ಹಾಲೆಂಡ್ ಫುಟ್ಬಾಲ್ ತಂಡಕ್ಕೆ ಡಿಕ್ ಅಡ್ವೊಕಾಟ್ ಕೋಚ್
ಆ್ಯಮ್‌ಸ್ಟರ್‌ಡಮ್, ಮೇ 9: ಹಾಲೆಂಡ್ ತಂಡ ಮುಂಬರುವ ಫಿಫಾ ವಿಶ್ವಕಪ್‌ನಲ್ಲಿ ಅರ್ಹತೆ ಗಿಟ್ಟಿಸಿಕೊಳ್ಳಲು ಅನುಕೂಲವಾಗುವಂತೆ ಡಿಕ್ ಅಡ್ವೊಕಾಟ್ ಅವರನ್ನು ತಂಡದ ನೂತನ ಕೋಚ್ ಆಗಿ ಆಯ್ಕೆ ಮಾಡಲಾಗಿದೆ.
69ರ ಪ್ರಾಯದ ಅಡ್ವೊಕಾಟ್ ಹಾಗೂ ಡಚ್ ಲೆಜಂಡ್ ಗುಲಿಟ್ ವರ್ಷಾಂತ್ಯದ ತನಕ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಇದೊಂದು ಕಿರು ಅವಧಿಯ ಒಪ್ಪಂದವಾಗಿದೆ ಎಂದು ಫುಟ್ಬಾಲ್ ಫೆಡರೇಶನ್ ಮಂಗಳವಾರ ತಿಳಿಸಿದೆ.
ಶಿಸ್ತಿನ ಸಿಪಾಯಿಯಾಗಿರುವ ಅಡ್ವೊಕಾಟ್ ಮೂರನೆ ಬಾರಿ ಹಾಲೆಂಡ್‌ಗೆ ಕೋಚ್ ಆಗಿ ವಾಪಸಾಗಿದ್ದಾರೆ. ಮಾರ್ಚ್‌ನಲ್ಲಿ ನಡೆದಿದ್ದ ವಿಶ್ವಕಪ್ ಅರ್ಹತಾ ಪಂದ್ಯದಲ್ಲಿ ಡಚ್ ತಂಡ ಬಲ್ಗೇರಿಯ ವಿರುದ್ಧ 0-2 ಅಂತರದಿಂದ ಸೋತ ಬಳಿಕ ಡ್ಯಾನಿ ಬ್ಲೈಂಡ್‌ರನ್ನು ಕೋಚ್ ಹುದ್ದೆಯಿಂದ ಉಚ್ಚಾಟಿಸಲಾಗಿದ್ದು, ಅಡ್ವೊಕಾಟ್ ಅವರು ಬ್ಲೈಂಡ್ ಬದಲಿಗೆ ಆಯ್ಕೆಯಾಗಿದ್ದಾರೆ.
ಬಲ್ಗೇರಿಯ ವಿರುದ್ಧ ಸೋತ ಬಳಿಕ ಹಾಲೆಂಡ್ ತಂಡ 2019ರಲ್ಲಿ ರಶ್ಯದಲ್ಲಿ ನಡೆಯಲಿರುವ ವಿಶ್ವಕಪ್‌ಗೆ ಅರ್ಹತೆ ಗಿಟ್ಟಿಸಿಕೊಳ್ಳುವ ವಿಶ್ವಾಸಕ್ಕೆ ಧಕ್ಕೆ ಉಂಟಾಗಿತ್ತು.
ಹಾಲೆಂಡ್ ತಂಡ ಪವಾಡಸದೃಶವಾಗಿ ವಿಶ್ವಕಪ್‌ಗೆ ಅರ್ಹತೆ ಗಿಟ್ಟಿಸಿಕೊಂಡರೆ ಅಡ್ವೊಕಾಟ್ ಹಾಗೂ ಗುಲಿಟ್‌ರ ಒಪ್ಪಂದ ವಿಸ್ತರಣೆಯಾಗಬಹುದು.
ಯುಎಇ, ದಕ್ಷಿಣ ಕೊರಿಯ, ರಶ್ಯ, ಸರ್ಬಿಯ ಹಾಗೂ ಬೆಲ್ಜಿಯಂ ತಂಡಗಳಿಗೆ ಕೋಚ್ ನೀಡಿರುವ ಅಡ್ವೊಕೊಟ್ ಡಚ್ ತಂಡಕ್ಕೆ 1992ರಿಂದ 94 ಹಾಗೂ 2002ರಿಂದ 04ರ ತನಕ ಕೋಚ್ ಆಗಿದ್ದರು.
ವಿಶ್ವಕಪ್‌ನಲ್ಲಿ ಮೂರು ಬಾರಿ ರನ್ನರ್‌ಅಪ್ ಆಗಿರುವ ಹಾಲೆಂಡ್ ಇತ್ತೀಚೆಗಿನ ದಿನಗಳಲ್ಲಿ ಕಠಿಣ ಪರಿಸ್ಥಿತಿ ಎದುರಿಸುತ್ತಿದ್ದು, ಫ್ರಾನ್ಸ್‌ನಲ್ಲಿ 2016ರಲ್ಲಿ ನಡೆದಿದ್ದ ಯುರೋ ಕಪ್‌ಗೆ ಅರ್ಹತೆ ಪಡೆಯಲು ವಿಫಲವಾಗಿತ್ತು. ಇದೀಗ ವಿಶ್ವಕಪ್‌ನಿಂದ ದೂರ ಉಳಿಯುವ ಭೀತಿಯಲ್ಲಿದೆ