯಾದ ಮೊದಲ ತಂಡ ಎನಿಸಿಕೊಂಡಿತ್ತು.

 ಲೆಂಡ್ಲ್ ಸಿಮೊನ್ಸ್(66) ಹಾಗೂ ಕೀರೊನ್ ಪೊಲಾರ್ಡ್(ಅಜೇಯ 63)ಮಿಂಚಿನ ಬ್ಯಾಟಿಂಗ್ ನೆರವಿನಿಂದ ಮುಂಬೈ ತಂಡ ಡೆಲ್ಲಿ ವಿರುದ್ಧ ಶನಿವಾರ ನಡೆದಿದ್ದ ಪಂದ್ಯದಲ್ಲಿ 212 ರನ್ ಗಳಿಸಿತ್ತು. ಪಾರ್ಥಿವ್ ಪಟೇಲ್ ಹಾಗೂ ನಿತೀಶ್ ರಾಣಾ ಕೂಡ ಭರ್ಜರಿ ಫಾರ್ಮ್‌ನಲ್ಲಿದ್ದಾರೆ. ನಾಯಕ ರೋಹಿತ್ ಶರ್ಮ ಬ್ಯಾಟಿಂಗ್‌ನಲ್ಲಿ ಕೊಡುಗೆ ನೀಡುತ್ತಿದ್ದಾರೆ. ಪಾಂಡ್ಯ ಸಹೋದರರಾದ -ಹಾರ್ದಿಕ್ ಹಾಗೂ ಕೃನಾಲ್ ಪಾಂಡ್ಯ ಸಂದರ್ಭೋಚಿತವಾಗಿ ಬ್ಯಾಟಿಂಗ್ ಮಾಡುತ್ತಿದ್ದಾರೆ.

 ಬೌಲಿಂಗ್ ವಿಭಾಗದಲ್ಲಿ ಹಿರಿಯ ಸ್ಪಿನ್ನರ್ ಹರ್ಭಜನ್ ಸಿಂಗ್ ಹಾಗೂ ಯುವ ಬೌಲರ್ ಕರ್ಣ್ ಶರ್ಮ ಡೆಲ್ಲಿ ವಿರುದ್ಧದ ಕಳೆದ ಪಂದ್ಯದಲ್ಲಿ ತಲಾ 3 ವಿಕೆಟ್‌ಗಳನ್ನು ಕಬಳಿಸಿದ್ದರು. ಮಿಚೆಲ್ ಮೆಕ್ಲಿನಘನ್ ಹಾಗೂ ಲಸಿತ್ ಮಾಲಿಂಗ ಕಳೆದ ಪಂದ್ಯದಲ್ಲಿ ವಿಕೆಟ್ ಪಡೆದಿದ್ದಾರೆ. ಜಸ್‌ಪ್ರೀತ್ ಬುಮ್ರಾ ಡೆತ್ ಬೌಲಿಂಗ್‌ನಲ್ಲಿ ರನ್ ನಿಯಂತ್ರಿಸಲು ಯಶಸ್ವಿಯಾಗುತ್ತಿದ್ದಾರೆ.

ಇಂದಿನ ಪಂದ್ಯ

ಮುಂಬೈ ಇಂಡಿಯನ್ಸ್-ಸನ್‌ರೈಸರ್ಸ್ ಹೈದರಾಬಾದ್

ಸ್ಥಳ: ಹೈದರಾಬಾದ್, ಸಮಯ: ರಾತ್ರಿ 8:00

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News