ಗುಜರಾತ್-ಡೆಲ್ಲಿ ತಂಡಗಳಿಗೆ ಪ್ರತಿಷ್ಠೆಯ ಪಂದ್ಯ
ಕಾನ್ಪುರ, ಮೇ 9: ಹತ್ತನೆ ಆವೃತ್ತಿಯ ಐಪಿಎಲ್‌ನಲ್ಲಿ ಪ್ಲೇ-ಆಫ್ ಸ್ಪರ್ಧೆಯಿಂದ ಬಹುತೇಕ ಹೊರಬಿದ್ದಿರುವ ಗುಜರಾತ್ ಲಯನ್ಸ್ ಹಾಗೂ ಡೆಲ್ಲಿ ಡೇರ್ ಡೆವಿಲ್ಸ್ ತಂಡಗಳು ಬುಧವಾರ ಇಲ್ಲಿ ಪ್ರತಿಷ್ಠೆಯ ಪಂದ್ಯವನ್ನಾಡಲಿವೆ.
11 ಪಂದ್ಯಗಳಲಿ 8 ಅಂಕವನ್ನು ಗಳಿಸಿದ್ದ ಡೆಲ್ಲಿ ತಂಡ ಪ್ಲೇ-ಆಫ್‌ಗೆ ತಲುಪುವ ವಿಶ್ವಾಸದಲ್ಲಿತ್ತು. ಆದರೆ, ಸೋಮವಾರ ನಡೆದಿದ್ದ ಪಂದ್ಯದಲ್ಲಿ ಹೈದರಾಬಾದ್ ತಂಡ ಮುಂಬೈ ತಂಡವನ್ನು ಮಣಿಸಿ 15 ಅಂಕ ಗಳಿಸಿದ ಹಿನ್ನೆಲೆಯಲ್ಲಿ ಡೆಲ್ಲಿಯ ಪ್ಲೇ-ಆಫ್ ಕನಸು ಭಗ್ನಗೊಂಡಿದೆ. ಗುಜರಾತ್ ತಂಡ ದುರ್ಬಲ ಬೌಲಿಂಗ್‌ನಿಂದಾಗಿ ಟೂರ್ನಿಯಲ್ಲಿ ಕಳಪೆ ಪ್ರದರ್ಶನ ನೀಡಿದ್ದು, 4ರಲ್ಲಿ ಜಯ, 8ರಲ್ಲಿ ಸೋಲನುಭವಿಸಿ ಅಂಕಪಟ್ಟಿಯಲ್ಲಿ ಆರನೆ ಸ್ಥಾನದಲ್ಲಿದೆ.
ಇದೀಗ ಉಭಯ ತಂಡಗಳು ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನವನ್ನು ತಪ್ಪಿಸಿಕೊಳ್ಳುವ ಉದ್ದೇಶದಿಂದ ಸ್ಪರ್ಧೆಗೆ ಇಳಿಯಲಿವೆ. ಕಳೆದ ಪಂದ್ಯದಲ್ಲಿ ಎರಡೂ ತಂಡಗಳು ಮುಖಾಮುಖಿಯಾಗಿದ್ದಾಗ ಡೆಲ್ಲಿ ತಂಡ ಗುಜರಾತ್‌ನ್ನು ತವರು ಪಟ್ಟಣ ದಿಲ್ಲಿಯಲ್ಲಿ ಏಳು ವಿಕೆಟ್‌ಗಳಿಂದ ಮಣಿಸಿತ್ತು. ರಿಷಬ್ ಪಂತ್ 43 ಎಸೆತಗಳಲ್ಲಿ 97 ರನ್ ಗಳಿಸಿ ಐಪಿಎಲ್‌ನಲ್ಲಿ ಗರಿಷ್ಠ ಮೊತ್ತ ಚೇಸಿಂಗ್ ಮಾಡಲು ನೆರವಾಗಿದ್ದರು.ಆ ಪಂದ್ಯದಲ್ಲಿ ಸಂಜು ಸ್ಯಾಮ್ಸನ್ 31 ಎಸೆತಗಳಲ್ಲಿ 61 ರನ್ ಗಳಿಸಿದ್ದರು. ಸ್ಯಾಮ್ಸನ್ ಒಟ್ಟು 374 ರನ್ ಗಳಿಸಿ ಡೆಲ್ಲಿಯ ಪರ ಗರಿಷ್ಠ ಸ್ಕೋರ್ ದಾಖಲಿಸಿದ್ದಾರೆ. ಆದರೆ, ತಂಡದ ಉಳಿದ ದಾಂಡಿಗರು ದೊಡ್ಡ ಕೊಡುಗೆ ನೀಡಲು ವಿಫಲರಾಗಿದ್ದಾರೆ.
ಅಸ್ಥಿರ ಪ್ರದರ್ಶನವು ಟೂರ್ನಿಯಲ್ಲಿ ಡೆಲ್ಲಿ ತಂಡದ ಪ್ಲೇ-ಆಫ್ ಅವಕಾಶವನ್ನು ಕ್ಷೀಣಿಸುವಂತೆ ಮಾಡಿದೆ. ತವರು ಮೈದಾನ ಫಿರೋಝ್ ಶಾ ಕೋಟ್ಲಾದಲ್ಲಿ ಗುಜರಾತ್ ವಿರುದ್ಧ 208 ರನ್ ಗುರಿಯನ್ನು 2.3 ಓವರ್‌ಗಳು ಬಾಕಿ ಇರುವಾಗಲೇ ಯಶಸ್ವಿಯಾಗಿ ಬೆನ್ನಟ್ಟಿದ್ದ ಡೆಲ್ಲಿ ಅದೇ ಸ್ಟೇಡಿಯಂನಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ 212 ರನ್ ಚೇಸಿಂಗ್‌ನ ವೇಳೆ 13.4 ಓವರ್‌ಗಳಲ್ಲಿ 66 ರನ್‌ಗೆ ಆಲೌಟಾಗಿತ್ತು. ಗುಜರಾತ್ ವಿರುದ್ಧ ಆರ್ಭಟಿದ್ದ ರಿಷಬ್ ಪಂತ್ ಹಾಗೂ ಸಂಜು ಸ್ಯಾಮ್ಸನ್ ಮುಂಬೈ ವಿರುದ್ಧದ ಪಂದ್ಯದಲ್ಲಿ ಶೂನ್ಯಕ್ಕೆ ಔಟಾಗಿದ್ದರು.
ಡೆಲ್ಲಿ ತಂಡದ ಅಗ್ರ ಕ್ರಮಾಂಕದಲ್ಲಿ ಡೇವಿಡ್ ವಾರ್ನರ್, ಎಬಿಡಿವಿಲಿಯರ್ಸ್, ಹಾಶಿಮ್ ಅಮ್ಲ್ರರಂತಹ ವಿದೇಶಿ ಆಟಗಾರರ ಕೊರತೆಯಿತ್ತು.
ಈ ವರ್ಷದ ಐಪಿಎಲ್‌ನಲ್ಲಿ ಡೆಲ್ಲಿ ತಂಡದ ವೇಗದ ಬೌಲಿಂಗ್ ವಿಭಾಗ ಮೇಲ್ನೋಟಕ್ಕೆ ಬಲಿಷ್ಠವಾಗಿತ್ತು. ಪ್ಯಾಟ್ ಕಮಿನ್ಸ್, ಕಾಗಿಸೊ ರಬಾಡ, ಮುಹಮ್ಮದ್ ಶಮಿ, ಕ್ರಿಸ್ ವೋಕ್ಸ್, ಕ್ರಿಸ್ ಮೊರಿಸ್ ಹಾಗೂ ಕೋರಿ ಆ್ಯಂಡರ್ಸನ್ ತಂಡದಲ್ಲಿದ್ದರು. ಆದಾಗ್ಯೂ ಡೆಲ್ಲಿ ತಂಡ ಎರಡು ಬಾರಿ ಎದುರಾಳಿ ತಂಡಕ್ಕೆ 200ಕ್ಕೂ ಅಧಿಕ ರನ್ ಬಿಟ್ಟುಕೊಟ್ಟಿತ್ತು. ನಾಯಕನಾಗಿ ಝಹೀರ್ ಖಾನ್ ವಿಫಲರಾದರು. ಝಹೀರ್ ಗಾಯಗೊಂಡಿದ್ದಾಗ ತಂಡವನ್ನು ನಾಯಕನಾಗಿ ಮುನ್ನಡೆಸಿದ್ದ ಕರುಣ್ ನಾಯರ್ ಸಂಪೂರ್ಣ ವಿಫಲರಾಗಿದ್ದರು.
ಇಂದಿನ ಪಂದ್ಯ
ಡೆಲ್ಲಿ ಡೇರ್ ಡೆವಿಲ್ಸ್-ಗುಜರಾತ್ ಲಯನ್ಸ್
ಸ್ಥಳ: ಕಾನ್ಪುರ, ಸಮಯ: ರಾತ್ರಿ 8:00