×
Ad

ಐಪಿಎಲ್‌ನ ಅಗ್ರ ಆರು ತಂಡಗಳ ಅವಕಾಶದ ಅವಲೋಕನ

Update: 2017-05-08 23:34 IST

ಕೋಲ್ಕತಾ, ಮೇ 8: ಹತ್ತನೆ ಆವೃತ್ತಿಯ ಐಪಿಎಲ್‌ನ ಲೀಗ್ ಹಂತದ ಪಂದ್ಯಗಳು ಕೊನೆಗೊಳ್ಳಲು ಇನ್ನು ಒಂದು ವಾರ ಬಾಕಿಯಿದೆ. ಮುಂಬೈ ಇಂಡಿಯನ್ಸ್ ತಂಡ ಮಾತ್ರ ಪ್ಲೇ-ಆಫ್ ಹಂತಕ್ಕೆ ತೇರ್ಗಡೆಯಾಗಿದ್ದು, ಇನ್ನು ನಾಲ್ಕು ತಂಡಗಳು ಮುಂದಿನ ಸುತ್ತಿಗೇರಲು ಪೈಪೋಟಿ ನಡೆಸುತ್ತಿವೆ. ಕಳೆದ ಪಂದ್ಯದಲ್ಲಿ ಆರ್‌ಸಿಬಿ ವಿರುದ್ಧ ಭರ್ಜರಿ ಜಯ ಸಾಧಿಸಿರುವ ಕೋಲ್ಕತಾ ನೈಟ್ ರೈಡರ್ಸ್ ತಂಡ ಪ್ಲೇ-ಆಫ್‌ಗೆ ತನ್ನ ಸ್ಥಾನವನ್ನು ಬಹುತೇಕ ಖಚಿತಪಡಿಸಿಕೊಂಡಿದೆ. ಕಿಂಗ್ಸ್ ಇಲೆವೆನ್ ಪಂಜಾಬ್‌ಗೆ ಪ್ಲೇ-ಆಫ್‌ಗೆ ತೇರ್ಗಡೆಯಾಗುವ ಅವಕಾಶವಿದೆ. ಆದರೆ, ಆ ತಂಡ ಗುಜರಾತ್ ಲಯನ್ಸ್ ವಿರುದ್ಧ ಸೋತಿರುವ ಕಾರಣ ಹಿನ್ನಡೆ ಅನುಭವಿಸಿದೆ. ಸನ್‌ರೈಸರ್ಸ್ ಹೈದರಾಬಾದ್ ತಂಡ ಮುಂಬೈ ವಿರುದ್ಧ ಸೋಮವಾರ ನಿರ್ಣಾಯಕ ಪಂದ್ಯ ಆಡಿದೆ. ಈ ಪಂದ್ಯದ ಫಲಿತಾಂಶ ಅಂಕಪಟ್ಟಿಯಲ್ಲಿ 2 ರಿಂದ 6ನೆ ಸ್ಥಾನದಲ್ಲಿರುವ ತಂಡದ ಮೇಲೆ ಪರಿಣಾಮಬೀರುವ ಸಾಧ್ಯತೆಯಿದೆ.

ಐಪಿಎಲ್ ಅಂಕಪಟ್ಟಿಯಲ್ಲಿ ಅಗ್ರ-6ರಲ್ಲಿ ತಂಡಗಳ ಅವಕಾಶದ ಬಗ್ಗೆ ಅವಲೋಕನ ಇಂತಿದೆ.

1. ಮುಂಬೈ ಇಂಡಿಯನ್ಸ್(12 ಪಂದ್ಯ, 9 ಜಯ, 3 ಸೋಲು, 18 ಅಂಕ)

 ಮುಂದಿನ ಪಂದ್ಯಗಳು: ಪಂಜಾಬ್(ಮೇ 11), ಕೋಲ್ಕತಾ(ಮೇ 13)

 ಮುಂಬೈ ತಂಡ ಈವರ್ಷದ ಐಪಿಎಲ್‌ನಲ್ಲಿ ಪ್ಲೇ-ಆಫ್‌ಗೆ ತಲುಪಿದ ಮೊದಲ ತಂಡ ಎನಿಸಿಕೊಂಡಿದೆ. ಒಂದು ವೇಳೆ ಉಳಿದ 2 ಪಂದ್ಯದಲ್ಲಿ ಜಯ ಸಾಧಿಸಿದರೆ ಅಂಕಪಟ್ಟಿಯಲ್ಲಿ ಅಗ್ರ-2ರಲ್ಲಿ ಸ್ಥಾನ ಪಡೆಯುತ್ತದೆ. ಆಗ ಕ್ವಾಲಿಫೈಯರ್-1ರಲ್ಲಿ ಆಡುವ ಅವಕಾಶ ಲಭಿಸುತ್ತದೆ.

2. ಕೋಲ್ಕತಾ ನೈಟ್ ರೈಡರ್ಸ್(12 ಪಂದ್ಯ, 8 ಜಯ, 4 ಸೋಲು, 16 ಅಂಕ)

ಮುಂದಿನ ಪಂದ್ಯಗಳು: ಪಂಜಾಬ್(ಮೇ 9), ಮುಂಬೈ (ಮೇ13)

ಉತ್ತಮ ರನ್‌ರೇಟ್ ಹೊಂದಿರುವ ಕೋಲ್ಕತಾ ಪ್ಲೇ-ಆಫ್‌ಗೆ ಏರುವುದು ನಿಶ್ಚಿತ. ಒಂದು ವೇಳೆ ಪಂಜಾಬ್ ವಿರುದ್ಧ ಜಯ ಸಾಧಿಸಿದರೆ ಪ್ಲೇ-ಆಫ್ ಸ್ಥಾನ ಖಚಿತವಾಗಲಿದೆ. ಒಂದು ವೇಳೆ ಎರಡೂ ಪಂದ್ಯಗಳನ್ನು ಸೋತರೆ, ಹೈದರಾಬಾದ್ ಹಾಗೂ ಪಂಜಾಬ್ ತಂಡಗಳು ಉಳಿದ ಪಂದ್ಯಗಳನ್ನು ದೊಡ್ಡ ಅಂತರದಲ್ಲಿ ಗೆಲ್ಲದಂತೆ ಪ್ರಾರ್ಥಿಸಬೇಕಾಗುತ್ತದೆ.

3. ರೈಸಿಂಗ್ ಪುಣೆ ಸೂಪರ್‌ಜೈಂಟ್(12 ಪಂದ್ಯ, 8 ಗೆಲುವು, 4 ಸೋಲು, 16 ಅಂಕಗಳು)

ಮುಂದಿನ ಪಂದ್ಯಗಳು: ಡೆಲ್ಲಿ(ಮೇ12), ಪಂಜಾಬ್(ಮೇ 14)

 ಸ್ಟೀವನ್ ಸ್ಮಿತ್ ಬಳಗ ಪ್ಲೇ-ಆಫ್‌ಗೆ ತಲುಪುವ ವಿಶ್ವಾಸದಲ್ಲಿದೆ. ಆದರೆ, ಕಳಪೆ ರನ್‌ರೇಟ್(-1.16) ಚಿಂತೆಯ ವಿಷಯವಾಗಿದೆ. ಕೋಲ್ಕತಾ ಒಂದು ಪಂದ್ಯದಲ್ಲಿ ಜಯ ಸಾಧಿಸಿದರೆ, ಪುಣೆಗೆ ಪಂಜಾಬ್ ವಿರುದ್ಧದ ಕೊನೆಯ ಪಂದ್ಯ ಅತ್ಯಂತ ನಿರ್ಣಾಯಕವಾಗಲಿದೆ.

4.ಸನ್‌ರೈಸರ್ಸ್ ಹೈದರಾಬಾದ್: 13 ಪಂದ್ಯ, 7 ಗೆಲುವು, 5 ಸೋಲು, 15 ಅಂಕ.

ಮುಂದಿನ ಪಂದ್ಯಗಳು: ಗುಜರಾತ್(ಮೇ 13)

 ಹಾಲಿ ಚಾಂಪಿಯನ್ ಹೈದರಾಬಾದ್ ತಂಡ ಪ್ಲೇ-ಆಫ್‌ಗೆ ತೇರ್ಗಡೆಯಾಗಲು ಉಳಿದೆರಡೂ ಪಂದ್ಯಗಳನ್ನು ಗೆಲ್ಲಲೇಬೇಕಾದ ಒತ್ತಡದಲ್ಲಿತ್ತು. ಇದೀಗ ಮುಂಬೈ ವಿರುದ್ಧ ಜಯ ಸಾಧಿಸಿರುವ ಹೈದರಾಬಾದ್ ತಂಡ ಪಂಜಾಬ್ ತಂಡ 3 ಪಂದ್ಯಗಳ ಪೈಕಿ ಒಂದರಲ್ಲಿ ಸೋಲುವುದನ್ನು ನಿರೀಕ್ಷಿಸುತ್ತ್ತಿದೆ.

5.ಕಿಂಗ್ಸ್ ಇಲೆವೆನ್ ಪಂಜಾಬ್: 11-ಪಂದ್ಯ, 5-ಗೆಲುವು, 6- ಸೋಲು, 10-ಅಂಕ.

ಮುಂದಿನ ಪಂದ್ಯಗಳು: ಕೋಲ್ಕತಾ(ಮೇ 9), ಮುಂಬೈ(ಮೇ 11), ಪುಣೆ(ಮೇ 14).

ಗುಜರಾತ್ ಲಯನ್ಸ್ ವಿರುದ್ಧ ರವಿವಾರ ನಡೆದಿದ್ದ ಪಂದ್ಯವನ್ನು ಸೋತಿರುವ ಪಂಜಾಬ್ ತಂಡ ನಾಕೌಟ್ ಹಂತಕ್ಕೇರುವ ಅವಕಾಶ ಲಭ್ಯವಾಗಲು ಉಳಿದ ಮೂರೂ ಪಂದ್ಯಗಳನ್ನು ಗೆಲ್ಲಲೇಬೇಕಾಗಿದೆ. ಒಂದು ವೇಳೆ ಪಂಜಾಬ್ ಎಲ್ಲ 3 ಪಂದ್ಯಗಳನ್ನು ಜಯಿಸಿದರೂ ಸನ್‌ರೈಸರ್ಸ್ ತಂಡ ಉಳಿದಿರುವ ಒಂದು ಪಂದ್ಯವನ್ನು ಸೋಲುವುದನ್ನು ನಿರೀಕ್ಷಿಸಬೇಕಾಗುತ್ತದೆ.

6.ಡೆಲ್ಲಿ ಡೇರ್ ಡೆವಿಲ್ಸ್: 11 ಪಂದ್ಯ, 4 ಗೆಲುವು, 7 ಸೋಲು, 8-ಅಂಕ

ಮುಂದಿನ ಪಂದ್ಯಗಳು: ಗುಜರಾತ್(ಮೇ10), ಪುಣೆ(ಮೇ 12), ಬೆಂಗಳೂರು(ಮೇ 14).

ಡೆಲ್ಲಿ ತಂಡ ನಾಕೌಟ್ ಹಂತಕ್ಕೇರುವ ಸ್ಪರ್ಧೆಯಲ್ಲಿ ಉಳಿಯಬೇಕಾದರೆ ಉಳಿದ 3 ಪಂದ್ಯಗಳನ್ನೂ ಜಯಿಸಬೇಕಿತ್ತು. ಆದರೆ ಹೈದರಾಬಾದ್ ತಂಡ ಮುಂಬೈ ವಿರುದ್ಧ ಜಯ ಸಾಧಿಸಿರುವ ಹಿನ್ನೆಲೆಯಲ್ಲಿ ಡೆಲ್ಲಿ ಸ್ಪರ್ಧೆಯಿಂದ ಹೊರಗುಳಿದಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News