×
Ad

ಶೂಟರ್‌ಗಳನ್ನು ವಿಮಾನ ನಿಲ್ದಾಣದಲ್ಲಿ ತಡೆಹಿಡಿದ ಕಸ್ಟಮ್ಸ್ ಅಧಿಕಾರಿಗಳು!

Update: 2017-05-09 21:44 IST

 ಹೊಸದಿಲ್ಲಿ, ಮೇ 9: ಒಲಿಂಪಿಯನ್ ಶೂಟರ್‌ಗಳಾದ ಗುರುಪ್ರೀತ್ ಸಿಂಗ್ ಹಾಗೂ ಕಿನನ್ ಚೆನೈ ಸಹಿತ ಇತರ 10 ಅಂತಾರಾಷ್ಟ್ರೀಯ ಶೂಟರ್‌ಗಳನ್ನು ಕಸ್ಟಮ್ಸ್ ಅಧಿಕಾರಿಗಳು ಇಂದಿರಾಗಾಂಧಿ ಇಂಟರ್‌ನ್ಯಾಶನಲ್ ಏರ್‌ಪೋರ್ಟ್‌ನಲ್ಲಿ ಸುಮಾರು 12 ಗಂಟೆಗೂ ಅಧಿಕ ಕಾಲ ಹಿಡಿದಿಟ್ಟುಕೊಂಡ ಘಟನೆ ಮಂಗಳವಾರ ನಡೆದಿದೆ.

ಸಿಪ್ರಸ್‌ನಲ್ಲಿ ಶೂಟಿಂಗ್ ವಿಶ್ವಕಪ್‌ನಲ್ಲಿ ಭಾಗವಹಿಸಿ ವಾಪಸಾಗುತ್ತಿದ್ದ ವೇಳೆ ಶೂಟರ್‌ಗಳನ್ನು ತಡೆದ ಕಸ್ಟಮ್ಸ್ ಅಧಿಕಾರಿಗಳು ಅವರ ಬಳಿಯಿದ್ದ ಶೂಟಿಂಗ್ ಗನ್‌ಗಳನ್ನು ವಶಪಡಿಸಿಕೊಂಡಿದ್ದರು. ಕಸ್ಟಮ್ಸ್ ವಿಭಾಗ ಶೂಟರ್‌ಗಳ ಗನ್‌ಗಳನ್ನು ತುಂಬಾ ಹೊತ್ತು ವಾಪಸ್ ನೀಡದೇ ಶೂಟರ್‌ಗಳನ್ನು ಆತಂಕಕ್ಕೆ ತಳ್ಳಿತ್ತು.

 ‘‘20 ಗಂಟೆ ವಿಮಾನದಲ್ಲಿ ಪ್ರಯಾಣಿಸಿ ಬೆಳಗ್ಗೆ 4 ಗಂಟೆಗೆ ದಿಲ್ಲಿ ವಿಮಾನ ನಿಲ್ದಾಣವನ್ನು ತಲುಪಿದ್ದೆವು. ನಮ್ಮ ಗನ್‌ಗಳನ್ನು ವಶಪಡಿಸಿಕೊಂಡಿದ್ದ ಕಸ್ಟಮ್ಸ್ ವಿಭಾಗ ಕಮಿಶನರ್ ಬರುವ ತನಕ ಕಾಯಿರಿ ಎಂದು ಹೇಳಿದ್ದರು. ಅವರು ಬೆಳಗ್ಗೆ 10 ಗಂಟೆ ಬರಬೇಕಿದ್ದವರು ಬಂದಿರಲಿಲ್ಲ. ಅಧಿಕಾರಿ ಯಾವಾಗ ಬರುತ್ತಾರೆಂದು ನಮಗೆ ಗೊತ್ತಿರಲಿಲ್ಲ. ನಮ್ಮನ್ನು ಏಕೆ ಹಿಡಿದಿಟ್ಟುಕೊಳ್ಳಲಾಗಿದೆ ಎಂದೇ ಗೊತ್ತಿರಲಿಲ್ಲ. ನಾವು ಅಂತಾರಾಷ್ಟ್ರೀಯ ಶೂಟರ್‌ಗಳಾಗಿದ್ದು, ವಿಶ್ವದೆಲ್ಲೆಡೆ ಪ್ರಯಾಣಿಸುತ್ತಿರುತ್ತೇವೆ. ನಾವು ವಿಮಾನ ಪ್ರಯಾಣದಿಂದ ಬಳಲಿದ್ದೆವು. ಈ ಬಗ್ಗೆ ಅಧಿಕಾರಿಗೆ ತಿಳಿಸಿದರೆ, ‘ನೀವು ತಿನ್ನದಿದ್ದರೆ ಸಾಯಿಯುವುದಿಲ್ಲ’’ ಎಂದು ಉದ್ದಟನದ ಉತ್ತರ ನೀಡಿದ್ದರು. ನಾವು ಸ್ಟಾಂಪ್ ಇದ್ದ ಪತ್ರಗಳನ್ನು, ನಮ್ಮ ಗನ್‌ಗಳ ಸಿರೀಯಲ್ ನಂಬರ್ ನೀಡಿದರೂ ನಮ್ಮ ಮೇಲೆ ಅವರಿಗೆ ನಂಬಿಕೆ ಬರಲಿಲ್ಲ’’ ಎಂದು ಶೂಟರ್‌ವೊಬ್ಬರು ಹೇಳಿದ್ದಾರೆ.

ಎನ್‌ಆರ್‌ಎಐ ವಿರುದ್ಧ ಬಿಂದ್ರಾ ಆಕ್ರೋಶ:

ಹೊಸದಿಲ್ಲಿ, ಮೇ 9: ಐಜಿ ಏರ್‌ಪೋರ್ಟ್‌ನಲ್ಲಿ ಕಸ್ಟಮ್ಸ್ ಅಧಿಕಾರಿಗಳಿಂದ ಕೆಲವು ಗಂಟೆಗಳ ಕಾಲ ಬಂಧಿಲಸ್ಪಟ್ಟಿದ್ದ ಶೂಟರ್‌ಗಳ ನೆರವಿಗೆ ಧಾವಿಸದ ಭಾರತದ ರೈಫಲ್ ಸಂಸ್ಥೆ(ಎನ್‌ಆರ್‌ಎಐ) ವಿರುದ್ಧ ಮಾಜಿ ಶೂಟರ್ ಅಭಿನವ್ ಬಿಂದ್ರಾ ಕಿಡಿಕಾರಿದ್ದಾರೆ.

‘‘ನಮ್ಮ ಶೂಟರ್‌ಗಳನ್ನು ದಿಲ್ಲಿ ವಿಮಾನ ನಿಲ್ದಾಣದಲ್ಲಿ ಬಂಧಿಸಿರುವ ಸುದ್ದಿ ಕೇಳಿ ಬೇಸರವಾಯಿತು. ಕೆಲವು ಅಥ್ಲೀಟ್‌ಗಳ ಬಳಿ ಮಾತನಾಡಿದಾಗ ರಾಷ್ಟ್ರೀಯ ಶೂಟಿಂಗ್ ಫೆಡರೇಶನ್‌ನಿಂದ ನೆರವು ಸಿಗದಿರುವುದು ಗೊತ್ತಾಯಿತು. ಶೂಟರ್‌ಗಳು ನಮ್ಮ ದೇಶದ ರಾಯಭಾರಿಗಳು, ಅವರನ್ನು ಈರೀತಿ ನಡೆಸಿಕೊಳ್ಳಬಾರದಿತ್ತು. ಕ್ರಿಕೆಟ್ ಆಟಗಾರರಿಗೆ ಯಾವತ್ತಾದರೂ ಈರೀತಿ ಆಗಿದೆಯೇ’’ ಎಂದು ಬಿಂದ್ರಾ ಪ್ರಶ್ನಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News