ಮೆಸ್ಸಿಯನ್ನೇ ಹೋಲುವ ಇರಾನಿ ವಿದ್ಯಾರ್ಥಿ ಜೈಲು ಪಾಲು!

Update: 2017-05-09 16:26 GMT

ಟೆಹ್ರಾನ್, ಮೇ 9: ಕ್ರೀಡಾಜಗತ್ತಿನ ಹೀರೋ ಲಿಯೊನೆಲ್ ಮೆಸ್ಸಿಯನ್ನು ಹೋಲುವ ಇರಾನ್‌ನ ವಿದ್ಯಾರ್ಥಿ ರೆಝಾ ಪರಾಸ್‌ಟೆಶ್ ಈ ವಾರ ಸಾರ್ವಜನಿಕ ಆದೇಶವನ್ನು ಅಸ್ತವ್ಯಸ್ತಗೊಳಿಸಿದ ಆರೋಪದಲ್ಲಿ ಜೈಲು ಪಾಲಾಗಿದಾರೆೆ.

ಪಶ್ಚಿಮ ನಗರದಲ್ಲಿ ವಾರಾಂತ್ಯದಲ್ಲಿ ಹಲವು ಜನರು ಮೆಸ್ಸಿಯನ್ನೇ ಹೋಲುವ ರೆಝಾರೊಂದಿಗೆ ಸೆಲ್ಫಿ ತೆಗೆಯಲು ಮುಗಿಬಿದ್ದಿದ್ದರು. ಇದರಿಂದಾಗಿ ಟ್ರಾಫಿಕ್ ಜಾಮ್ ಉಂಟಾಗಿತ್ತು. ಟ್ರಾಫಿಕ್ ನಿಯಂತ್ರಿಸಲು ಸ್ಥಳಕ್ಕೆ ಧಾವಿಸಿದ ಪೊಲಿಸರು ರೆಝಾ ಅವರನ್ನು ಠಾಣೆಗೆ ಕರೆದೊಯ್ದರು ಹಾಗೂ ಅವರ ಕಾರನ್ನು ವಶಕ್ಕೆ ಪಡೆದುಕೊಂಡರು. ಟ್ರಾಫಿಕ್ ಅವ್ಯವಸ್ಥೆಯನ್ನು ಸರಿಪಡಿಸಿದ್ದರು.

 ರೆಝಾರ ತಂದೆ ಫುಟ್ಬಾಲ್ ಅಭಿಮಾನಿಯಾಗಿದ್ದು, 25ರ ಹರೆಯದ ತನ್ನ ಪುತ್ರನಿಗೆ ಮೆಸ್ಸಿ ಧರಿಸುವ ಬಾರ್ಸಿಲೋನದ 10 ನಂಬರ್‌ನ ಜರ್ಸಿಯನ್ನು ಧರಿಸಿ ಫೋಟೊ ತೆಗೆಯುವಂತೆ ಬಲವಂತ ಮಾಡಿದ್ದಲ್ಲದೆ, ಆ ಫೋಟೊಗಳನ್ನು ಕ್ರೀಡಾ ವೆಟ್‌ಸೈಟ್ ಕಳುಹಿಸಲು ಪ್ರೇರೇಪಿಸಿದ್ದರು.

‘‘ತಂದೆಯ ಮಾತು ಕೇಳಿ ಒಂದು ದಿನ ಮೆಸ್ಸಿಯ ಜರ್ಸಿ ಧರಿಸಿದ್ದ ತನ್ನ ಫೋಟೊವನ್ನು ಕ್ರೀಡಾ ವೆಬ್‌ಸೈಟ್‌ಗೆ ಕಳುಹಿಸಿದ್ದೆ. ವೆಬ್‌ಸೈಟ್‌ನವರು ತನಗೆ ತಕ್ಷಣವೆ ಸಂದರ್ಶನಕ್ಕಾಗಿ ಕರೆ ಮಾಡಿದ್ದರು’’ ಎಂದು ರೆಝಾ ಹೇಳಿದ್ದಾರೆ.

 ಮೆಸ್ಸಿಯಂತೆಯೇ ಬಾರ್ಸಿಲೋನದ ಜರ್ಸಿಯನ್ನು ಧರಿಸಿ ಓಡಾಡುತ್ತಿರುವ ರೆಝಾ ಅವರು ಮೆಸ್ಸಿಯಂತೆಯೇ ಕೇಶವಿನ್ಯಾಸ ಮಾಡಿಕೊಂಡಿದ್ದಾರೆ. ಇದೀಗ ರೆಝಾಗೆ ಭಾರೀ ಬೇಡಿಕೆ ವ್ಯಕ್ತವಾಗಿದ್ದು, ಮಾಧ್ಯಮ ಸಂದರ್ಶನ ಹಾಗೂ ಮಾಡೆಲಿಂಗ್ ಒಪ್ಪಂದಗಳು ಅವರನ್ನು ಹುಡುಕಿಕೊಂಡು ಬರುತ್ತಿವೆ.

‘‘ಇದೀಗ ಜನರು ನನ್ನನ್ನು ಇರಾನ್‌ನ ಮೆಸ್ಸಿಯಂತೆ ಕಾಣುತ್ತಿದ್ದಾರೆ. ಅವರನ್ನೇ ಅನುಕರಿಸುವಂತೆ ಒತ್ತಾಯಿಸುತ್ತಿದ್ದಾರೆ. ನಾನು ಹೊರಗಡೆ ಹೋದಾಗಲೆಲ್ಲಾ ಜನರು ನನ್ನನ್ನು ಮುತ್ತಿಗೆ ಹಾಕಿ ಸೆಲ್ಫಿ ತೆಗೆದುಕೊಳ್ಳುತ್ತಾರೆ. ಇರಾನ್ ಜನರು ನನ್ನನ್ನು ನೋಡಿ ಸಂತೋಷಪಡುತ್ತಿರುವುದು ನನಗೆ ತುಂಬಾ ಖುಷಿಯಾಗುತ್ತಿದೆ. ಆ ಸಂತೋಷವೇ ನನಗೆ ಹೆಚ್ಚಿನ ಶಕ್ತಿ ನೀಡುತ್ತಿದೆ’’ ಎಂದು ರೆಝಾ ಹೇಳಿದ್ದಾರೆ.

ರೆಝಾಗೆ ಫುಟ್ಬಾಲ್ ಎಂದರೆ ತುಂಬಾ ಇಷ್ಟ. ಆದರೆ, ಅವರು ಈತನಕ ವೃತ್ತಿಪರ ಫುಟ್ಬಾಲ್ ಆಡಿಲ್ಲ. ಅವರು ಕೆಲವು ಟ್ರಿಕ್ಸ್‌ನತ್ತ ಗಮನ ನೀಡಿದರೆ ಉತ್ತಮ ಆಟಗಾರನಾಗಬಹುದು.

2014ರ ವಿಶ್ವಕಪ್‌ನಲ್ಲಿ ಇರಾನ್ ಹಾಗೂ ಅರ್ಜೆಂಟೀನ ನಡುವಿನ ಕೊನೆಯ ಪಂದ್ಯದಲ್ಲಿ ಮೆಸ್ಸಿ 91ನೆ ನಿಮಿಷದಲ್ಲಿ ಗೋಲು ಬಾರಿಸಿ ಇರಾನ್‌ಗೆ ಶಾಕ್ ನೀಡಿದ್ದರು. ಪಂದ್ಯದ ಬಳಿಕ ನನಗೆ ಫೋನ್ ಮಾಡಿದ್ದ ತಂದೆ ಇಂದು ರಾತ್ರಿ ಮನೆಯಿಂದ ಹೊರಗೆ ಬರಬೇಡ...ನೀನು ಇರಾನ್ ವಿರುದ್ಧ ಗೋಲು ಬಾರಿಸಿದ್ದೀಯ’’ ಎಂದು ತಮಾಷೆ ಮಾಡಿದ್ದರು ಎಂದು ರೆಝಾ ಹಳೆಯ ಘಟನೆಯನ್ನು ನೆನಪಿಸಿಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News